

ಬೆಂಗಳೂರು: ರಾಜಧಾನಿ ಬೆಂಗಳೂರು ನಗರದ ರಸ್ತೆ ಗುಂಡಿಗಳು ಹಾಗೂ ಕಳಪೆ ರಸ್ತೆ ಕಾಮಗಾರಿ ವಿರುದ್ಧ ಹೋರಾಡಲು ಆಮ್ ಆದ್ಮಿ ಪಾರ್ಟಿ(ಎಎಪಿ)ಯು ಕಾರ್ಯಪಡೆ ಹಾಗೂ ವಾಟ್ಸ್ಆ್ಯಪ್ ಸಹಾಯವಾಣಿಯನ್ನು ಆರಂಭಿಸಿದೆ ಎಂದು ಪಕ್ಷದ ಮುಖಂಡ ಹಾಗೂ ವಕೀಲ ಜಗದೀಶ್ ಕೆ.ಎನ್.ಮಹಾದೇವ್ ತಿಳಿಸಿದ್ದಾರೆ.
ಇಂದು ನಗರದ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಯ ಭ್ರಷ್ಟಾಚಾರದಿಂದಾಗಿ ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ಯಮಸ್ವರೂಪಿ ಗುಂಡಿಗಳು ಬಿದ್ದಿವೆ. ಇವುಗಳಿಂದಾಗಿ ಕೆಲವು ವಾಹನ ಸವಾರರು ಕೈಕಾಲು ಮುರಿದುಕೊಂಡರೆ, ಇನ್ನು ಕೆಲವರು ಜೀವವನ್ನೇ ಕಳೆದುಕೊಂಡಿದ್ದಾರೆ. ರಸ್ತೆ ಗುಂಡಿಗಳ ವಿರುದ್ಧ ಆಮ್ ಆದ್ಮಿ ಪಾರ್ಟಿ ಸಮರ ಆರಂಭಿಸಿದ್ದು, ಇದಕ್ಕಾಗಿ ವಿಶೇಷ ಕಾರ್ಯಪಡೆ ಹಾಗೂ ವಾಟ್ಸಾಪ್ ಸಹಾಯವಾಣಿಯನ್ನು ಆರಂಭಿಸುತ್ತಿದ್ದೇವೆ. ಸೂಕ್ತ ಕಾನೂನು ಹೋರಾಟದಿಂದ ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡುವ ಪಣತೊಟ್ಟಿದ್ದೇವೆ ಎಂದರು.
ನಗರದಲ್ಲಿ ಕಳಪೆ ರಸ್ತೆ ಕಾಮಗಾರಿ ನಡೆಯುತ್ತಿರುವುದು ಹಾಗೂ ಅಪಾಯಕಾರಿ ಗುಂಡಿಗಳು ಕಂಡುಬಂದರೆ ತಕ್ಷಣವೇ ಎಎಪಿ ವಾಟ್ಸಾಪ್ ಸಹಾಯವಾಣಿ 9513319676 ಸಂಖ್ಯೆಗೆ ಮೆಸೇಜ್ ಕಳುಹಿಸಬಹುದು. ನಮ್ಮ ಕಾರ್ಯಪಡೆಯು ಪರಾಮರ್ಶೆ ನಡೆಸಿ ಕೂಡಲೇ ಕಾರ್ಯಪ್ರವೃತ್ತವಾಗುತ್ತದೆ. ಬಿಬಿಎಂಪಿ, ಸ್ಥಳೀಯ ಶಾಸಕ, ಮಾಜಿ ಕಾರ್ಪೊರೇಟರ್, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಿಸಿ, ಕಾನೂನು ಹೋರಾಟ ಆರಂಭಿಸಲಾಗುತ್ತದೆ ಎಂದು ಜಗದೀಶ್ ಮಹಾದೇವ್ ಹೇಳಿದರು.
ಎಎಪಿ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ಬೆಂಗಳೂರಿನ ರಸ್ತೆಗುಂಡಿಗಳಿಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷವು ನಿರಂತರವಾಗಿ ಹೋರಾಡುತ್ತಿದೆ. ಹಲವು ಪ್ರತಿಭಟನೆ ಹಾಗೂ ರಸ್ತೆಗುಂಡಿ ಹಬ್ಬ ಎಂಬ ವಿನೂತನ ಚಳುವಳಿ ನಡೆಸಿ ಜನಜಾಗೃತಿ ಮೂಡಿಸಿದ್ದೇವೆ. ಈಗ ವಾಟ್ಸಪ್ ಸಹಾಯವಾಣಿ ಹಾಗೂ ಕಾರ್ಯಪಡೆಯ ಮೂಲಕ ಮತ್ತೊಂದು ಹಂತದ ಹೋರಾಟ ಆರಂಭಿಸುತ್ತಿದ್ದೇವೆ ಎಂದರು.
ರಾಜ್ಯವನ್ನಾಳಿದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸರ್ಕಾರಗಳು ಬೆಂಗಳೂರಿನ ರಸ್ತೆಗಳಿಗಾಗಿ ಕಳೆದ ಐದು ವರ್ಷಗಳಲ್ಲಿ ಬರೋಬ್ಬರಿ 20,000 ಕೋಟಿ ಮೊತ್ತವನ್ನು, ಅಂದರೆ ದಿನಕ್ಕೆ ಸರಾಸರಿ 11 ಕೋಟಿ ರೂಪಾಯಿಯನ್ನು ಖರ್ಚು ಮಾಡಿವೆ. ಇದು ಜನರ ತೆರಿಗೆ ಹಣವಾಗಿದ್ದು, ಇದರಲ್ಲಾದ ಭ್ರಷ್ಟಾಚಾರವನ್ನು ಪ್ರಶ್ನಿಸುವ ಸಂಪೂರ್ಣ ಹಕ್ಕು ಜನರಿಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ವಕೀಲ ಮಂಜುನಾಥ ಸ್ವಾಮಿ ಉಪಸ್ಥಿತರಿದ್ದರು.