

ಬೆಂಗಳೂರು: ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬರೋಬ್ಬರಿ 21 ಕೋಟಿ ರೂ. ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ರಿಟೇನ್ ಆಗಿದ್ದಾರೆ. ಇದರೊಂದಿಗೆ ಅವರು ಮುಂದಿನ ಮೂರು ವರ್ಷವೂ ಆರ್ಸಿಬಿ ತಂಡದ ಪರ ಆಡುವುದು ಮತ್ತು ಆರ್ಸಿಬಿ ತಂಡದಲ್ಲಿ 20 ವರ್ಷಗಳನ್ನು ಪೂರ್ಣಗೊಳಿಸುವುದು ಖಚಿತಗೊಂಡಿದೆ. ಆದರೆ ಈ 20 ವರ್ಷಗಳಲ್ಲಿ ಒಮ್ಮೆಯೂ ಐಪಿಎಲ್ ಪ್ರಶಸ್ತಿ ಗೆಲ್ಲದ ಕೊರಗು ಇರಬಾರದು ಎಂಬ ಕಾರಣಕ್ಕಾಗಿ ವಿರಾಟ್ ಕೊಹ್ಲಿ, ಮುಂದಿನ 3 ವರ್ಷಗಳಲ್ಲಿ ಒಮ್ಮೆಯಾದರೂ ಕಪ್ ಗೆಲ್ಲುವ ಸಂಕಲ್ಪ ಮಾಡಿದ್ದಾರೆ.
"ಮುಂಬರುವ ಹರಾಜಿನಲ್ಲಿ ಆರ್ಸಿಬಿ ತಂಡವನ್ನು ಹೊಸದಾಗಿ ಮತ್ತು ಬಲಿಷ್ಠವಾಗಿ ಕಟ್ಟುವ ಅವಕಾಶವಿದೆ. ನಾನು ಮುಂಬರುವ ಹರಾಜು ಪ್ರಕ್ರಿಯೆಯನ್ನು ಕಾತರದಿಂದ ಕಾಯುತ್ತಿದ್ದೇನೆ. ಮುಂದಿನ ಮೂರು ವರ್ಷಗಳ ಅವದಿಯಲ್ಲಿ ಒಮ್ಮೆಯಾದರೂ ಐಪಿಎಲ್ ಪ್ರಶಸ್ತಿ ಗೆಲ್ಲಬೇಕೆಂಬುದು ನನ್ನ ಗುರಿಯಾಗಿದೆ. ಎಂದಿನಂತೆಯೇ ನಾವು ನಮ್ಮ ಶ್ರೇಷ್ಠ ಪ್ರಯತ್ನ ಪಡಲಿದ್ದೇವೆ ಮತ್ತು ಎಲ್ಲರಿಗೂ ಹೆಮ್ಮೆ ತರಲಿದ್ದೇವೆ' ಎಂದು ವಿರಾಟ್ ಕೊಹ್ಲಿ ರಿಟೇನ್ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಹೇಳಿದ್ದಾರೆ. ಅವರು ಐಪಿಎಲ್ ಇತಿಹಾಸದಲ್ಲಿ 20 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಿರುವ ಮೊದಲ ಭಾರತೀಯರೆನಿಸಿದ್ದಾರೆ.
ಕಳೆದ ಆವೃತ್ತಿಯಲ್ಲಿ ಆರ್ಸಿಬಿ ತಂಡದಲ್ಲಿ 25 ಆಟಗಾರರು ಇದ್ದರು. ಈ ಪೈಕಿ ರಿಟೇನ್ ಆಗಿರುವುದು ಮೂವರು ಮಾತ್ರ. ಕೊಹ್ಲಿ ಜತೆಗೆ ರಜತ್ ಪಾಟೀದಾರ್ ಮತ್ತು ಯಶ್ ದಯಾಳ್ ಮಾತ್ರ ರಿಟೇನ್ ಆಗಿದ್ದಾರೆ.
"ನನ್ನ ಪಾಲಿಗೆ ಆರ್ಸಿಬಿ ಎಂದರೆ ಏನೆಂದು ಎಲ್ಲರಿಗೂ ತಿಳಿಸಿದೆ. ಆರ್ಸಿಬಿ ಜತೆಗೆ ನನ್ನದು ವಿಶೇಷ ಅನುಬಂಧವಾಗಿದೆ. ಆರ್ಸಿಬಿ ಪರ ಆಡುವುದು ನನ್ನ ಪಾಲಿಗೆ ಯಾವಾಗಲೂ ವಿಶೇಷವಾದುದು. ಮುಂದಿನ 3 ವರ್ಷಗಳಲ್ಲಿ ನಾನು ಆರ್ಸಿಬಿ ತಂಡದಲ್ಲಿ 20 ವರ್ಷಗಳನ್ನು ಪೂರ್ಣಗೊಳಿಸಲಿದ್ದೇನೆ. ಇದು ನನ್ನ ಪಾಲಿಗೆ ಅದ್ಭುತ ಅನುಭವವಾಗಿದೆ. ನಾನು ಇಷ್ಟು ವರ್ಷಗಳ ಕಾಲ ಒಂದೇ ತಂಡದ ಪರ ಆಡುವೆ ಎಂದು ಕನಸು ಕಂಡಿರಲಿಲ್ಲ. ನಾನು ಐಪಿಎಲ್ನಲ್ಲಿ ಆರ್ಸಿಬಿ ಹೊರತಾಗಿ ಬೇರೆ ಯಾವ ತಂಡದ ಪರವಾಗಿಯೂ ಆಡುವ ಯೋಚನೆ ಮಾಡಿಲ್ಲ' ಎಂದು ಕೊಹ್ಲಿ ಹೇಳಿದ್ದಾರೆ.
*ಆರ್ಸಿಬಿ ತಂಡದ ನಾಯಕನ ಬಗ್ಗೆ ಅಥವಾ ವಿರಾಟ್ ಕೊಹ್ಲಿಗೆ ಮತ್ತೆ ನಾಯಕತ್ವ ನೀಡುವ ಬಗ್ಗೆ ನಾವಿನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ ಎಲ್ಲ ಆಯ್ಕೆಗಳನ್ನು ಮುಕ್ತವಾಗಿ ಇಟ್ಟುಕೊಂಡಿದ್ದೇವೆ. ಕಳೆದ ವರ್ಷ ನಾಯಕರಾಗಿ ಉತ್ತಮ ನಿರ್ವಹಣೆ ತೋರಿದ ಹೊರತಾಗಿಯೂ ನಾವು ಫಾಫ್ ಡು ಪ್ಲೆಸಿಸ್ರನ್ನು ರಿಟೇನ್ ಮಾಡದಿರುವ ನಿರ್ಧಾರ ತೆಗೆದುಕೊಂಡೆವು. ಹೀಗಾಗಿ ಹರಾಜು ಪ್ರಕ್ರಿಯೆಗೆ ಮುಕ್ತ ಮನಸ್ಸಿನಿಂದ ತೆರಳಲಿದ್ದೇವೆ.
| ಮೋ ಬೋಬಟ್, ಆರ್ಸಿಬಿ ತಂಡದ ಕ್ರಿಕೆಟ್ ನಿರ್ದೇಶಕ
ಸಿರಾಜ್ ಕೈಬಿಟ್ಟಿದ್ದು ಕಠಿಣ ಆಯ್ಕೆ
2018ರಿಂದ ಆರ್ಸಿಬಿ ತಂಡದ ಬೌಲಿಂಗ್ ವಿಭಾಗದಲ್ಲಿರುವ ವೇಗಿ ಮೊಹಮದ್ ಸಿರಾಜ್ 87 ಪಂದ್ಯಗಳಲ್ಲಿ 83 ವಿಕೆಟ್ ಕಬಳಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ 14 ಪಂದ್ಯಗಳಲ್ಲಿ 15 ವಿಕೆಟ್ ಉರುಳಿಸಿದ್ದರು. ಇದರ ನಡುವೆಯೂ ಅವರನ್ನು ಈ ಬಾರಿ ರಿಟೇನ್ ಮಾಡಿಕೊಳ್ಳದೆ ಹರಾಜಿಗೆ ಬಿಟ್ಟುಕೊಡಲಾಗಿದೆ. ಇದೊಂದು ಕಠಿಣ ನಿರ್ಧಾರವಾಗಿತ್ತು ಎಂದು ಆರ್ಸಿಬಿ ತಂಡದ ಕ್ರಿಕೆಟ್ ನಿರ್ದೇಶಕ ಮೋ ಬೋಬಟ್ ತಿಳಿಸಿದ್ದಾರೆ. "ತಂಡಕ್ಕೆ ಸಿರಾಜ್ ಕೊಡುಗೆಯನ್ನು ನಾವು ಗೌರವಿಸುತ್ತೇವೆ. ಆದರೆ ಹಲವು ಆಯ್ಕೆಗಳನ್ನು ತಲೆಯಲ್ಲಿಟ್ಟುಕೊಂಡು ಹರಾಜಿಗೆ ತೆರಳಲು ನಾವು ಬಯಸಿದ್ದೇವೆ. ಅತ್ಯಂತ ಸಮತೋಲನದ ಬೌಲಿಂಗ್ ವಿಭಾಗವನ್ನು ಕಟ್ಟುವುದು ನಮ್ಮ ಧ್ಯೇಯವಾಗಿದೆ' ಎಂದು ಬೋಬಟ್ ವಿವರಿಸಿದ್ದಾರೆ.
ಗಾಯದಿಂದಾಗಿ ಗ್ರೀನ್ ಗೈರು
ಆಸ್ಟ್ರೆಲಿಯಾದ ಆಲ್ರೌಂಡರ್ ಕ್ಯಾಮರಾನ್ ಗ್ರೀನ್ ಕಳೆದ ಆವೃತ್ತಿಗೆ ಮುನ್ನ ಮುಂಬೈ ಇಂಡಿಯನ್ಸ್ ತಂಡದಿಂದ 17 ಕೋಟಿ ರೂ. ಮೊತ್ತಕ್ಕೆ ಆರ್ಸಿಬಿ ತಂಡಕ್ಕೆ ವರ್ಗಾವಣೆಗೊಂಡಿದ್ದರು. ಕಳೆದ ಆವೃತ್ತಿಯಲ್ಲಿ ಆಡಿದ 13 ಪಂದ್ಯಗಳಲ್ಲಿ 255 ರನ್ ಮತ್ತು 10 ವಿಕೆಟ್ ಗಳಿಸಿ ಮಿಂಚಿದ್ದರು. ಇದರ ಹೊರತಾಗಿಯೂ ಈ ಬಾರಿ ಅವರನ್ನು ರಿಟೇನ್ ಮಾಡದಿರುವುದಕ್ಕೆ ಗಾಯದ ಸಮಸ್ಯೆಯೇ ಪ್ರಮುಖ ಕಾರಣ ಎಂದು ಬೋಬಟ್ ಸ್ಪಷ್ಟಪಡಿಸಿದ್ದಾರೆ. ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿರುವ ಗ್ರೀನ್ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಮುಂದಿನ ಐಪಿಎಲ್ನಿಂದ ಹೊರಗುಳಿಯಲಿದ್ದಾರೆ. ಹೀಗಾಗಿ ಅವರನ್ನು ರಿಟೇನ್ ಮಾಡಿಕೊಂಡಿಲ್ಲ ಎಂದು ತಿಳಿಸಿದ್ದಾರೆ.