

ರಾಜಸ್ಥಾನ: ಇತ್ತೀಚಿನ ದಿನಗಳಲ್ಲಿ ಜೋತಿಷ್ಯ ಕೇಳಿಸಿ, ಅವರೇಳುವ ದಿನ, ಸಮಯಕ್ಕೆ ಅನುಗುಣವಾಗಿ ಮಗುವಿಗೆ ಜನ್ಮ ನೀಡುವ ತಾಯಂದಿರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೂಲಕ ತಮ್ಮ ಮಗುವಿಗೆ ಜನನ ಕೊಡಲು ಮುಂದಾಗುವ ಗರ್ಭಿಣಿಯರು, ಆಯಾ ಜೋತಿಷಿಗಳು ನಿಗದಿಪಡಿಸುವ ದಿನಾಂಕ ಮತ್ತು ವೇಳೆಗೆ ಸರಿಯಾಗಿ ಮಗುವಿಗೆ ಜನ್ಮ ಕೊಡಲು ಇಚ್ಛಿಸುತ್ತಾರೆ. ಇದು ಅವರವರ ನಂಬಿಕೆಯಾಗಿದೆ.
ಒಂದಷ್ಟು ಆಸ್ಪತ್ರೆಗಳಲ್ಲಿ ಈ ರೀತಿಯ ಅಭ್ಯಾಸಗಳಿಗೆ ಅಸ್ತು ಎನ್ನಲಾಗುತ್ತದೆ. ಆದ್ರೆ, ಇಲ್ಲೊಂದು ಆಸ್ಪತ್ರೆಯಲ್ಲಿ ಮಾತ್ರ ಇದ್ಯಾವುದಕ್ಕೂ ಕಿಂಚಿತ್ತು ಅವಕಾಶವೂ ಇಲ್ಲ, ಆಸ್ಪದವೂ ಇಲ್ಲ. ಗರ್ಭಿಣಿಯರು ತಮ್ಮ ಮಗುವಿಗೆ ಇದೇ ದಿನಾಂಕ, ಸಮಯದಂದು ಜನ್ಮ ನೀಡಬೇಕೆಂಬ ಬಯಕೆಯಿಂದ ವೈದ್ಯರಲ್ಲಿ ಒತ್ತಾಯ ಮಾಡುತ್ತಾರೆ ಎಂದು ರಾಜಸ್ಥಾನದ ಕಿಷ್ನಗರ್ನಲ್ಲಿರುವ ಮಾರ್ಬಲ್ ನಗರ ಆಸ್ಪತ್ರೆಯಲ್ಲಿ ದೊಡ್ಡ ಫಲಕವೊಂದನ್ನೇ ಅಳವಡಿಸಲಾಗಿದೆ. ಜೋತಿಷ್ಯ ಕೇಳಿಕೊಂಡು, ಮಹೂರ್ತ ಪಾಲಿಸುವ ಗರ್ಭಿಣಿಯರಿಗೆ ಇಲ್ಲಿ ಹೆರಿಗೆ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಈ ಬೋರ್ಡ್ನಲ್ಲಿ ಉಲ್ಲೇಖಿಸಲಾಗಿದೆ.
ಜ್ಯೋತಿಷ್ಯ ನಂಬಿ, ದಿನಾಂಕ, ವೇಳೆ ನಿಗದಿಪಡಿಸಿಕೊಂಡು ನಮ್ಮ ಆಸ್ಪತ್ರೆಗೆ ಬರುವ ಗರ್ಭಿಣಿಯರಿಗೆ ನಾವು ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡುವುದಿಲ್ಲ ಎಂದು ಮಾರ್ಬಲ್ ಆಸ್ಪತ್ರೆ ನೋಟಿಸ್ ಬೋರ್ಡ್ನಲ್ಲಿ ತಿಳಿಸಿದೆ. ಈ ವಿಚಾರ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಕೆಲವು ನೆಟ್ಟಿಗರು ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಕಿಡಿಕಾರಿದ್ದು, ಅದು ಅವರವರ ನಂಬಿಕೆಯಾಗಿದೆ. ನಾವು ಕೂಡ ಇದೇ ರೀತಿಯಲ್ಲಿ ಹೆರಿಗೆ ಮಾಡಿಸಿಕೊಂಡಿದ್ದೇವೆ. ಅದರಲ್ಲಿ ತಪ್ಪೇನಿದೆ? ಇದು ಸರಿಯಲ್ಲ ಎಂದು ಅಭಿಪ್ರಾಯಿಸಿದ್ದಾರೆ. ಸದ್ಯ ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ಹರಿದುಬರುತ್ತಿವೆ,(ಏಜೆನ್ಸೀಸ್).