8 ವರ್ಷ, 26 ಬಾರಿ ರಿಮೇಕ್… ಗಿನ್ನಿಸ್​ ಬುಕ್​ ಆಫ್ ರೆಕಾರ್ಡ್ಸ್​​ ಸೇರಿದ ಸಿನಿಮಾ ಈಗ ಹಿಂದಿಯಲ್ಲಿ ರಿಲೀಸ್​

ವಿಜಯವಾಣಿ - 2024-08-06T191438.193
Published on

ಮುಂಬೈ: ಒಂದು ಭಾಷೆಯಲ್ಲಿ ರಿಲೀಸ್ ಆಗುವ ಸಿನಿಮಾ ಚಿತ್ರರಸಿಕರ ಮನಗೆದ್ದು ಬ್ಲಾಕ್​ಬಸ್ಟರ್ ಹಿಟ್​ ಆದರೆ ಮುಗಿತು. ಆ ಚಿತ್ರವನ್ನು ಉಳಿದ ಚಿತ್ರರಂಗದವರು ತಮ್ಮ ಭಾಷೆಗೆ ಡಬ್​ ಮಾಡಿ, ಕಥೆಯಲ್ಲಿ ಒಂದಷ್ಟು ಬದಲಾವಣೆ ಕೆಲಸಗಳನ್ನು ಮುಗಿಸಿ, ಆನಂತರ ಗೆಲುವು-ಸೋಲು ನೋಡಲು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸುತ್ತಾರೆ. ಇದು ಸಿನಿಪ್ರಿಯರಿಗೆ ತಿಳಿದಿರುವ ಸಾಮಾನ್ಯ ಸಂಗತಿ. ಆದ್ರೆ, ಒಂದೇ ಸಿನಿಮಾ 26 ಬಾರಿ ರಿಮೇಕ್ ಆಗಿ ಗಿನ್ನಿಸ್​ ದಾಖಲೆ ಪುಸ್ತಕಕ್ಕೆ ಸೇರಿರುವುದು ಒಂದು ರೀತಿ ಇತಿಹಾಸ ಎಂದೇ ಹೇಳಬಹುದು. ಇದೀಗ ಅದೇ ಚಿತ್ರ ಬಾಲಿವುಡ್​ ಅಂಗಳದಲ್ಲಿ ಬಿಡುಗಡೆಯಾಗಲು ಸಜ್ಜಾಗಿದ್ದು, ನಟ ಅಕ್ಷಯ್ ಕುಮಾರ್​ ನಾಯಕನಾಗಿ ನಟಿಸಿದ್ದಾರೆ.

2016ರಲ್ಲಿ ಇಟಲಿಯನ್ ಭಾಷೆಯಲ್ಲಿ ಬಿಡುಗಡೆಗೊಂಡ 'ಪರ್ಫೆಕ್ಟ್​ ಸ್ಟ್ರೇಂಜರ್ಸ್'​ ಎಂಬ ಸಿನಿಮಾ ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಬರೋಬ್ಬರಿ 26 ಬಾರಿ ರಿಮೇಕ್ ಆಗಿದ್ದು, ಆಯಾ ಭಾಷೆಗಳಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡಿದೆ. 24 ಭಾಷೆಗಳಲ್ಲಿ ರಿಮೇಕ್ ಆಗಿರುವ ಈ ಚಿತ್ರ, ಗಿನ್ನಿಸ್​ ಬುಕ್ ಆಫ್ ರೆಕಾರ್ಡ್ಸ್​​ ಸೇರುವ ಮೂಲಕ ಸಿನಿ ಇಂಡಸ್ಟ್ರಿಯಲ್ಲೇ ಹೊಸ ದಾಖಲೆಯನ್ನು ಬರೆದಿದೆ. ಈಗ ಇದೇ ಸಿನಿಮಾವನ್ನು ಹಿಂದಿಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿರುವ ಚಿತ್ರತಂಡ, 'ಖೇಲ್ ಖೇಲ್​ಮೇನ್'​ ಎಂಬ ಟೈಟಲ್​ನಡಿ ಇದೇ ಆಗಸ್ಟ್​ 15ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ನಿರ್ಧರಿಸಿದೆ.

ಯಾವ್ಯಾವ ಭಾಷೆಗಳಲ್ಲಿ ರಿಮೇಕ್ ಆಗಿದೆ?

'ನಥಿಂಗ್ ಟು ಹೈಡ್' (ಫ್ರೆಂಚ್), 'ಇಂಟಿಮೇಟ್ ಸ್ಟ್ರೇಂಜರ್ಸ್' (ಕೊರಿಯನ್), 'ಮೊಬೈಲ್ ಕಿಲ್' (ಮ್ಯಾಂಡರಿನ್), 'ಲೌಡ್ ಕನೆಕ್ಷನ್' (ರಷ್ಯನ್), 'ವೈಲ್ಡ್ ಗೇಮ್' (ಐಸ್ಲ್ಯಾಂಡಿಕ್) ಸೇರಿದಂತೆ ವಿವಿಧ ಭಾಷೆಗಳಲ್ಲಿ ರೀಮೇಕ್ ಮಾಡಲಾಗಿದೆ. ಅರೇಬಿಕ್, ರೊಮೇನಿಯನ್, ಹೀಬ್ರೂ ಮತ್ತು ಜರ್ಮನ್ ಭಾಷೆಗಳಲ್ಲಿ 'ಪರ್ಫೆಕ್ಟ್ ಸ್ಟ್ರೇಂಜರ್ಸ್' ಎಂದೇ ಇದೆ. ಕನ್ನಡದಲ್ಲಿ 'ಲೌಡ್ ಸ್ಪೀಕರ್' ಎಂಬ ಟೈಟಲ್​ನಡಿ ರಿಮೇಕ್ ಮಾಡಲಾಗಿದೆ. ಇನ್ನು ಮಲಯಾಳಂನಲ್ಲಿ '12 ಮ್ಯಾನ್​' ಮತ್ತು ತೆಲುಗಿನಲ್ಲಿ 'ರಿಚಿ ಗಾಡಿ ಪೆಲ್ಲಿ' ಎಂದು ರಿಲೀಸ್ ಮಾಡಲಾಗಿದೆ.

ದಾಖಲೆ ಬರೆದಿರುವ 'ಪರ್ಫೆಕ್ಟ್​ ಸ್ಟ್ರೇಂಜರ್ಸ್'​ ಈಗ ಹಿಂದಿಯಲ್ಲಿ 'ಖೇಲ್ ಖೇಲ್​ಮೇನ್'​ ಆಗಿ ಹಿಂದಿ ಸಿನಿಪ್ರೇಕ್ಷಕರನ್ನು ಮನರಂಜಿಸಲು ಬರುತ್ತಿದೆ. ಮುದಾಸೀರ್​​ ಆಸಿಸ್​ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್​ ಸ್ಟಾರ್​ ಅಕ್ಷಯ್ ಕುಮಾರ್​, ತಾಪ್ಸಿ ಪನ್ನು, ವಾಣಿ ಕಪೂರ್​, ಆಮೀ ವಿರ್ಕ್​, ದಿತ್ಯ ಸೀಲ್, ಪ್ರಗ್ಯಾ ಜೈಸ್ವಾಲ್ ಸೇರಿದಂತೆ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net