More

  ಧೈರ್ಯದಿಂದ ಉತ್ತರಿಸಿ! ದ್ವಿತೀಯ ಪಿಯುಸಿ-ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಟಾಪರ್ ಆಗಲು ತಜ್ಞರ ಕಿವಿಮಾತು

  ಮಾರ್ಚ್ ಮೊದಲ ವಾರ ದ್ವಿತೀಯ ಪಿಯುಸಿ ಮತ್ತು ಕೊನೇ ವಾರದಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಆರಂಭವಾಗುತ್ತಿದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಯಾವ ರೀತಿ ಓದಬೇಕು, ಹೆಚ್ಚಿನ ಅಂಕ ಗಳಿಸುವುದು ಹೇಗೆ? ಕಡಿಮೆ ಸಮಯದ ಓದಿನಲ್ಲಿ ಹೆಚ್ಚಿನ ವಿಷಯಗಳನ್ನು ನೆನಪಿನಲ್ಲಿರಿಸಿಕೊಳ್ಳುವುದು ಹೇಗೆ? ಯಾವುದನ್ನು ಓದಿದರೆ ಹೆಚ್ಚಿನ ಫಲಿತಾಂಶ ಪಡೆಯಲು ಸಾಧ್ಯ? ಮೂರು ‘ಅಂತಿಮ’ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಯಾವ ರೀತಿಯಲ್ಲಿ ಅನುಕೂಲವಾಗಲಿವೆ ಎಂಬುದರ ಕುರಿತು ವಿಜಯವಾಣಿ ಏರ್ಪಡಿಸಿದ್ದ ಸಂವಾದದಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ದೇಶಕ ಎಚ್.ಎನ್. ಗೋಪಾಲಕೃಷ್ಣ ಹಾಗೂ ಎಕ್ಸ್​ಪರ್ಟ್ ಗ್ರೂಪ್ ಆಫ್ ಇನ್​ಸ್ಟಿಟ್ಯೂಟ್ ಮುಖ್ಯಸ್ಥ ನರೇಂದ್ರ ನಾಯಕ್ ಹಂಚಿಕೊಂಡ ಪೂರ್ಣ ವಿವರ ಇಲ್ಲಿದೆ.

  ವಿದ್ಯಾರ್ಥಿಗಳ ಅನುತ್ತೀರ್ಣ ಪ್ರಮಾಣ ಕಡಿತಕ್ಕೆ 3 ಪರೀಕ್ಷೆ

  | ಎಚ್.ಎನ್. ಗೋಪಾಲಕೃಷ್ಣ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ದೇಶಕ

  ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ‘ವಾರ್ಷಿಕ’ ಪರೀಕ್ಷೆಗಳನ್ನು ನಡೆಸುವ ಮೂಲಕ ಅನುತ್ತೀರ್ಣರಾಗುವವರ ಸಂಖ್ಯೆಯನ್ನು ಕಡಿಮೆಗೊಳಿಸುವುದು ಮತ್ತು ಹೆಚ್ಚಿನ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ. ಕಳೆದ ವರ್ಷ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 6 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. 2ನೇ ಪೂರಕ ಪರೀಕ್ಷೆಯಲ್ಲಿ 1.10 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡು 42 ಸಾವಿರ ಮಂದಿ ಉತ್ತೀರ್ಣರಾಗಿ ಮುಂದಿನ ಶಿಕ್ಷಣಕ್ಕೆ ಸೇರ್ಪಡೆಯಾದರು. ಅನುತ್ತೀರ್ಣರಾದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವ ಜತೆಗೆ ದುಶ್ಚಟಗಳಿಗೆ ಬಲಿಯಾಗುವ ಸಾಧ್ಯತೆಗಳಿರುತ್ತವೆ. ಇದನ್ನು ತಪ್ಪಿಸುವುದು ಶಿಕ್ಷಣ ಇಲಾಖೆಯ ಆಶಯವಾಗಿದೆ. ಕಳೆದ ವರ್ಷ ಇದು ಸಾಬೀತಾಗಿದೆ. ಮೂರೂ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಗೊಂದಲವಾಗದಂತೆ ಪೋಸ್ಟರ್​ಗಳು, ಪ್ರಶ್ನೋತ್ತರಗಳ ಮೂಲಕ ಜಾಗೃತಿ ಮೂಡಿಸಲಾಗಿದೆ. ಡಿಡಿಪಿಐ ಮತ್ತು ಬಿಇಒಗಳ ಮಟ್ಟದಲ್ಲಿ ಎಲ್ಲ ಪ್ರೌಢಶಾಲೆ ಶಿಕ್ಷಕರಿಗೆ ಮಾರ್ಗದರ್ಶನ ನೀಡಲಾಗಿದೆ.

  ಚುನಾವಣೆ ವೇಳೆ ಪರೀಕ್ಷೆ ಸವಾಲು
  ಈ ಬಾರಿ ಲೋಕಸಭಾ ಚುನಾವಣೆ ಇರುವುದರಿಂದ ಮೂರು ಪರೀಕ್ಷೆ ನಡೆಸುವುದು ಮಂಡಳಿಗೆ ಸವಾಲಾಗಿದೆ. ಆದರೆ, ಶಿಕ್ಷಕರನ್ನು ಲೋಕಸಭಾ ಚುನಾವಣೆಗೆ ಮತದಾನಕ್ಕೆ 2 ದಿನ ಮತ್ತು ತರಬೇತಿಗೆ 2 ದಿನ ಮಾತ್ರ ಬಳಸಿಕೊಳ್ಳಲಾಗುತ್ತದೆ. ಉಳಿದ ಸಮಯದಲ್ಲಿ ಶಿಕ್ಷಕರು ಲಭ್ಯವಾಗುತ್ತಾರೆ. ಇದಕ್ಕಿಂತ ಹೆಚ್ಚಾಗಿ ಪರೀಕ್ಷೆ-1 ಚುನಾವಣೆಗೆ ಮೊದಲೇ ನಡೆಯುತ್ತದೆ. 2 ಮತ್ತು 3ನೇ ಪರೀಕ್ಷೆಗೆ ಹೆಚ್ಚಿನ ಒತ್ತಡ ಇರುವುದಿಲ್ಲ. ಪರೀಕ್ಷಾ ಸಿಬ್ಬಂದಿ ಮತ್ತು ಕೇಂದ್ರಗಳ ಸಂಖ್ಯೆಯೂ ಕಡಿಮೆ ಇರುತ್ತದೆ. ಕಳೆದ ವರ್ಷ ಕೂಡ ವಿಧಾನಸಭಾ ಚುನಾವಣೆ ಇದ್ದ ಕಾರಣ ಇದೇ ಪರಿಸ್ಥಿತಿ ಇತ್ತು. ಅದನ್ನು ಯಶಸ್ವಿಯಾಗಿ ನಿಭಾಯಿಸಿರುವುದರಿಂದ ತೊಂದರೆ ಎದುರಾಗುವುದಿಲ್ಲವೆಂದು.

  ಸಿಇಟಿ, ನೀಟ್​ಗೆ ಅಡ್ಡಿಯಾಗದಂತೆ ಫಲಿತಾಂಶ
  ಮೂರು ಪರೀಕ್ಷೆ ಸಂಘಟನೆ, ಮೌಲ್ಯಮಾಪನ ಮತ್ತು ಫಲಿತಾಂಶ ಪ್ರಕಟಣೆಯನ್ನು ಸ್ಪರ್ಧಾತ್ಮಕ ಪರೀಕ್ಷೆಗಳಾದ ನೀಟ್, ಸಿಇಟಿ ಮತ್ತು ಜೆಇಇ ಬರೆಯುವವರಿಗೆ ತೊಂದರೆ ಆಗದಂತೆ ನಿರ್ವಹಿಸುತ್ತೇವೆ. ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ವೇಳಾಪಟ್ಟಿ ನಿಗದಿ ಮಾಡಲಾಗಿದೆ. ಮಾ.1ರಿಂದ22ರವರೆಗೂ ದ್ವಿತೀಯ ಪಿಯುಸಿ ಪರೀಕ್ಷೆ-1 ನಡೆಯಲಿದೆ. ಅದರ ಫಲಿತಾಂಶವನ್ನು ಏಪ್ರಿಲ್ ಎರಡನೇ ವಾರದಲ್ಲಿ ಪ್ರಕಟಿಸುವ ಗುರಿ ಹೊಂದಲಾಗಿದೆ. ನಂತರ ಏಪ್ರಿಲ್ ಕೊನೇ ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ-2 ನಡೆಸಿ ಸಿಇಟಿ ಫಲಿತಾಂಶಕ್ಕೆ ಮುನ್ನವೇ ಫಲಿತಾಂಶವನ್ನು ನೀಡುವ ಉದ್ದೇಶ ಇದೆ. ಸಿಇಟಿ ಪರೀಕ್ಷೆಯು ಏಪ್ರಿಲ್ 18ರಿಂದ 20ರವರೆಗೆ ನಡೆಯಲಿದೆ. ಫಲಿತಾಂಶ ನೀಡಲು ಕನಿಷ್ಠ 20 ದಿನ ಬೇಕಾಗುತ್ತದೆ. ಅಷ್ಟರೊಳಗೆ ನಾವು ಎರಡೂ ಪರೀಕ್ಷೆಗಳ ಫಲಿತಾಂಶ ನೀಡುತ್ತೇವೆ. ಇದರಿಂದ ಸಿಇಟಿ ರ್ಯಾಂಕ್ ನಿರ್ಣಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ.

  ಮೌಲ್ಯಮಾಪನಕ್ಕೂ ಸಿದ್ಧತೆ ಆರಂಭ
  ಪರೀಕ್ಷೆಗೆ ತಕ್ಕಂತೆ ಮೌಲ್ಯಮಾಪನಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಮ್ಮಲ್ಲಿ 54 ಸಾವಿರ ಮೌಲ್ಯಮಾಪಕರ ದತ್ತಾಂಶ ಲಭ್ಯವಿದೆ. ಇವರಲ್ಲಿ ಶೇ.70 ಮಂದಿ ಹಾಜರಾದರೂ ಒಂದು ವಾರದೊಳಗೆ ಮೌಲ್ಯಮಾಪನ ಕಾರ್ಯ ಪೂರ್ಣಗೊಳ್ಳುತ್ತದೆ. 2 ಮತ್ತು 3ನೇ ಪರೀಕ್ಷೆಗೆ ಇದರ ಕಾರ್ಯದೊತ್ತಡ ಕಡಿಮೆಯಾಗಲಿದೆ. ಕಾಲೇಜುಗಳು ಮತ್ತು ಶಿಕ್ಷಕರಿಗೆ ತೊಂದರೆಯಾಗದಂತೆ ಪರೀಕ್ಷಾ ಕೇಂದ್ರಗಳು ಹಾಗೂ ಮೌಲ್ಯಮಾಪನಕ್ಕೆ ಶಿಕ್ಷಕರನ್ನು ನಿಯೋಜಿಸಲು ಕಾರ್ಯತಂತ್ರ ರೂಪಿಸಲಾಗಿದೆ. ಒಟ್ಟಾರೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದ ಪಾಠ-ಪ್ರವಚನಗಳು ನಷ್ಟವಾಗದಂತೆ ಪರೀಕ್ಷೆಗಳನ್ನು ನಡೆಸಿ ಫಲಿತಾಂಶ ಕೊಡುವ ಜವಾಬ್ದಾರಿಯನ್ನು ಮಂಡಳಿ ಹೊರಲಿದೆ. ಪರೀಕ್ಷಾ ಕಾರ್ಯದಲ್ಲಿ ಭಾಗವಹಿಸುವ ಶಿಕ್ಷಕರಿಗೆ ಪರೀಕ್ಷಾ ಭತ್ಯೆ ನೀಡಲು ಅನುದಾನವನ್ನು ನಿಗದಿತ ಸಮಯದಲ್ಲಿ ವಿತರಿಸಲಾಗುತ್ತಿದೆ. ಮೌಲ್ಯಮಾಪನದ ಗೌರವಧನ ಕೂಡ ವಿತರಿಸಲು ಪರೀಕ್ಷಾ ಕಾರ್ಯದ ಶೇ.90 ಅನುದಾನವನ್ನು ಬೇಗನೆ ಬಿಡುಗಡೆ ಮಾಡುವಂತೆ ಸರ್ಕಾರಕ್ಕೂ ಮನವಿ ಮಾಡಲಾಗಿದೆ. ಆದಷ್ಟು ಬೇಗ ಶಿಕ್ಷಕರಿಗೆ ಗೌರವಧನ ನೀಡುವುದು ಮಂಡಳಿ ಉದ್ದೇಶವಾಗಿದೆ.

  ಪರಿಪೂರ್ಣ ತಯಾರಿಯಿಂದ ಪರೀಕ್ಷೆ ಯಶಸ್ಸು ಶತಃಸಿದ್ಧ

  | ನರೇಂದ್ರ ನಾಯಕ್ ಎಕ್ಸ್​ಪರ್ಟ್ ಗ್ರೂಪ್ ಆಫ್ ಇನ್​ಸ್ಟಿಟೂಟ್​ನ ಮುಖ್ಯಸ್ಥ

  ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳು ಪ್ರಾಮಾಣಿಕತೆ ಹಾಗೂ ಕಠಿಣ ಪರಿಶ್ರಮದಿಂದ ವ್ಯಾಸಂಗ ಮಾಡಬೇಕು. ಜತೆಗೆ ಶಿಕ್ಷಕರ ಮಾರ್ಗದರ್ಶನದಲ್ಲಿ ಮುಂದುವರಿದಿದ್ದೇ ಆದಲ್ಲಿ ಪರೀಕ್ಷೆಯನ್ನು ಸುಲಭವಾಗಿ ಎದುರಿಸಿ ಹೆಚ್ಚಿನ ಸಾಧನೆಯನ್ನು ಮಾಡಲು ಸಾಧ್ಯವಾಗಲಿದೆ. ಶೈಕ್ಷಣಿಕ ವರ್ಷ ಆರಂಭದಿಂದಲೂ ನಿಯಮಿತವಾಗಿ ವ್ಯಾಸಂಗ ಮಾಡುವುದರಿಂದ ಪರೀಕ್ಷೆ ವೇಳೆ ಯಾವ ಭಯ ಇಲ್ಲದೆ ಆತ್ಮವಿಶ್ವಾಸದಿಂದ ಪ್ರಶ್ನೆಪತ್ರಿಕೆಯಲ್ಲಿ ಕೇಳಿರುವ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಬಹುದು. ತಡವಾಗಿ ವ್ಯಾಸಂಗ ಆರಂಭಿಸಿರುವವರು ‘ಪ್ರಶ್ನೆಗಳ ಬ್ಯಾಂಕ್’ ಮೊರೆ ಹೋಗಬಹುದು. ಆದರೂ, ಇದನ್ನು ಶಿಕ್ಷಕರೊಂದಿಗೆ ರ್ಚಚಿಸಿ ಪರೀಕ್ಷೆ ಸಿದ್ಧತೆ ಮಾಡಿಕೊಳ್ಳಬೇಕು. ಜತೆಗೆ ಶಾಲೆಯಲ್ಲಿ ಬರೆದ ಪೂರ್ವಸಿದ್ಧತಾ ಪರೀಕ್ಷೆ ಹೊರತುಪಡಿಸಿ ಮನೆಯಲ್ಲಿ ಪ್ರತ್ಯೇಕವಾಗಿ ಸ್ವಯಂ ಪ್ರಿಪರೇಟರಿ ಎಕ್ಸಾಂ ಬರೆಯಬೇಕು. ಇದನ್ನು ಪಾಲಕರು ತಮ್ಮ ನಿಗಾದಲ್ಲಿ ಮಕ್ಕಳಿಂದ ಮಾಡಿಸಿದರೆ ಅವರಿಗೆ ಅಂತಿಮ ಪರೀಕ್ಷೆಯನ್ನು ಎದುರಿಸಲು ಯಾವುದೇ ಅಡ್ಡಿಯಾಗದು. ಶಾಲೆಯಲ್ಲಿ ಸಮರ್ಪಕವಾಗಿ ಕಲಿಕೆ ಮಾಡದವರಿಗೆ ಮಾತ್ರ ಪರೀಕ್ಷೆ ಕಠಿಣ ಎನಿಸುತ್ತದೆ. ಇದಕ್ಕೆ ಆಸ್ಪದ ನೀಡದೆ ಶಾಲಾರಂಭದಿಂದಲೂ ಶ್ರದ್ಧೆಯಿಂದ ತರಗತಿಗಳಲ್ಲಿ ಶಿಕ್ಷಕರು ಮಾಡುವ ಪಾಠಗಳನ್ನು ಗಮನವಿಟ್ಟು ಕೇಳಿದ್ದರೆ ಅದನ್ನು ನೆನಪಿಸಿಕೊಂಡು ಪರೀಕ್ಷೆಯಲ್ಲಿ ಸರಿಯಾದ ಉತ್ತರ ಬರೆಯಲು ಸಹಾಯವಾಗುತ್ತದೆ. ಇದಕ್ಕಾಗಿ ನಿರಂತರವಾಗಿ ಪ್ರಯತ್ನ ಮಾಡುತ್ತಿರಬೇಕು.

  ನಿದ್ದೆಗೆಟ್ಟು ಓದು ಬೇಡ?
  ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಲು ರಾತ್ರಿಯಿಡೀ ನಿದ್ದೆಗೆಟ್ಟು ಓದುವ ಕ್ರಮ ಸರಿಯಲ್ಲ. ಅದರಲ್ಲೂ ಮಧ್ಯರಾತ್ರಿ 1 ಗಂಟೆವರೆಗೆ ಓದಿ ಮತ್ತೆ ಬೆಳಗಿನಜಾವ 4 ಗಂಟೆಗೆ ಎದ್ದು ಓದುವ ಅಭ್ಯಾಸ ಸಲ್ಲದು. ಪ್ರೌಢಶಿಕ್ಷಣ ಹಂತದ ವಿದ್ಯಾರ್ಥಿಗಳು ದಿನದಲ್ಲಿ 7 ಗಂಟೆ ನಿದ್ರೆ ಮಾಡಬೇಕು. ಇದರಿಂದ ವ್ಯಾಸಂಗ ಮಾಡಲು ಸಹಕಾರಿಯಾಗುತ್ತದೆ. ಹಾಗಾಗಿ ರಾತ್ರಿ 11 ಅಥವಾ 11.30ರವರೆಗೆ ಓದಿ ನಂತರ ಮಲಗಬೇಕು. ಮರುದಿನ ಬೆಳಗ್ಗೆ 5 ಗಂಟೆಗೆ ಎದ್ದು ಓದುವ ಅಭ್ಯಾಸವನ್ನು ಸರಿಯಾದ ಕ್ರಮದಲ್ಲಿ ಕೈಗೊಂಡಿದ್ದೇ ಆದಲ್ಲಿ ಓದಿದ್ದು ನೆನಪಿನಲ್ಲಿ ಉಳಿದು ಪರೀಕ್ಷೆ ವೇಳೆ ಸಹಾಯಕ್ಕೆ ಬರುತ್ತದೆ. ಇದನ್ನು ಪಾಲಕರು ತಮ್ಮ ಮಕ್ಕಳಿಗೆ ತಿಳಿಸಿಕೊಡಬೇಕು ಎಂದು ನರೇಂದ್ರ ನಾಯಕ್ ಸಲಹೆ ನೀಡಿದರು.

  ಗ್ಯಾಜೆಟ್​ಗಳಿಂದ ದೂರವಿರಿ
  ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳು ಗ್ಯಾಜೆಟ್​ಗಳನ್ನು ಇತಿಮಿತಿಯಲ್ಲಿ ಬಳಸುವುದಾದರೆ ಒಪ್ಪಿಕೊಳ್ಳಬಹುದು. ಪರೀಕ್ಷೆ ವೇಳೆ ಅವುಗಳಿಂದ ದೂರ ಇರಲೇಬೇಕು. ಮನೆಯಲ್ಲಿ ಪಾಲಕರು ತಮ್ಮ ಮಕ್ಕಳ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣದ ಬಳಕೆ ಬಗ್ಗೆ ನಿಗಾ ಇಡಲೇಬೇಕು. ಗ್ಯಾಜೆಟ್​ಗಳ ಒಳಿತು-ಕೆಡುಕುಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕಿದೆ.

  ಪಿಯುಸಿ ಸೇರ್ಪಡೆಗೆ ವಿಷಯ ಆಯ್ಕೆ ಹೇಗೆ?
  ಎಸ್​ಎಸ್​ಎಲ್​ಸಿ ಬಳಿಕ ಪಿಯುಸಿ ಸೇರ್ಪಡೆ ಆಗಬಯಸುವ ವಿದ್ಯಾರ್ಥಿ ತಾನು ಇಷ್ಟಪಟ್ಟ ವಿಷಯವನ್ನು ತೆಗೆದುಕೊಳ್ಳು ವುದು ಸೂಕ್ತ. ವಿಜ್ಞಾನದಲ್ಲಿ ಆಸಕ್ತಿ ಇದ್ದಲ್ಲಿ ಆ ಕ್ಷೇತ್ರದಲ್ಲಿ ಸಾಧನೆ ಮಾಡಲು ಸೈನ್ಸ್​ಗೆ ಸೇರ್ಪಡೆಯಾಗಬಹುದು. ಆದರೆ, ಪಾಲಕರು ತಮ್ಮ ಮಕ್ಕಳನ್ನು ಬಲವಂತಪಡಿಸಿ ಇಂಥದ್ದೇ ವಿಷಯಕ್ಕೆ ಸೇರು ಎಂದು ಹೇಳುವುದು ಸರಿಕಾಣದು. ಪ್ರೌಢಶಾಲೆ ಹಂತದಲ್ಲಿ ಕೋರ್ ಸಬ್ಜೆಕ್ಟ್​ಗಳಲ್ಲಿ ಶೇ.75-80 ಅಂಕಗಳನ್ನು ಪಡೆದಿದ್ದರೆ ಅಂತಹವರು ಪಿಯುಸಿಯಲ್ಲಿ ವಿಜ್ಞಾನಕ್ಕೆ ಸೇರ್ಪಡೆ ಆಗಬಹುದು. ಆದರೆ, ಕಡಿಮೆ ಅಂಕ ಪಡೆದವರನ್ನು ವಿಜ್ಞಾನಕ್ಕೆ ಸೇರಿಸುವುದು ಸರಿಯಲ್ಲ. ಏಕೆಂದರೆ, ಪಿಯು ಹಂತಕ್ಕೆ ಬಂದಾಗಲೂ ಬೇಸಿಕ್ ಸೈನ್ಸ್ ಕಲಿಯಲು ಸಾಧ್ಯವಾಗದು. ಸರ್ಕಾರ ಕೂಡ ವೃತ್ತಿಪರ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದವರಿಗೆ ಮಣೆ ಹಾಕುವ ಪದ್ಧತಿ ಅಳವಡಿಸಿಕೊಂಡಿದೆ. ಜತೆಗೆ ವೈದ್ಯರಾಗುವವರಲ್ಲಿ ದೆಹಲಿಯ ಏಮ್ಸ್​ನಲ್ಲಿ ಸೀಟು ಪಡೆಯುವ ಗುರಿ ಹೊಂದಿದ್ದು, ಇದಕ್ಕಾಗಿ ನೀಟ್ ಪರೀಕ್ಷೆ ಬರೆಯಬೇಕಾಗುತ್ತದೆ. ಲಕ್ಷ ಸಂಖ್ಯೆಯಲ್ಲಿರುವ ಈ ಸೀಟುಗಳನ್ನು ಪಡೆಯಲು 20 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದರೂ, ಮೆರಿಟ್ ಆಧಾರದಲ್ಲಿ ಸೀಟು ಗಿಟ್ಟಿಸುವವರು ಶೇ.5 ಮಾತ್ರ. ಈ ಅಂಶವನ್ನು ಗಮನಿಸಿಯೇ ಪಾಲಕರು ತಮ್ಮ ಮಕ್ಕಳ ಅಂಕಗಳನ್ನು ಆಧರಿಸಿಯೇ ಉನ್ನತಶಿಕ್ಷಣಕ್ಕೆ ಸೇರಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ನರೇಂದ್ರ ನಾಯಕ್ ಕಿವಿಮಾತು ಹೇಳಿದರು.

  ಮೂರು ಪರೀಕ್ಷೆಗೆ ಸಲಹೆ ಪಡೆದಿಲ್ಲ
  ಈ ಬಾರಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ 3 ಪರೀಕ್ಷೆ ನಡೆಸಲಾಗುತ್ತಿದೆ. ಈ ವಿಧಾನವು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಇಲಾಖೆ ಮೇಲೆ ಒತ್ತಡ ಬೀರುವುದು ಸಹಜ. ಇದರ ಸಾಧಕ-ಬಾಧಕಗಳ ಬಗ್ಗೆ ಮೊದಲೇ ಖಾಸಗಿ ಶಾಲೆಗಳ ಒಕ್ಕೂಟದೊಂದಿಗೆ ರ್ಚಚಿಸಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿತ್ತು. ಆದರೆ, ರಾಜ್ಯದಲ್ಲಿ ಶೇ.60 ಶಾಲೆಗಳನ್ನು ಪ್ರತಿನಿಧಿಸುವ ಒಕ್ಕೂಟವನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಮೂರು ಪರೀಕ್ಷೆ ನಡೆಸುವ ಉದ್ದೇಶ ಒಳ್ಳೆಯದಾಗಿದ್ದರೂ, ಅದನ್ನು ಜಾರಿಗೊಳಿಸುವ ವಿಧಾನಕ್ಕೆ ನಮ್ಮ ಸಹಮತ ಇಲ್ಲ. ಆದರೂ, ಈ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು ಕೈಜೋಡಿಸುತ್ತೇವೆ.

  ಮಹೇಶ್​ ಬಾಬು ವಿಗ್​ ಬಳಸುತ್ತಾರಾ? ಮೇಕಪ್​ ಮ್ಯಾನ್​ ಬಿಚ್ಚಿಟ್ಟ ಅಸಲಿ ಸಂಗತಿ ಇಲ್ಲಿದೆ ನೋಡಿ…

  ಅಗಲಿದ ಸಂಗಾತಿಯನ್ನು ಬಿಗಿದಪ್ಪಿ ಬಿಕ್ಕಿ ಬಿಕ್ಕಿ ಅತ್ತ ಕೋಲಾ! ವಿಡಿಯೋ ನೋಡಿದ್ರೆ ಕಣ್ಣಂಚಲ್ಲಿ ನೀರು ತರಿಸುತ್ತೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts