

ನವದೆಹಲಿ: ಕಳೆದ ತಿಂಗಳಿನಿಂದ ಒಂದಲ್ಲ ಒಂದು ವಿಚಾರಗಳಿಂದ ಜಾಲತಾಣಗಳಲ್ಲಿ ಸಖತ್ ಸುದ್ದಿಯಾಗುತ್ತಿರುವ ಟೀಮ್ ಇಂಡಿಯಾದ ಓಪನಿಂಗ್ ಬ್ಯಾಟ್ಸ್ಮನ್, ವಿಕೆಟ್ ಕೀಪರ್ ಆದ ಕನ್ನಡಿಗ ಕೆ.ಎಲ್. ರಾಹುಲ್, ಕೇವಲ ಕನ್ನಡಿಗರಿಗೆ ಮಾತ್ರವಲ್ಲದೇ ಇಡೀ ದೇಶ ಮೆಚ್ಚಿದ ಸ್ಟಾರ್ ಕ್ರಿಕೆಟರ್. ರೋಹಿತ್ ಶರ್ಮ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಟೂರ್ನಿ ಹಾಗೂ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಶ್ರೀಲಂಕಾ ಸರಣಿಯ ಭಾಗವಾಗಿ ತಂಡದಲ್ಲಿ ಪಡೆಯಬೇಕಿದ್ದ ಅವಕಾಶವನ್ನು ಕಳೆದುಕೊಂಡ ರಾಹುಲ್, ಮುಂಬರುವ ಐಪಿಎಲ್ನಲ್ಲಿ ಆರ್ಸಿಬಿ ಸೇರಲಿದ್ದಾರೆ ಎಂಬ ಸುದ್ದಿಗಳು ಸದ್ಯ ವ್ಯಾಪಕವಾಗಿ ಹರಿದಾಡುತ್ತಿವೆ. ಈ ಮಧ್ಯೆ ಟೀಮ್ ಇಂಡಿಯಾದ ಹಿರಿಯ ಆಟಗಾರ ಆಕಾಶ್ ಚೋಪ್ರಾ ನೀಡಿದ ಹೇಳಿಕೆ ಇದೀಗ ಕ್ರಿಕೆಟ್ ಪ್ರೇಮಿಗಳಲ್ಲಿ ಭಾರೀ ಗೊಂದಲ ಮೂಡಿಸಿದೆ.
ಇಂದು ಚೆನ್ನೈನಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ಗೆ ಇಳಿದಿರುವ ಟೀಮ್ ಇಂಡಿಯಾ ಬಹುಬೇಗನೆ ನಾಲ್ಕು ಮುಖ್ಯ ವಿಕೆಟ್ಗಳನ್ನು ಕಳೆದುಕೊಂಡು ಬಾಂಗ್ಲಾ ವಿರುದ್ಧ ಅಬ್ಬರಿಸಲು ಹೆಣಗಾಡಿದೆ. ಆರಂಭಿಕ ಹಂತದಲ್ಲೇ ತಂಡದ ಸ್ಟಾರ್ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಶುಭಮನ್ ಗಿಲ್ ಹಾಗೂ ರಿಷಬ್ ಪಂತ್ ಬಾಂಗ್ಲಾದೇಶ ವೇಗಿಗಳಿಗೆ ತಮ್ಮ ವಿಕೆಟ್ ಒಪ್ಪಿಸಿ, ಪೆವಿಲಿಯನ್ನತ್ತ ಮುಖಮಾಡಿದರು. ಇನ್ನು ಈ ವೇಳೆ ಬ್ಯಾಟಿಂಗ್ ಆರ್ಡರ್ ಬದಲಿಸಿದ ಮ್ಯಾನೇಜ್ಮೆಂಟ್ ರಾಹುಲ್ ಬದಲಿಗೆ ಪಂತ್ರನ್ನು ಕಣಕ್ಕಿಳಿಸಿದರು. ಇದು ಹಲವರಲ್ಲಿ ಗೊಂದಲ ಮೂಡಿಸಿತು.
ಇನ್ನು ಈ ಬಗ್ಗೆ ಮಾತನಾಡಿದ ಟೀಮ್ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ, "ಭಾರತ ಕ್ರಿಕೆಟ್ ತಂಡಕ್ಕೆ ಕೆ.ಎಲ್. ರಾಹುಲ್ ಒಂದು ರೀತಿ ಸ್ಟೆಪ್ನಿ ಇದ್ದಂತೆ. ಏಕೆಂದರೆ, ರಾಹುಲ್ ಯಾವ ಸ್ಥಾನದಲ್ಲಿ ಬೇಕಾದರೂ ಆಡಬಲ್ಲರು. ಓಪನಿಂಗ್ಗೂ ಸೈ, ಟಾಪ್, ಮಿಡಲ್ ಹಾಗೂ 6ನೇ ಕ್ರಮಾಂಕದಲ್ಲಿ ಆಡುವುದಕ್ಕೂ ಸೈ. ಎಲ್ಲಿ ಬೇಕಾದರೂ ಅವರು ಫಿಟ್ ಆಗ್ತಾರೆ. ಮುಂದಿನ ದಿನಗಳಲ್ಲಿ ರಾಹುಲ್ ಮೂರನೇ ಕ್ರಮಾಂಕದಲ್ಲಿ ಬಂದರೂ ಅಚ್ಚರಿ ಪಡಬೇಡಿ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬ್ಯಾಡ್ಮಿಂಟನ್ ಕ್ರೀಡಾಂಗಣ ನಿರ್ಲಕ್ಷ್ಯ
ಪ್ರಸ್ತುತ ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ (6), ಶುಭಮನ್ ಗಿಲ್ (0), ವಿರಾಟ್ ಕೊಹ್ಲಿ (6), ರಿಷಬ್ ಪಂತ್ (39), ಯಶಸ್ವಿ ಜೈಸ್ವಾಲ್ (56) ಮತ್ತು ಕೆ.ಎಲ್. ರಾಹುಲ್ (16) ರನ್ ಗಳಿಸಿ ಪೆವಿಲಿಯನ್ ಸೇರಿದ್ದಾರೆ,(ಏಜೆನ್ಸೀಸ್).