ನ್ಯಾಯಾಧೀಶರ ಸಾವಿನ ತನಿಖೆ: ಸಿಬಿಐ ನಿರ್ದೇಶಕರಿಗೆ ಹೈಕೋರ್ಟ್​ ಬುಲಾವ್​

judge
Published on

ರಾಂಚಿ​: ಬೆಳಗಿನ ಜಾಗಿಂಗ್ ಹೋಗಿದ್ದ ನ್ಯಾಯಾಧೀಶರೊಬ್ಬರು ಅನುಮಾನಾಸ್ಪದ ‘ಅಪಘಾತ’ಕ್ಕೀಡಾಗಿ ಮೃತಪಟ್ಟಿದ್ದ ಪ್ರಕರಣದ ತನಿಖೆಯಲ್ಲಿನ ಪ್ರಗತಿಯ ಬಗ್ಗೆ ಝಾರ್ಕಂಡ್​ ಹೈಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ನಿರ್ದೇಶಕರಿಗೆ ಅ.29 ರಂದು ನಡೆಯಲಿರುವ ಪ್ರಕರಣದ ಮುಂದಿನ ವಿಚಾರಣೆ ವೇಳೆ ವಿಡಿಯೋ ಕಾನ್ವರೆನ್ಸ್​ ಮುಖಾಂತರ ಹಾಜರಿರಬೇಕೆಂದು ಹೈಕೋರ್ಟ್​ ಸೂಚನೆ ನೀಡಿದೆ.

ಕಳೆದ ಜುಲೈ 28 ರಂದು ರಾಜ್ಯದ ಧನಬಾದ್​​​ ಜಿಲ್ಲಾ ಮತ್ತು ಹೆಚ್ಚುವರಿ ನ್ಯಾಯಾಧೀಶರಾಗಿದ್ದ ಉತ್ತಮ್ ಆನಂದ್​ ಅವರು ಸಾವಪ್ಪಿದ್ದು, ಪೊಲೀಸರು ಹಿಟ್​ ಅಂಡ್​ ರನ್​ ಪ್ರಕರಣ ದಾಖಲಿಸಿದ್ದರು. ಆದರೆ, ರಸ್ತೆಯ ಬದಿಯಲ್ಲಿ ಜಾಗಿಂಗ್ ಮಾಡುತ್ತಿದ್ದ ಆನಂದ್​ ಅವರಿಗೆ ಹಿಂದಿನಿಂದ ಬಂದ ವಾಹನವು ಕೊಂಚ ತಿರುಗಿ ಡಿಕ್ಕಿ ಹೊಡೆದು ವೇಗವಾಗಿ ಚಲಿಸಿಹೋಗಿದ್ದ ಸಿಸಿಟಿವಿ ಫೂಟೇಜ್​, ಅದು ಅಪಘಾತವೋ ಕೊಲೆಯೋ ಎಂಬ ಶಂಕೆ ಮೂಡಿಸಿತ್ತು.

ಈ ಪ್ರಕರಣದ ತನಿಖೆಯನ್ನು ಝಾರ್ಕಂಡ್​ ಹೈಕೋರ್ಟ್​ನ ಮೇಲುಸ್ತುವಾರಿಯಲ್ಲಿ ಸಿಬಿಐಗೆ ವಹಿಸಲಾಗಿತ್ತು. ಪ್ರಕರಣದಲ್ಲಿ ಡಿಕ್ಕಿ ಹೊಡೆದ ಆಟೋರಿಕ್ಷಾದ ಚಾಲಕ ಲಖನ್​ ವರ್ಮಾ ಮತ್ತು ಆತನ ಸಹಚರ ರಾಹುಲ್​ ವರ್ಮಾ ಎಂಬುವರನ್ನು ಬಂಧಿಸಿದ್ದು, ಅವರ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಸಲಾಗಿದೆ ಎಂದು ವರದಿ ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net