

ಹೈದರಾಬಾದ್: ನಟ ಸಿದ್ದು ಜೊನ್ನಲಗಡ್ಡ ಮತ್ತು ನಟಿ ಅನುಪಮಾ ಪರಮೇಶ್ವರನ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ ಟಾಲಿವುಡ್ ಸೂಪರ್ ಹಿಟ್ ಸಿನಿಮಾ ಡಿಜಿ ಟಿಲ್ಲು ಸೀಕ್ವೆಲ್ ‘ಟಿಲ್ಲು ಸ್ಕ್ವೇರ್’ ಇದೇ ಮಾರ್ಚ್ 29ಕ್ಕೆ ಬಿಡುಗಡೆಯಾಗಲು ಸಜ್ಜಾಗಿದೆ. ಮೊದಲ ಭಾಗ ಸಿಕ್ಕಾಪಟ್ಟೆ ಹಿಟ್ ಆಗಿದ್ದರಿಂದ ಸಹಜವಾಗಿಯೇ ಎರಡನೇ ಭಾಗದ ಮೇಲಿನ ನಿರೀಕ್ಷೆ ಈಗ ದುಪ್ಪಟ್ಟಾಗಿದೆ. ಈಗಾಗಲೇ ಟ್ರೇಲರ್ ರಿಲೀಸ್ ಆಗಿದ್ದು, ಸಿನಿಪ್ರೇಕ್ಷಕರು ಏನೆಲ್ಲಾ ಊಹಿಸಿದ್ದರೋ ಅದೆಲ್ಲವೂ ಚಿತ್ರದಲ್ಲಿ ಇರುವುದು ಪಕ್ಕಾ ಎಂಬ ಸಂಗತಿ ತಿಳಿದು ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾರೆ.
ಚಿತ್ರದ ಟ್ರೇಲರ್ ಬಿಡುಗಡೆಯಾದಗಿನಿಂದಲೂ ನಟಿ ಅನುಪಮಾ ಹಾಗೂ ನಟ ಸಿದ್ದು ಲಿಪ್ಲಾಕ್ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ತೀವ್ರ ಚರ್ಚೆ, ಟೀಕೆಗೆ ಗುರಿಯಾಯಿತು. ಪ್ರತ್ಯೇಕವಾಗಿ ಕಿಸ್ಸಿಂಗ್ ಸೀನ್ ವಿಚಾರಕ್ಕೆ ನಟಿಯನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ ನೆಟ್ಟಿಗರು, ಇಂತಹ ದೃಶ್ಯ ಏಕೆ? ಎಂದು ಪ್ರಶ್ನಿಸಿದ್ದರು. ಇನ್ನು ಭಾರೀ ಅಸಮಾಧಾನ ಹೊರಹಾಕಿದ ಅನುಪಮಾ ಅಭಿಮಾನಿಗಳು, ಲಿಪ್ಲಾಕ್ ದೃಶ್ಯ ಮಾಡಿದ್ದರಿಂದ ನಮ್ಮ ಹೃದಯ ನುಚ್ಚುನೂರಾಗಿದೆ. ಈ ಸೀನ್ ನೀವು ಮಾಡಬಾರದಿತ್ತು. ಇದರಿಂದ ನೀವು ನಮ್ಮನ್ನು ಕಳೆದುಕೊಂಡಿದ್ದೀರಿ ಎಂದು ಅಭಿಪ್ರಾಯಿಸಿದ್ದರು.
ಮಲ್ಲಿಕ್ ರಾಮ್ ನಿರ್ದೇಶಿಸಿದ, ಅನುಪಮಾ ಪರಮೇಶ್ವರನ್ ಮತ್ತು ಸಿದ್ದು ಜೊನ್ನಲಗಡ್ಡ ನಟಿಸಿರುವ ಈ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪ್ರಖ್ಯಾತ ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ಭಾರೀ ಮೊತ್ತಕ್ಕೆ ಪಡೆದುಕೊಂಡಿದೆ ಎಂದು ವರದಿಯಾಗಿದೆ. ಆಸಕ್ತರ ಗಮನಕ್ಕಾಗಿ ಈ ಚಲನಚಿತ್ರದ ಪ್ರೀಕ್ವೆಲ್ ಇದೀಗ ಪ್ರಸ್ತುತ ಆಹಾದಲ್ಲಿ ವೀಕ್ಷಿಸಲು ಲಭ್ಯವಿದೆ.
ಚಿತ್ರದಲ್ಲಿ ಅನುಪಮಾ ಪರಮೇಶ್ವರನ್, ಸಿದ್ದು ಜೊನ್ನಲಗಡ್ಡ, ಮಡೋನ ಸಬಾಸ್ಟಿಯನ್, ವೆಂಕಟ್, ಮುರುಳಿಧರ್, ಪ್ರಣಿತ್ ರೆಡ್ಡಿ, ರಾಜ್, ಶ್ರೀರಾಮ್ ರೆಡ್ಡಿ ಮುಂತಾದವರ ತಾರಾಗಣವಿದೆ. ಚಿತ್ರಕ್ಕೆ ಎಸ್.ಥಮನ್ ಅವರ ಸಂಗೀತವಿದೆ,(ಏಜೆನ್ಸೀಸ್).