

ಲಖನೌ: 2022ರ ಮೊದಲ ಭಾಗದಲ್ಲಿ ನಡೆಯಲಿರುವ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಹೊರಬಿಟ್ಟಿದೆ. ಇಂದು ಯುಪಿಯ ಬಾರಾಬಂಕಿಯಲ್ಲಿ ಪಕ್ಷದ 'ಪ್ರತಿಗ್ಯಾ ಯಾತ್ರಾ'ಗೆ ಚಾಲನೆ ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಹತ್ತುಹಲವು ಸೌಲಭ್ಯಗಳನ್ನು ನೀಡುವ ಭರವಸೆಗಳುಳ್ಳ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
"ನಮ್ಮ ಪ್ರಣಾಳಿಕೆಯ ಕೆಲವು ಮುಖ್ಯ ವಾಯ್ದೆಗಳೆಂದರೆ ಶಾಲೆಗೆ ಹೋಗುವ ಹೆಣ್ಣುಮಕ್ಕಳಿಗೆ ಉಚಿತ ಈ-ಸ್ಕೂಟಿ ಮತ್ತು ಮೊಬೈಲ್ ಫೋನುಗಳ ವಿತರಣೆ, ರೈತರ ಸಾಲ ಮನ್ನಾ, ಬಡಕುಟುಂಬಗಳಿಗೆ ಪ್ರತಿವರ್ಷ 25 ಸಾವಿರ ರೂಪಾಯಿ ನೀಡಿಕೆ, ಎಲ್ಲರಿಗೂ ಅರ್ಧಪಟ್ಟು ವಿದ್ಯುತ್ ಬಿಲ್ ಮತ್ತು ಕೋವಿಡ್ ಅವಧಿಯ ಎಲ್ಲಾ ಬಾಕಿ ವಿದ್ಯುತ್ ಬಿಲ್ಗಳನ್ನು ಮನ್ನಾ ಮಾಡುವುದು" ಎಂದು ಪ್ರಿಯಾಂಕ ಹೇಳಿದರು.
ಇವೆಲ್ಲದರೊಂದಿಗೆ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆಯನ್ನೂ ನೀಡಿರುವ ಕಾಂಗ್ರೆಸ್ ಪ್ರಣಾಳಿಕೆಯು, ಬಹುತೇಕ ಸಮಾಜ ಕಲ್ಯಾಣ ಯೋಜನೆಗಳಿಗೇ ಆದ್ಯತೆ ನೀಡಿದೆ. ಅಕ್ಕಿ ಮತ್ತು ಗೋಧಿಗೆ ಕ್ವಿಂಟಾಲ್ಗೆ 2500 ರೂಪಾಯಿ ಎಂಎಸ್ಪಿ ಮತ್ತು ಕಬ್ಬಿಗೆ 400 ರೂ. ಎಂಎಸ್ಪಿ ನೀಡುವುದಾಗಿಯೂ ಕಾಂಗ್ರೆಸ್ ಆಶ್ವಾಸನೆ ನೀಡಿದೆ.
ಆಡಳಿತಾರೂಢ ಬಿಜೆಪಿ ಮತ್ತು ವಿರೋಧಪಕ್ಷವಾದ ಸಮಾಜವಾದಿ ಪಾರ್ಟಿಗಳು ಇನ್ನೂ ಚುನಾವಣಾ ಪ್ರಣಾಳಿಕೆ ಪ್ರಕಟಿಸಿಲ್ಲ. ಈ ಕೆಲಸ ಮಾಡಿದ ಮೊದಲಿಗ ಪಕ್ಷವಾಗಿ ಕಾಂಗ್ರೆಸ್ ಮತದಾರರ ಒಲವು ಸೆಳೆಯುವತ್ತ ಗಮನ ಕೇಂದ್ರೀಕರಿಸಿದೆ. (ಏಜೆನ್ಸೀಸ್)