ಅಮೇಥಿಯಿಂದ ಚುನಾವಣೆಗೆ ಸ್ಪರ್ಧೆ; ಇದು ಬಿಜೆಪಿಯವರ ಪ್ರಶ್ನೆ ಎಂದು ಕಿಡಿಕಾರಿದ ರಾಹುಲ್

Rahul Gandhi
Published on

ಗಾಜಿಯಾಬಾದ್: ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಾಜಕೀಯ ಪಕ್ಷಗಳು ಬಿರುಸಿನ ಮತಬೇಟೆಯಲ್ಲಿ ತೊಡಗಿವೆ. ಇನ್ನು ಕಾಂಗ್ರೆಸ್​ನ ಭದ್ರಕೋಟೆ ಎಂದೇ ಖ್ಯಾತಿ ಪಡೆದಿರುವ ಅಮೇಥಿ ಹಾಗೂ ರಾಯ್ಬರೇಲಿಯಿಂದ ಪಕ್ಷ ಈವರೆಗೆ ಯಾರನ್ನೂ ಕಣಕ್ಕಿಳಿಸಿಲ್ಲ. ದಿನದಿಂದ ದಿನಕ್ಕೆ ಈ ಎರಡು ಕ್ಷೇತ್ರಗಳ ಕುರಿತಾದ ಸಸ್ಪೆನ್ಸ್​ ಹೆಚ್ಚುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ರಾಹುಲ್​ ಗಾಂಧಿ ಕೊಟ್ಟಿರುವ ಉತ್ತರ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ಗಾಜಿಯಾಬಾದ್​ನಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ಧೇಶಿಸಿ ಮಾತನಾಡಿದ ರಾಹುಲ್​ ಗಾಂಧಿ ಅವರಿಗೆ ಪತ್ರಕರ್ತರೊಬ್ಬರು ನೀವು ಅಮೇಥಿ ಅಥವಾ ರಾಯ್‌ಬರೇಲಿಯಿಂದ ಸ್ಪರ್ಧಿಸುತ್ತೀರಾ ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸಿದ ರಾಹುಲ್​, ಇದು ಬಿಜೆಪಿಯವರು ಕೇಳಬೇಕಾಗಿದ್ದ ಪ್ರಶ್ನೆ ಆದರೆ, ನೀವು ಕೇಳುತ್ತಿದ್ದೀರಾ ಎಂದು ಹೇಳಿದ್ದಾರೆ.

ಪರವಾಗಿಲ್ಲ ಎಂದು ನಾನು ನಿಮ್ಮ ಪ್ರಶ್ನೆಗೆ ಉತ್ತರಿಸುತ್ತೇನೆ. ನಾನು ಅಮೇಥಿ ಅಥವಾ ರಾಯ್‌ಬರೇಲಿಯಲ್ಲಿ ಸ್ಪರ್ಧಿಸಬೇಕೋ ಬೇಡವೋ ಎಂಬುದನ್ನು ಪಕ್ಷ ನಿರ್ಧರಿಸುತ್ತದೆ. ಪಕ್ಷದ ಆದೇಶವನ್ನು ನಾನು ಗೌರವಿಸುತ್ತೇನೆ ಎಂದು ಹೇಳುವ ಮೂಲಕ ರಾಹುಲ್​ ಗಾಂಧಿ ಅಮೇಥಿ ಅಥವಾ ರಾಯ್‌ಬರೇಲಿಯಲ್ಲಿ ಸ್ಪರ್ಧಿಸುವುದಾಗಿ ಪರೋಕ್ಷ ಸುಳಿವು ನೀಡಿದ್ದಾರೆ.

ರಾಹುಲ್ ಗಾಂಧಿ ಅವರನ್ನು ಅಮೇಥಿಯಿಂದ ಮತ್ತು ಪ್ರಿಯಾಂಕಾ ಗಾಂಧಿ ರಾಯ್ಬರೇಲಿಯಿಂದ ಸ್ಪರ್ಧಿಸಬೇಕೆಂದು ಕಾಂಗ್ರೆಸ್ ಬಯಸುತ್ತದೆ. ಇವರಿಬ್ಬರು ಅಮೇಥಿ ಹಾಗೂ ರಾಯ್ಬರೇಲಿಯಿಂದ ಸ್ಪರ್ಧಿಸುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಕಾಂಗ್ರೆಸ್​ ನಾಯಕ ಜೈರಾಮ್​ ರಮೇಶ್​ ಹೇಳಿಕೆ ನೀಡಿದ್ದರು. ಇತ್ತ ಜೈರಾಮ್​ ರಮೇಶ್​ ಬೆನ್ನಲ್ಲೇ ರಾಹುಲ್​ ಗಾಂಧಿ ಹೇಳಿಕೆ ನೀಡಿರುವುದು ಹಲವು ವಿಚಾರಗಳಿಗೆ ಪುಷ್ಠಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net