ಇವತ್ತೊಂದೇ ದಿನ ಸಿಡಿಲಿಗೆ ಮೂವರು ಬಲಿ; ಎತ್ತು, ಆಕಳು, ಕುರಿಗಳೂ ಸಾವು

Dyamanna
ಸಿಡಿಲಿಗೆ ಬಲಿಯಾದ ದ್ಯಾಮಣ್ಣ ಶರೇಕಾರ
Published on

ಬೆಂಗಳೂರು: ರಾಜ್ಯಾದ್ಯಂತ ಇವತ್ತೊಂದೇ ದಿನ ಸಿಡಿಲು ಬಡಿದು ಒಟ್ಟು ಮೂವರು ಸಾವಿಗೀಡಾದ ಪ್ರಕರಣ ನಡೆದಿದೆ. ಮಾತ್ರವಲ್ಲ, ಎತ್ತು, ಟಗರು, ಆಕಳು, ಕುರಿಗಳು ಕೂಡ ಸಾವಿಗೀಡಾಗಿವೆ. ವಿಜಯಪುರ, ಬಳ್ಳಾರಿ, ಶಿವಮೊಗ್ಗ, ವಿಜಯನಗರ ಜಿಲ್ಲೆಗಳಲ್ಲಿ ಈ ಪ್ರಕರಣ ನಡೆದಿದೆ.

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಕಿರಿಶ್ಯಾಳ ಗ್ರಾಮದ ತೋಡಲ್ಲಿ ದ್ಯಾಮಣ್ಣ ಶರೇಕಾರ (20) ಸಿಡಿಲು ಬಡಿದು ಸಾವಿಗೀಡಾಗಿದ್ದಾನೆ. ಜಮೀನಿನಲ್ಲಿ ಸಂಗ್ರಹಿಸಿದ್ದ ಈರುಳ್ಳಿ ಚೀಲಗಳಿಗೆ ಪ್ಲಾಸ್ಟಿಕ್ ಹೊದಿಸಲು ಹೋಗಿದ್ದಾಗ ಈ ಅವಘಡ ಸಂಭವಿಸಿದೆ. ನಿಡಗುಂದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬಳ್ಳಾರಿ ಜಿಲ್ಲೆಯ ಯಾಲ್ಪಿ ಕುಂತ್ನಾಳ ಗ್ರಾಮದಲ್ಲಿ ರೈತ ಪಂಪಾವತಿ (56) ಎಂಬವರು ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ. ಇವರು ಜಮೀನಿಗೆ ನೀರು ಕಟ್ಟಲು ತೆರಳಿದ್ದರು. ಈ ಸಂದರ್ಭದಲ್ಲಿ ಭಾರಿ ಗುಡುಗು ಸಿಡಿಲು ಮಳೆ ಬಂದಿದ್ದರಿಂದ ಮರದ ಕೆಳಗೆ ನಿಂತಿದ್ದರು. ಅದೇ ಸಮಯಕ್ಕೆ ಸಿಡಿಲು ಬಡಿದು ಮೃತಪಟ್ಟರು. ಪಿ.ಡಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆಶ್ರಯ ಬಡಾವಣೆಯಲ್ಲಿ ಕುಮಾರನಾಯ್ಕ ಎಂಬವರ ಪತ್ನಿ ಲಕ್ಷ್ಮೀಬಾಯಿ ಎಂಬಾಕೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಇವರು ಕುರಿಗೆ ಮೇವು ತರಲು ಹೋಗಿದ್ದಾಗ ಸಿಡಿಲು ಅಪ್ಪಳಿಸಿತ್ತು.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸಕಲಾಪುರಹಟ್ಟಿ, ಅರ್ಜುನ ಚಿನ್ನೇನಹಳ್ಳಿ ಗ್ರಾಮಗಳಲ್ಲಿ ಸಿಡಿಲು ಬಡಿದು ಜಾನುವಾರುಗಳು ಸಾವಿಗೀಡಾಗಿವೆ. ಹೊಲದಲ್ಲಿ ಮೇಯುತ್ತಿದ್ದ ಎರಡು ಎತ್ತುಗಳು, ಒಂದು ಆಕಳು, ಐದು ಕುರಿಗಳು ಸಿಡಿಲಿನ ಅಬ್ಬರಕ್ಕೆ ಬಲಿಯಾಗಿವೆ.

ಸಕಲಾಪುರಹಟ್ಟಿಯ ಗೌಡಜ್ಜರ ತಿಮ್ಮಪ್ಪ ಎಂಬುವರಿಗೆ ಸೇರಿದ 5 ಕುರಿಗಳು, ಎರಡು ಟಗರು, ಅರ್ಜುನ ಚಿನ್ನೇನಹಳ್ಳಿಯ ಸುರೇಶ್ ಎಂಬುಬರಿಗೆ ಸೇರಿದ ಎರಡು ಎತ್ತುಗಳು ಹಾಗೂ ಒಂದು ಆಕಳು ಸಿಡಿಲಿಗೆ ಬಲಿಯಾಗಿವೆ. ಕಾನಾಹೊಸಳ್ಳಿ ಮತ್ತು ಗುಡೇಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣಗಳು ನಡೆದಿವೆ.

ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಭಾಗಗಳಲ್ಲಿ ಸಿಡಿಲುಸಹಿತ ಮಳೆಯಾಗಿದ್ದು, ಸಿಡಿಲು ಬಡಿದು ಇಪ್ಪತ್ತಕ್ಕೂ ಹೆಚ್ಚು ಮೇಕೆಗಳ ಸಾವಿಗೀಡಾಗಿವೆ. ದೇವರ ಹಿಪ್ಪರಗಿ ತಾಲೂಕಿನ ಸಲಾದಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕುರಿಗಾಹಿಗಳಾದ ಶಂಕರಪ್ಪ ವಾಲಿಕಾರ್ ಹಾಗೂ ಪರಸಪ್ಪ ಚೌಡಕಿ ಎಂಬುವರಿಗೆ ಸೇರಿದ ಮೇಕೆಗಳು ಮೃತಪಟ್ಟಿವೆ. ದೇವರ ಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net