

ರಾಂಚಿ: ಆರ್. ಅಶ್ವಿನ್ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ನ 2ನೇ ಇನಿಂಗ್ಸ್ನಲ್ಲಿ 5 ವಿಕೆಟ್ ಕಬಳಿಸುವ ಮೂಲಕ ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಎನಿಸಿದರು. ಅವರು ಕನ್ನಡಿಗ ಅನಿಲ್ ಕುಂಬ್ಳೆ ಸಾಧನೆಯನ್ನು ಹಿಂದಿಕ್ಕಿದರು.
ಕುಂಬ್ಳೆ 63 ಟೆಸ್ಟ್ಗಳಲ್ಲಿ 350 ವಿಕೆಟ್ ಕಬಳಿಸಿದ್ದರೆ, ಅಶ್ವಿನ್ (354) 59 ಟೆಸ್ಟ್ಗಳಲ್ಲೇ ಇದನ್ನು ಮೀರಿಸಿದ್ದಾರೆ. ಹರ್ಭಜನ್ ಸಿಂಗ್ 265 ಮತ್ತು ಕಪಿಲ್ ದೇವ್ 219 ವಿಕೆಟ್ ಕಬಳಿಸಿರುವುದು ನಂತರದ ಉತ್ತಮ ಸಾಧನೆಗಳಾಗಿವೆ. ಇದೇ ವೇಳೆ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ಪರ ಗರಿಷ್ಠ 35 ಬಾರಿ 5 ವಿಕೆಟ್ ಗೊಂಚಲು ಪಡೆದ ಅನಿಲ್ ಕುಂಬ್ಳೆ ಸಾಧನೆಯನ್ನೂ ಸರಿಗಟ್ಟಿದರು. ಅಶ್ವಿನ್ಗೆ ಭಾರತದಲ್ಲಿ ಇದು 27ನೇ 5 ವಿಕೆಟ್ ಗೊಂಚಲು ಆಗಿದೆ.
ಆರ್. ಅಶ್ವಿನ್ (37 ವರ್ಷ 159 ದಿನ) ಭಾರತ ಪರ ಟೆಸ್ಟ್ನಲ್ಲಿ 5 ವಿಕೆಟ್ ಗೊಂಚಲು ಪಡೆದ 2ನೇ ಹಿರಿಯ ಬೌಲರ್ ಎನಿಸಿದರು. ವಿನೂ ಮಂಕಡ್ (37 ವರ್ಷ, 306 ದಿನ) ಅತಿ ಹಿರಿಯರೆನಿಸಿದ್ದಾರೆ.
ಅಶ್ವಿನ್ ಭಾರತದಲ್ಲಿ 5 ವಿಕೆಟ್ ಗೊಂಚಲು ಪಡೆದ ಭಾರತದ 12ನೇ ತಾಣ ರಾಂಚಿ. ಒಟ್ಟಾರೆಯಾಗಿ ಇದು ಅವರು 5 ವಿಕೆಟ್ ಗೊಂಚಲು ಪಡೆದ 19ನೇ ಸ್ಟೇಡಿಯಂ ಆಗಿದೆ. ಮುರಳೀಧರನ್ (25), ಶೇನ್ ವಾರ್ನ್ (20) ಮತ್ತು ವಾಸಿಂ ಅಕ್ರಮ್ (20) ಮಾತ್ರ ಇದಕ್ಕಿಂತ ಹೆಚ್ಚು ತಾಣದಲ್ಲಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ.