ನೆಗೆಟಿವ್​ ರಿವ್ಯೂವ್​ ಕೊಟ್ರೆ… ಯೂಟ್ಯೂಬರ್​ಗೆ ಬೆದರಿಕೆ ಹಾಕಿದ ನಿರ್ಮಾಪಕ! ಆಡಿಯೋ ವೈರಲ್​

ವಿಜಯವಾಣಿ - 2024-09-20T105225.439
Published on

ತಮಿಳುನಾಡು: ಭಾರತೀಯ ಚಲನಚಿತ್ರೋದ್ಯಮದಿಂದ ಪ್ರತಿವಾರ ಸಾಲು ಸಾಲು ಸಿನಿಮಾಗಳು ಚಿತ್ರಮಂದಿಗರಳಿಗೆ ಲಗ್ಗೆಯಿಡುತ್ತಿದ್ದು, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣವೇ ಉಣಬಡಿಸಲಾಗುತ್ತಿದೆ. ಪ್ಯಾನ್ ಇಂಡಿಯಾ ಸೇರಿದಂತೆ ಯಾವುದೇ ಜಾನರ್​ನ ಚಿತ್ರಗಳು ಥಿಯೇಟರ್​ಗೆ ಎಂಟ್ರಿ ಕೊಟ್ಟ ಮೊದಲ ದಿನದ ಮೊದಲನೇ ಶೋ ಮುಗಿದು ಮುಂದಿನ ಆಟ ಆರಂಭ ಆಗುವುದರೊಳಗೆ ಅದು ಹೇಗಿದೆ? ಚೆನ್ನಾಗಿದೆಯೋ ಅಥವಾ ಫ್ಲಾಪ್ ಚಿತ್ರವೋ ಎಂಬುದು ಒಂದೇ ಒಂದು ರಿವ್ಯೂವ್​ ಮೂಲಕ ಸ್ಪಷ್ಟವಾಗುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ರಿವ್ಯೂವ್​ಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಸಿನಿರಸಿಕರ ಬೆರಳಂಚಿಗೆ ಚಿತ್ರ ಹೇಗೆ ಮೂಡಿಬಂದಿದೆ ಎಂಬುದರ ಪೂರ್ಣ ಚಿತ್ರಣವನ್ನೇ ತಮ್ಮ ಚಾನೆಲ್​ನಲ್ಲಿ ಕಳಚಿಡುತ್ತಾರೆ.

ಈ ಸಾಲಿನಲ್ಲಿ ತಮಿಳಿನ ಯೂಟ್ಯೂಬರ್​ ಉನ್ನಿಕೃಷ್ಣನ್​ ತಮಗೆ ಬೆದರಿಕೆ ಕರೆಯೊಂದು ಬಂದಿದ್ದು, ಅದನ್ನು ರೆಕಾರ್ಡ್​ ಮಾಡಿಕೊಳ್ಳುವುದರ ಜತೆಗೆ ತಮ್ಮ ವೀಕ್ಷಕರ ಮುಂದೆ ಬಹಿರಂಗ ಪಡಿಸಿದ್ದಾರೆ. 'ಉನ್ನಿಸ್ ವ್ಲಾಗ್ ಸಿನೆಫೈಲ್' ಎಂಬ ಹೆಸರಿನ ಯೂಟ್ಯೂಬರ್ ಉನ್ನಿಕೃಷ್ಣನ್, ಗುರುವಾರ (ಸೆ.19) ತನಗೆ ಬಂದ ಬೆದರಿಕೆ ಕರೆಯನ್ನು ಒಳಗೊಂಡ ವೀಡಿಯೊವನ್ನು ತಮ್ಮ ಚಾನೆಲ್​ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ವೀಡಿಯೊದಲ್ಲಿ, ಕರೆ ಮಾಡಿದವರು ತನ್ನನ್ನು ಅಬಾಮ್ ಮೂವೀಸ್‌ನ ಚಲನಚಿತ್ರ ನಿರ್ಮಾಪಕ ಅಬ್ರಹಾಂ ಮ್ಯಾಥ್ಯೂ ಎಂದು ಹೇಳಿಕೊಂಡಿರುವುದು ಗೊತ್ತಾಗಿದೆ.

ನಾನು ನಿರ್ಮಾಣದ ಚಿತ್ರದ ವಿಮರ್ಶೆಯನ್ನು ಈ ಕೂಡಲೇ ತೆಗೆದುಹಾಕಬೇಕು. ಒಂದು ಸಿನಿಮಾವನ್ನು ವಿಮರ್ಶೆ ಮಾಡುವ ಹಕ್ಕು ನಿನಗೆ ಯಾರು ಕೊಟ್ಟಿದ್ದು? ತಕ್ಷಣವೇ ಅದನ್ನು ಡಿಲೀಟ್ ಮಾಡು, ಇಲ್ಲದಿದ್ದರೆ ಸರಿಯಾದ ಪರಿಣಾಮ ಎದುರಿಸಲು ರೆಡಿಯಾಗಿರು ಎಂದು ಬೆದರಿಕೆಯೊಡ್ಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿ ಯೂಟ್ಯೂಬರ್​, ಕರೆ ಮಾಡಿರುವ ನೀವು ಎಲ್ಲಿಂದ ಮಾತನಾಡುತ್ತಿದ್ದೀರಿ ಹಾಗೂ ಯಾರೆಂದು ಸರಿಯಾದ ಮಾಹಿತಿ ಕೊಟ್ಟರೆ ತಕ್ಷಣವೇ ಡಿಲೀಟ್ ಮಾಡ್ತೀನಿ ಎಂದಿದ್ದಾರೆ. ಈ ಮಾತನ್ನು ಕೇಳಿದ ಬಳಿಕ ಇಲ್ಲ, ನಾನ್ಯಾರು ಎಂಬುದನ್ನು ಈಗ ರಿವೀಲ್ ಮಾಡಲು ಸಾಧ್ಯವಿಲ್ಲ ಎಂದು ನಿರ್ಮಾಪಕ ಎಂದು ಕರೆ ಮಾಡಿದ ವ್ಯಕ್ತಿ ಹೇಳಿದ್ದಾರೆ.

ಸದ್ಯ ಈ ವಿಚಾರ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ನೆಟ್ಟಿಗರು, ಆತನ ಬೆದರಿಕೆ ಕೇಳಿಬಂದ ಬೆನ್ನಲ್ಲೇ ಅವರ ಚಾನೆಲ್​ನಿಂದ ವಿಡಿಯೋ ಡಿಲೀಟ್ ಆಗಿದೆ ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net