ಮುಂಬೈ ನಾಯಕರಾಗಿ ಹಾರ್ದಿಕ್ ಪಾಂಡ್ಯ​ ಮುಂದುವರಿಕೆ; 4ನೇ ಸ್ಥಾನದಲ್ಲಿ ರಿಟೇನ್​ ಆಗಿದ್ದಕ್ಕೆ ರೋಹಿತ್​ ಸಮರ್ಥನೆ!

web mi
Published on

ಮುಂಬೈ: ಕಳೆದ ಆವೃತ್ತಿಯಲ್ಲಿ ಮರಳಿದ್ದ ಹಾರ್ದಿಕ್​ ಪಾಂಡ್ಯಗೆ ಅಚ್ಚರಿಯ ರೀತಿಯಲ್ಲಿ ನಾಯಕತ್ವ ನೀಡಿದರೂ, ಮುಂಬೈ ಇಂಡಿಯನ್ಸ್​ ತಂಡ ಅಂಕಪಟ್ಟಿಯಲ್ಲಿ ಕೊನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ನಾಯಕತ್ವದಿಂದ ಕೆಳಗಿಳಿಸಿದ್ದಕ್ಕೆ ರೋಹಿತ್​ ಶರ್ಮ ಗರಂ ಆಗಿದ್ದಾರೆ ಎಂದೂ ವರದಿಯಾಗಿತ್ತು. ಭಾರತ ಟೆಸ್ಟ್​ ತಂಡದ ನಾಯಕರಾಗಿರುವ ಸೂರ್ಯಕುಮಾರ್​ಗೆ ಈ ಬಾರಿ ಮುಂಬೈ ನಾಯಕತ್ವವೂ ಒಲಿಯಲಿದೆ ಎಂದು ವರದಿಯಾಗಿತ್ತು. ಇವೆಲ್ಲದರ ನಡುವೆ ಈಗ ಹಾರ್ದಿಕ್​ ಪಾಂಡ್ಯ ಅವರೇ 2025ರ ಐಪಿಎಲ್​ ಆವೃತ್ತಿಯಲ್ಲೂ ಮುಂಬೈ ನಾಯಕರಾಗಿ ಮುಂದುವರಿಯುವುದು ಖಚಿತಗೊಂಡಿದೆ.

ಇನ್ನು ಬುಮ್ರಾ ಮುಂಬೈ ತಂಡದ ಮೊದಲ ಆಯ್ಕೆಯ ರಿಟೇನ್​ ಆಗಿ ಗರಿಷ್ಠ 18 ಕೋಟಿ ರೂ. ಪಡೆದಿದ್ದಾರೆ. ರೋಹಿತ್​ ಶರ್ಮ 4ನೇ ರಿಟೇನ್​ ಆಗಿದ್ದಾರೆ. ಮುಂಬೈ ್ರಾಂಚೈಸಿ ಬಿಡುಗಡೆಗೊಳಿಸಿರುವ ವಿಡಿಯೋದಲ್ಲಿ ಇದನ್ನು ಸಮರ್ಥಿಸಿಕೊಂಡಿರುವ ರೋಹಿತ್​, ನಾನೀಗ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿರುವುದರಿಂದ 4ನೇ ರಿಟೇನ್​ ಆಗಿರುವುದು ಸರಿಯಾಗಿಯೇ ಇದೆ. ರಾಷ್ಟ್ರೀಯ ತಂಡದ ಪರ ಆಡುವವರಿಗೆ ಯಾವಾಗಲೂ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದಿದ್ದಾರೆ.

ಮುಂಬೈ ಪರ ರಿಟೇನ್​ ಆಗಿರುವ ಎಲ್ಲ 5 ಆಟಗಾರರು ಫೋಟೋಶೂಟ್​ನಲ್ಲಿ ಜತೆಯಾಗಿ ಕಾಣಿಸಿಕೊಳ್ಳುವ ಮೂಲಕ ತಂಡದ ಒಗ್ಗಟ್ಟನ್ನೂ ಪ್ರದರ್ಶಿಸಿದ್ದಾರೆ. 5 ಆಟಗಾರರ ರಿಟೇನ್​ಗೆ ಗರಿಷ್ಠ 75 ಕೋಟಿ ರೂ. ವ್ಯಯಿಸಿರುವ ಮುಂಬೈ ಬಳಿ ಹರಾಜಿನ ಖರ್ಚಿಗೆ 45 ಕೋಟಿ ರೂ. ಮಾತ್ರ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net