

ಅರ್ಧ ಚಕ್ರಾಸನ - ಇದು ನಿಂತುಕೊಂಡು ಮಾಡುವ ಸುಲಭವಾದ ಯೋಗಾಸನ. ದೇಹವನ್ನು ಶಿಸ್ತುಬದ್ಧವಾಗಿ ಹಿಂದಕ್ಕೆ ಬಾಗಿಸಿದಾಗ, ಶ್ವಾಸಕೋಶದ ಭಾಗ ಎಳೆತಕ್ಕೆ ಒಳಗಾಗಿ, ಹೆಚ್ಚಿನ ವಾಯು ಸಂಚಾರವಾಗುತ್ತದೆ. ಎದೆಯ ಭಾಗಕ್ಕೆ ಮೆದು ವ್ಯಾಯಾಮವಾಗುತ್ತದೆ.
ಪ್ರಯೋಜನಗಳು : ಶಿರಸ್ಸಿನ ಭಾಗಕ್ಕೆ ಹೆಚ್ಚಿನ ರಕ್ತಸಂಚಲನೆ ಜರುಗಿ, ನರಮಂಡಲ ಸಚೇತನಗೊಳ್ಳುತ್ತದೆ. ಶ್ವಾಸಕೋಶದ ಸಾಮರ್ಥ್ಯ ಹೆಚ್ಚುತ್ತದೆ. ಆಸ್ತಮಾ ನಿವಾರಣೆ ಮತ್ತು ಥೈರಾಯ್ಡ್ ಗ್ರಂಥಿಯ ಆರೋಗ್ಯ ವರ್ಧನೆಗೆ ಈ ಅರ್ಧ ಚಕ್ರಾಸನ ಉಪಯುಕ್ತ.
ಇದನ್ನೂ ಓದಿ: ಕಾಲುಗಳನ್ನು ಬಲಪಡಿಸಲು ತ್ರಿಕೋನಾಸನ ಅಭ್ಯಾಸ ಮಾಡಿ
ಅಭ್ಯಾಸ ಕ್ರಮ : ತಾಡಾಸನದಲ್ಲಿ ನಿಲ್ಲುವುದು. ಕಾಲುಗಳ ನಡುವೆ ಸ್ವಲ್ಪ ಅಂತರ ಕೊಟ್ಟು, ಸೊಂಟದ ಹಿಂದಕ್ಕೆ ಎರಡೂ ಕೈಗಳನ್ನು ಇಟ್ಟುಕೊಳ್ಳುವುದು. ಪರಸ್ಪರ ಹೆಬ್ಬೆರೆಳುಗಳನ್ನು ಜೋಡಿಸಬೇಕು. ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ಸೊಂಟದ ಮೇಲ್ಭಾಗದಿಂದ ಹಿಂದಕ್ಕೆ ಬಾಗಬೇಕು. ನೆಕ್ ಅಂಡ್ ಹೆಡ್ ಹ್ಯಾಂಗಿಂಗ್ ಪೊಸಿಷನ್ನಲ್ಲಿ ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸಬೇಕು. ಉಸಿರನ್ನು ಬಿಡುತ್ತಾ ಸಹಜ ಸ್ಥಿತಿಗೆ ಹಿಂತಿರುಗುವುದು.
ಕೆಲವೊಮ್ಮೆ ಹಿಂದಕ್ಕೆ ಬಾಗುವಾಗ ತಲೆ ತಿರುಗಿದ ಅನುಭವವಾಗುತ್ತದೆ. ಅಭ್ಯಾಸ ಮಾಡುತ್ತಾ ಮಾಡುತ್ತಾ ಸರಿಹೋಗುತ್ತದೆ. ಆದರೆ, ತೀರಾ ಕುತ್ತಿಗೆ ನೋವು ಇರುವವರು ಮತ್ತು ಹೃದಯ ದೌರ್ಬಲ್ಯ ಇರುವವರು ಈ ಆಸನವನ್ನು ಮಾಡಬಾರದು.