

ಕಲಬುರಗಿ: ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕರೊನಾ ಮಣಿಸುವ ಹೋರಾಟದಲ್ಲಿ ಶ್ರಮಿಸುತ್ತಿರುವ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಇಂತಹದ್ದೇ ಮತ್ತೊಂದು ಅಮಾನವೀಯ ಘಟನೆ ಕಮಲಾಪುರ ತಾಲೂಕಿನ ಮರಮಂಚಿ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ.
ಮರಮಂಚಿ ತಾಂಡದ 15 ಜನರಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ತಾಂಡಾಕ್ಕೆ ಬಂದ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರನ್ನೇ ತರಾಟೆಗೆ ತೆಗೆದುಕೊಂಡ ಸೋಂಕಿತರ ಸಂಬಂಧಿಕರು ಕಲ್ಲು ತೂರಾಟ ನಡೆಸಿ ಗೊಂದಲ ವಾತಾವರಣ ಸೃಷ್ಟಿಸಿದರು. ಇದನ್ನೂ ನೋಡಿ ಕಣ್ಣೀರು ಹಾಕುತ್ತಲೇ ಕೋವಿಡ್ ಆಸ್ಪತ್ರೆಗೆ ಹೋದ 3 ವರ್ಷದ ಬಾಲಕ…
ಮರಮಂಚಿ ತಾಂಡಾದಲ್ಲಿ ಕರೊನಾ ಸೊಂಕು ಪತ್ತೆಯಾದ 15 ಜನರೂ ಮುಂಬೈನಿಂದ ವಾಪಸ್ ಆದವರು. ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಸಮೇತ ಅಧಿಕಾರಿಗಳ ತಂಡ ತಾಂಡಾಕ್ಕೆ ಭೇಟಿ ನೀಡಿದೆ. ಈ ವೇಳೆ ವಾಗ್ವಾದಕ್ಕಿಳಿದ ಸೋಂಕಿತರ ಸಂಬಂಧಿಕರು, ನಮ್ಮಲ್ಲಿ ಯಾರಿಗೂ ಕರೊನಾ ಬಂದಿಲ್ಲ. ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಆಕ್ರೋಶಗೊಂಡರು.
ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ಹೋಗುವಂತೆ ಒತ್ತಾಯಿಸಿದ ಸಂಬಂಧಿಕರು ಆಂಬುಲೆನ್ಸ್, ವೈದ್ಯರು, ಅಧಿಕಾರಿಗಳು ಹಾಗೂ ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಕಲ್ಲು ತೂರಾಟದ ಹಿನ್ನೆಲೆ ಸ್ಥಳದಲ್ಲೇ ವಾಹನಗಳನ್ನ ಬಿಟ್ಟು ಅಧಿಕಾರಿಗಳು ಹೋದರು. ಘಟನೆಯಲ್ಲಿ ಆಂಬುಲೆನ್ಸ್, ಕಾರಿನ ಗಾಜು ಪುಡಿಪುಡಿಯಾಗಿದ್ದು, ವೈದ್ಯಕೀಯ ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ.