

ಹೊಸದಿಲ್ಲಿ: ದೆಹಲಿ ಪೊಲೀಸರ ವಿಶೇಷ ಸೆಲ್ ನಿಷೇಧಿತ ಸಂಘಟನೆಯ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾದ (SIMI) ಸದಸ್ಯ ಹನೀಫ್ ಶೇಕ್ನನ್ನು (47) ಇದೀಗ ಸೆರೆಹಿಡಿದಿದ್ದು, ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಸುಮಾರು 22 ವರ್ಷಗಳಿಂದ ತಲೆಮರಿಸಿಕೊಂಡು ಓಡಾಡುತ್ತಿದ್ದ ದ ಮೋಸ್ಟ್ ವಾಂಟೆಡ್ ಉಗ್ರಗಾಮಿ ಒಂದೇ ಒಂದು ಸುಳಿವುನಿಂದ ಈಗ ದೆಹಲಿ ಪೊಲೀಸರ ಅತಿಥಿಯಾಗಿದ್ದಾನೆ.
ಇದನ್ನೂ ಓದಿ: ಆರೋಗ್ಯ ಪ್ರಯೋಗಾಲಯ ಸಾರ್ವಜನಿಕ ಸೇವೆಗೆ ಸಜ್ಜು
ದೆಹಲಿ ಪೊಲೀಸರಿಂದ ಅತ್ಯಂತ ಕುಖ್ಯಾತ ಮತ್ತು ಬೇಕಾಗಿರುವ ಸಿಮಿ ಭಯೋತ್ಪಾದಕ ಎಂದು ಗುರತಾಗಿದ್ದ ಹನೀಫ್ ಶೇಖ್, ಮೊಹಮ್ಮದ್ ಹನೀಫ್ ಮತ್ತು ಹನೀಫ್ ಹುದಾಯಿ ಎಂಬ ನಾನಾ ಹೆಸರುಗಳಿಂದ ಈತ ಕರೆಯಲ್ಪಟ್ಟಿದ್ದ. 22 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತ 2002ರಲ್ಲಿ ಘೋಷಿತ ಅಪರಾಧಿ ಎಂದು ಘೋಷಿಸಲಾಯಿತು.
2001ರಲ್ಲಿ ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ಈ ಉಗ್ರಗಾಮಿ ವಿರುದ್ಧ ದೇಶದ್ರೋಹದ ಆರೋಪ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯಡಿ ಅಪರಾಧಗಳ ಮೇಲೆ ಪ್ರಕರಣ ದಾಖಲಾಗಿತ್ತು. ಪೊಲೀಸರ ಪ್ರಕಾರ, ಹನೀಫ್ ಶೇಖ್ ಸಿಮಿ ಅಧೀನದಲ್ಲಿರುವ 'ಇಸ್ಲಾಮಿಕ್ ಮೂವ್‌ಮೆಂಟ್' ನಿಯತಕಾಲಿಕದ ಸಂಪಾದಕನಾಗಿದ್ದು, ನಿಷೇಧಿತ ಸಂಘಟನೆಗೆ ಹೆಚ್ಚಿನ ಸದಸ್ಯರನ್ನು ಸೇರಿಸುವಲ್ಲಿ ತೊಡಗಿಸಿಕೊಂಡಿದ್ದ. ಆತನ ಗುರುತು ಪತ್ತೆ ಹಚ್ಚಲು ಪೊಲೀಸರಿಗೆ ಮೊದ ಮೊದಲು ಸಾಧ್ಯವಾಗಲಿಲ್ಲ. ಆದರೆ, ಸಿಕ್ಕ ಏಕೈಕ ಸುಳಿವು ಎಂದರೆ ಪತ್ರಿಕೆಯಲ್ಲಿ ಮುದ್ರಿಸಲಾದ 'ಹನೀಫ್ ಹುದಾಯಿ' ಎಂಬ ಹೆಸರು.
ದೆಹಲಿ ಪೊಲೀಸರ ದಕ್ಷಿಣ ರೇಂಜ್ ಸ್ಪೆಷಲ್ ಸೆಲ್ ನಾಲ್ಕು ವರ್ಷಗಳಿಂದ ಹನೀಫ್ ಶೇಕ್ನನ್ನು ಬಂಧಿಸಲು ಪ್ರಯತ್ನಿಸುತ್ತಿತ್ತು. ಪೊಲೀಸರ ಪ್ರಕಾರ, ಮಹಾರಾಷ್ಟ್ರ, ಮಧ್ಯಪ್ರದೇಶ, ದೆಹಲಿ, ಕರ್ನಾಟಕ ಮತ್ತು ಕೇರಳದಲ್ಲಿ ಸಿಮಿ ಸಭೆಗಳಲ್ಲಿ ಪಾಲ್ಗೊಳ್ಳುವಲ್ಲಿ ಹನೀಫ್ ಶೇಖ್ ಪ್ರಮುಖ ಪಾತ್ರ ವಹಿಸಿದ್ದ. ಆದರೆ, ನಿಷೇಧಿತ ಸಂಘಟನೆಯ ಚಟುವಟಿಕೆಗಳ ಮೇಲೆ ಪೊಲೀಸರು ಕಡಿವಾಣ ಹಾಕಿದಾಗಲೆಲ್ಲ ಹನೀಫ್ ಪೊಲೀಸರ ಕೈಯಿಂದ ಜಾರಿಕೊಳ್ಳುತ್ತಿದ್ದ. ಶೇಖ್ನ ಬಂಧಿಸಲು ದೆಹಲಿ ಪೊಲೀಸರ ದಕ್ಷಿಣ ರೇಂಜ್ ಸ್ಪೆಷಲ್ ಸೆಲ್ ವಿವಿಧ ರಾಜ್ಯಗಳಿಂದ ಆತನ ಬಗ್ಗೆ ಮಾಹಿತಿ ಸಂಗ್ರಹಿಸಲು ಆರಂಭಿಸಿತು. ಆತನ ಸಹಚರರನ್ನು ಪತ್ತೆಹಚ್ಚಲು ತಂಡವು ತಮ್ಮ ಮಾಹಿತಿದಾರರನ್ನು ಏಳು ರಾಜ್ಯಗಳಲ್ಲಿ ನಿಯೋಜಿಸಿ, ಮಾಹಿತಿ ಕಲೆಹಾಕುವಲ್ಲಿ ಯಶಸ್ವಿಯಾಯಿತು.
ಶೇಖ್ ತನ್ನ ಗುರುತನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದು, ಮಹಾರಾಷ್ಟ್ರದ ಭುಸಾವಾಲ್‌ನಲ್ಲಿರುವ ಉರ್ದು ಶಾಲೆಯಲ್ಲಿ ಭೋದಕನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಮಾಹಿತಿದಾರರೊಬ್ಬರು ಪೊಲೀಸರಿಗೆ ದೃಢವಾಗಿ ತಿಳಿಸಿದ್ದಾರೆ. ಅದರಂತೆಯೇ, ಪ್ರದೇಶದಿಂದ ಶೇಖ್‌ನನ್ನು ಬಂಧಿಸಲು ತಂಡವನ್ನು ರಚಿಸಿದ ಪೊಲೀಸ್ ತಂಡವು, ಮೊಹಮದಿನ್ ನಗರದಿಂದ ಖಡ್ಕಾ ರಸ್ತೆಗೆ ಹೋಗುತ್ತಿದ್ದ ಅನುಮಾನಾಸ್ಪದ ವ್ಯಕ್ತಿಯನ್ನು ಹನೀಫ್ ಶೇಖ್ ಎಂದು ಗುರುತಿಸಿ, ಆತನ ಮೇಲೆ ಮುತ್ತಿಗೆ ಹಾಕಿತು.
ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಹನೀಫ್ನನ್ನು ಇದೀಗ ಯಶಸ್ವಿಯಾಗಿ ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ವಿಶೇಷ ಸೆಲ್) ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
ಏನಿದು ಸಿಮಿ?
ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (SIMI) 1976ರಲ್ಲಿ ಉತ್ತರ ಪ್ರದೇಶದ ಅಲಿಗಢದಲ್ಲಿ ಸ್ಥಾಪನೆಯಾಗಿತ್ತು. ಇಸ್ಲಾಂ ಸಾಮ್ರಾಜ್ಯವನ್ನು ಸ್ಥಾಪಿಸುವುದು ಈ ಸಂಸ್ಥೆಯ ಗುರಿ ಎಂದು ಹೇಳಲಾಗಿದೆ. ಸಿಮಿ ಕಾರ್ಯಕರ್ತರು ವಿವಿಧ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದರಿಂದ ಸಿಮಿಯನ್ನು ಸರ್ಕಾರ ನಿಷೇಧಿಸಿತ್ತು,(ಏಜೆನ್ಸೀಸ್).