

ತೆಲಂಗಾಣ: ಕಳೆದ ಒಂದೂವರೆ ತಿಂಗಳಿನಿಂದ ಟಾಲಿವುಡ್ ಅಂಗಳದಲ್ಲಿ ಸಿನಿಮಾ ಸುದ್ದಿಗಿಂತಲೂ ಹೆಚ್ಚು ಸದ್ದು ಮಾಡುತ್ತಿರುವುದು ಯುವ ನಟ ರಾಜ್ ತರುಣ್ ಮತ್ತು ಲಾವಣ್ಯ ಪ್ರೇಮ ವಿವಾದ. 11 ವರ್ಷಗಳ ಲಿವ್ಇನ್ ರಿಲೇಷನ್ಶಿಪ್ನಲ್ಲಿದ್ದು, ಪ್ರೀತಿಸಿ, ಗುಟ್ಟಾಗಿ ಮದುವೆಯಾಗಿ ಇದೀಗ ತನಗೆ ಮೋಸ ಮಾಡಿದ್ದಾನೆ ಎಂದು ತೆಲುಗು ನಟ ರಾಜ್ ತರುಣ್ ವಿರುದ್ಧ ಗಂಭೀರ ಆರೋಪ ಹೊರಿಸಿರುವ ಪ್ರೇಯಸಿ ಲಾವಣ್ಯ, ರಾಜ್ನಿಂದ ನನಗೆ ಅನ್ಯಾಯವಾಗಿದೆ. ಆತ ತನ್ನ ಸಹ ನಟಿಯಾದ ಮಾಳ್ವಿ ಮಲ್ಹೋತ್ರಾ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ, ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಹೈಕೋರ್ಟ್ ನಟನಿಗೆ ಜಾಮೀನು ನೀಡಿ, ಬಿಗ್ ರಿಲೀಫ್ ನೀಡಿತ್ತು. ಇಷ್ಟಕ್ಕೆ ಸುಮ್ಮನಾಗದ ಲಾವಣ್ಯ, ನನಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುವೆ ಎಂದು ಪಟ್ಟುಹಿಡಿದಿದ್ದರು. ಇತ್ತೀಚೆಗಷ್ಟೇ ಅದಕ್ಕೆ ಪೂರಕವಾಗುವಂತೆ ಸ್ಫೋಟಕ ಸಾಕ್ಷ್ಯಗಳನ್ನು ಕೂಡ ಪೊಲೀಸರಿಗೆ ಒದಗಿಸಿದ್ದರು. ಸದ್ಯ ವಿವಾದದ ಅಲೆಗೆ ಸಿಲುಕಿರುವ ರಾಜ್ ಚಿತ್ರರಂಗದಲ್ಲಿ ಸತತ ಹೀನಾಯ ಸೋಲನ್ನು ಕಂಡಿದ್ದಾರೆ.
ಇದನ್ನೂ ಓದಿ: ಜಾನಪದ ಕಲೆ ಭಾರತೀಯ ಸಂಸ್ಕೃತಿಯ ಪ್ರತೀಕ
ಪ್ರೀತಿ ಹೆಸರಲ್ಲಿ ವಂಚನೆ ಆರೋಪದಡಿ ಸಿಲುಕಿ ದೊಡ್ಡ ವಿವಾದವನ್ನೇ ಎದುರಿಸುತ್ತಿರುವ ಯುವನಟ ರಾಜ್ ತರುಣ್, ಕಾಂಟ್ರೋವರ್ಸಿಯಿಂದ ತಮ್ಮ ಮೂರು ಬಹುನಿರೀಕ್ಷಿತ ಸಿನಿಮಾಗಳಲ್ಲಿ ಹೀನಾಯ ಸೋಲು ಅನುಭವಿಸಿದರು. ಕಳೆದ ಎರಡು ತಿಂಗಳಿಂದ ರಿಲೀಸ್ಗೆ ಸಜ್ಜಾದ ಚಿತ್ರಗಳ ಪ್ರಚಾರ ಕಾರ್ಯಕ್ರಮಗಳಿಗೂ ತಂಡದ ಪರವಾಗಿ ಹಾಜರಾಗದ ರಾಜ್, ವಿವಾದಗಳಿಂದ ಭಾರೀ ಮುಖಭಂಗ ಎದುರಿಸುತ್ತಿದ್ದಾರೆ. ಸದ್ಯ ಮೂರು ಚಿತ್ರಗಳ ಸೋಲಿನಿಂದ ಕಂಗಾಲಾಗಿರುವ ರಾಜ್ ತರುಣ್, ಇದೀಗ ಪ್ರಾರಂಭದ ದಿನಗಳಲ್ಲಿ ತಾನು ಅನುಭವಿಸಿದ ಕಷ್ಟ, ಪಟ್ಟ ಪಾಡನ್ನು ನೆನೆದು ಭಾವುಕರಾಗಿದ್ದಾರೆ.
"ಆರಂಭಿಕ ದಿನಗಳಲ್ಲಿ ನಾನೊಬ್ಬ ಕ್ರೇಜಿ ನಟ. ಆಗ ಯಾರಾದರೂ ನನ್ನ ಪ್ರತಿಭೆಯನ್ನು ಗುರುತಿಸಿ, ಚಿತ್ರರಂಗಕ್ಕೆ ಒಂದು ಆಹ್ವಾನ ಕೊಟ್ಟರೆ ಸಾಕಪ್ಪ ಎಂದು ಕಾತರದಿಂದ ಕಾಯುತ್ತಿದ್ದೆ. 52 ಕಿರುಚಿತ್ರಗಳನ್ನು ಮಾಡಿದ ನಂತರ ರಾಮ್ಮೋಹನ್ ಎಂಬುವವರು ನನ್ನನ್ನು ಒಂದು ದಿನ ತಮ್ಮ ಕಛೇರಿಗೆ ಬರುವಂತೆ ತಿಳಿಸಿದರು. ನೀನು ನಟಿಸುತ್ತಿಯೋ ಅಥವಾ ನಿರ್ದೇಶನ ಮಾಡ್ತೀಯೋ ಎಂದರು. ಅದಕ್ಕೆ ನಾನು ನಿರ್ದೇಶನ ಎಂದು ಹೇಳಿದೆ. ಹೀಗಂದಮೇಲೆ ನಾನು ಅವರ ಮಾರ್ಗದರ್ಶನದಲ್ಲಿ ಅಸಿಸ್ಟೆಂಟ್ ನಿರ್ದೇಶಕನಾಗಿ 3000 ರೂ. ಸಂಬಳಕ್ಕೆ ಕೆಲಸ ಮಾಡಿದೆ" ಎಂದು ಹೇಳಿದರು.
"ಚಿತ್ರದ ಒಂದೇ ಒಂದು ಸೀನ್ಗಾಗಿ ಬೆಳಗ್ಗೆಯಿಂದ ರಾತ್ರಿಯವರೆಗೂ ಚರ್ಚೆ ಮಾಡುತ್ತಿದ್ದೆವು. ಆದ್ರೆ, ನನಗೆ ಅದ್ಯಾವುದು ಕಷ್ಟ ಅನಿಸುತ್ತಿರಲಿಲ್ಲ. ಒಂದು ದಿನ ಅವರು ಈ ಸ್ಕ್ರಿಪ್ಟ್ ಸರಿಹೊಂದಲ್ಲ. ನೀನು ಇಲ್ಲೇ ಇದ್ದರೆ ಯಾವ ಕೆಲಸವು ಮುಂದೆ ಸಾಗುವುದಿಲ್ಲ, ಹೊರಟು ಹೋಗಿಬಿಡು ಎಂದರು. ಆಗ ಒಂದು ನಿಮಿಷ ಮುಂದೇನು ಮಾಡಬೇಕು ಎಂದು ನನಗೆ ತೋಚಲಿಲ್ಲ. ಬಿ.ಟೆಕ್ ಮಧ್ಯದಲ್ಲಿ ನಿಲ್ಲಿಸಿದ್ದ ನಾನು ಆಗ 20 ವರ್ಷದ ಯುವಕ. ಹೊಟ್ಟೆ ತುಂಬ ಹಸಿಯುತ್ತಿತ್ತು. 11 ದಿನಗಳ ಕಾಲ ಫುಟ್ಪಾತ್ ಮೇಲೆ ಮಲಗಿದ್ದೆ. ಕೇವಲ ನೀರು ಕುಡಿದೆ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆ. ಆದಾದ ನಂತರ ಒಂದಷ್ಟು ದಿನಗಳ ಬಳಿಕ ರಾಮ್ಮೋಹನ್ ಅವರೇ ಕರೆದು ಕೆಲಸ ಕೊಟ್ಟರು" ಎಂದು ರಾಜ್ ತರುಣ್ ನಮ್ಮ ಕಷ್ಟದ ದಿನಗಳನ್ನು ಮೆಲುಕು ಹಾಕಿ ಭಾವುಕರಾಗಿದ್ದಾರೆ,(ಏಜೆನ್ಸೀಸ್).