

ನವದೆಹಲಿ: ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರನ್ನು ಆಗಂತುಕರು ಕೊಲೆ ಮಾಡಲು ಯತ್ನಿಸಿದ್ದು, ಅವರು ಸಂಜೆ ವಾಯುವಿಹಾರದಲ್ಲಿ ಇದ್ದಾಗಲೇ ಈ ಘಟನೆ ಸಂಭವಿಸಿದೆ. ಮುಖ್ಯಮಂತ್ರಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಕೊಲೆಯತ್ನ ಸಂಬಂಧ ಮೂವರನ್ನು ಬಂಧಿಸಲಾಗಿದೆ.
ಸಿಎಂ ಬಿಪ್ಲಬ್ ಕುಮಾರ್ ದೇಬ್ ಅವರು ಗುರುವಾರ ಸಂಜೆ ತಮ್ಮ ಅಧಿಕೃತ ನಿವಾಸ ಶ್ಯಾಮ್ಪ್ರಸಾದ್ ಮುಖರ್ಜಿ ಲೇನ್ನಲ್ಲಿ ವಾಯುವಿಹಾರ ನಡೆಯುತ್ತಿದ್ದ ಈ ಕೊಲೆಯತ್ನ ನಡೆದಿದೆ. ಮುಖ್ಯಮಂತ್ರಿ ಅವರ ಭದ್ರತೆಯನ್ನು ಭೇದಿಸಿ ಕಾರನ್ನು ಅವರ ಮೇಲೆ ಹರಿಸಲು ಯತ್ನಿಸಲಾಗಿತ್ತು.
ಕೂಡಲೇ ಎಚ್ಚೆತ್ತ ಸಿಎಂ, ತಕ್ಷಣ ಪಕ್ಕಕ್ಕೆ ಸರಿದಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಆದರೆ ಭದ್ರತಾ ಸಿಬ್ಬಂದಿಯಲ್ಲಿ ಒಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ದುಷ್ಕೃತ್ಯಕ್ಕೆ ಮುಂದಾದವರನ್ನು ಪೊಲೀಸರು ವಾಹನ ಸಮೇತ ವಶಕ್ಕೆ ಪಡೆದಿದ್ದು, ಅವರ ವಿರುದ್ಧ ಕೊಲೆಯತ್ನ ಕೇಸ್ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್)