

One Rupee Coin : ಒಂದು ರೂಪಾಯಿ ನಾಣ್ಯದಲ್ಲಿ ಏನನ್ನು ಖರೀದಿ ಮಾಡಬಹುದು? 90ರ ದಶಕದಲ್ಲಿ 1 ರೂ. ನಾಣ್ಯದಲ್ಲಿ ಸಾಕಷ್ಟು ತಿಂಡಿಗಳನ್ನು ಖರೀದಿ ಮಾಡಬಹುದಿತ್ತು. ಆದರೆ, ಇಂದು 1 ರೂ. ಲೆಕ್ಕಕ್ಕೇ ಇಲ್ಲ. ಕೇವಲ ಚಿಲ್ಲರೆಗಷ್ಟೇ ಸೀಮಿತವಾಗಿದೆ. ಕಳೆದ ಎರಡು ದಶಕಗಳಲ್ಲಿ ಒಂದು ರೂಪಾಯಿ ನಾಣ್ಯಗಳ ವಿತ್ತೀಯ ಮೌಲ್ಯವು ಗಣನೀಯವಾಗಿ ಕಡಿಮೆಯಾಗಿದೆ ಮತ್ತು ಯಾವುದನ್ನೂ ಖರೀದಿಸಲು ಬಳಸಲಾಗುತ್ತಿಲ್ಲ.
ಆದರೆ, ಒಂದು ಅಚ್ಚರಿಯ ಸಂಗತಿ ಏನು ಗೊತ್ತಾ? ಈ ಒಂದು ರೂಪಾಯಿ ನಾಣ್ಯವನ್ನು ತಯಾರಿಸುವ ವೆಚ್ಚವು ಅದರ ಸ್ವಂತ ಮೌಲ್ಯಕ್ಕಿಂತಲೂ ಹೆಚ್ಚಿದೆ. ಆರ್‌ಟಿಐ ಅರ್ಜಿಗೆ ಸಿಕ್ಕ ಉತ್ತರದ ಪ್ರಕಾರ, 1992 ರಿಂದ ಚಲಾವಣೆಯಲ್ಲಿರುವ ಒಂದು ರೂಪಾಯಿ ನಾಣ್ಯ ಉತ್ಪಾದನೆಗೆ 1.11 ರೂ. ಖರ್ಚಾಗುತ್ತದೆ. ಅಂದರೆ, 11 ಪೈಸೆ ಹೆಚ್ಚುವರಿಯಾಗಿ ಖರ್ಚಾಗುತ್ತದೆ. ಆರ್‌ಟಿಐ ಅರ್ಜಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ ಉತ್ತರದಲ್ಲಿ ಬಹಿರಂಗವಾಗಿದೆ.
ಅಂದಹಾಗೆ ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಲಾದ ಒಂದು ರೂಪಾಯಿ ನಾಣ್ಯವು 21.93 ಮಿ.ಮೀ ವ್ಯಾಸ, 1.45 ಮಿ.ಮೀ ಅಗಲ ಮತ್ತು 3.76 ಗ್ರಾಂ ತೂಕವನ್ನು ಹೊಂದಿರುತ್ತದೆ. ಆದಾಗ್ಯೂ, ಇತರ ನಾಣ್ಯಗಳ ಉತ್ಪಾದನಾ ವೆಚ್ಚವು ಒಂದು ರೂಪಾಯಿಗೆ ಹೋಲಿಸಿದರೆ ಸ್ವಲ್ಪ ಕಡಿಮೆಯಾಗಿದೆ. 2 ರೂಪಾಯಿ ನಾಣ್ಯದ ಮುದ್ರಣ ವೆಚ್ಚ 1.28 ರೂಪಾಯಿಯಾದರೆ, 5 ರೂಪಾಯಿ ನಾಣ್ಯಕ್ಕೆ 3.69 ರೂಪಾಯಿ ಮತ್ತು 10 ರೂಪಾಯಿ ನಾಣ್ಯಕ್ಕೆ 5.54 ರೂಪಾಯಿ ಮುದ್ರಣ ವೆಚ್ಚವಾಗುತ್ತದೆ.
ಈ ಎಲ್ಲಾ ನಾಣ್ಯಗಳನ್ನು ಮುಂಬೈ ಮತ್ತು ಹೈದರಾಬಾದ್‌ನಲ್ಲಿರುವ ಭಾರತೀಯ ಸರ್ಕಾರದ ಟಂಕಸಾಲೆಯಲ್ಲಿ ಮುದ್ರಿಸಲಾಗುತ್ತದೆ. 10, 5, 2 ಮತ್ತು 1 ರೂ. ಮುಖಬೆಲೆಯ ನಾಣ್ಯಗಳನ್ನು ಮುದ್ರಿಸುವಲ್ಲಿ ಟಂಕಸಾಲೆ ತೊಡಗಿದೆ. ಕಳೆದ ಆರೇಳು ವರ್ಷಗಳಿಗೆ ಹೋಲಿಸಿದರೆ 2018ರಲ್ಲಿ ನಾಣ್ಯಗಳ ಮುದ್ರಿಸುವಿಕೆ ಗಣನೀಯವಾಗಿ ಕುಸಿದಿದೆ ಎಂದು ಆರ್‌ಟಿಐ ಬಹಿರಂಗಪಡಿಸಿದೆ.
ಹೈದರಾಬಾದ್‌ನಲ್ಲಿರುವ ಮುದ್ರಣ ಕೇಂದ್ರವು ಈ ಉತ್ಪಾದನಾ ವೆಚ್ಚವನ್ನು ಬಹಿರಂಗಪಡಿಸಿದಾಗ, ಮುಂಬೈ ಮುದ್ರಣಾಲಯವು ಮಾಹಿತಿ ಸ್ವಾತಂತ್ರ್ಯ ಕಾಯಿದೆ, 2005 ರ ಸೆಕ್ಷನ್ 8 (1) (ಡಿ) ಅಡಿಯಲ್ಲಿ ಗೌಪ್ಯತೆಯನ್ನು ಉಲ್ಲೇಖಿಸಿ ಮಾಹಿತಿಯನ್ನು ಬಿಡುಗಡೆ ಮಾಡಲು ನಿರಾಕರಿಸಿತು.
2016-17ನೇ ಹಣಕಾಸು ವರ್ಷದಲ್ಲಿ 2.201 ಬಿಲಿಯನ್ ನಾಣ್ಯಗಳನ್ನು ಮುದ್ರಿಸಲಾಗಿದೆ ಎಂದು ಸರ್ಕಾರ ವರದಿ ಮಾಡಿದೆ. ಉತ್ಪಾದನಾ ವೆಚ್ಚದ ಕುರಿತು ಯಾವುದೇ ಇತ್ತೀಚಿನ ಮಾಹಿತಿಯನ್ನು ಬಹಿರಂಗವಾಗದಿದ್ದರೂ ಕಳೆದ ಕೆಲವು ವರ್ಷಗಳಿಂದ ಪ್ರತಿ ನಾಣ್ಯವನ್ನು ಮುದ್ರಿಸುವ ವೆಚ್ಚವು ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ. (ಏಜೆನ್ಸೀಸ್)