ಕರ್ನಾಟಕದ ಬೈಕ್​ ಸವಾರನನ್ನು ತಡೆದ ತಮಿಳುನಾಡು ಪೊಲೀಸ್​: ಕಾರಣ ಗೊತ್ತಾದ್ರೆ ನಿಜಕ್ಕೂ ಹೆಮ್ಮೆ ಪಡ್ತೀರಾ!

TN Police 1
Published on

ಚೆನ್ನೈ: ಸಂಚಾರಿ ನಿಯಮ ಉಲ್ಲಂಘನೆಯ ನೆಪದಲ್ಲಿ ಪೊಲೀಸರು ಪದೇಪದೆ ಬೈಕ್​ ಸವಾರರನ್ನು ತಡೆದರೆ ಅದೊಂದು ರೀತಿಯಲ್ಲಿ ಕೆಟ್ಟ ಸುದ್ದಿ ಎನ್ನಬಹುದು. ಆದರೆ, ಇಲ್ಲಿ ಬೈಕ್​ ಸವಾರನನ್ನು ತಡೆದ ತಮಿಳುನಾಡು ಪೊಲೀಸ್​, ಸವಾರನಿಗೆ ಪರೋಪಕಾರಿಯಾಗುವ ಅವಕಾಶವನ್ನು ನೀಡಿದ್ದು, ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋ ಹೃದಯ ಮುಟ್ಟುವಂತಿದೆ.

ವಿವರಣೆಗೆ ಬರುವುದಾದರೆ, ಬೈಕ್​ ಸವಾರ ತಮಿಳುನಾಡಿನ ತೆಂಕಾಸಿ ಹೋಗುತ್ತಿರುತ್ತಾನೆ. ಅಂದಹಾಗೆ ಈ ವಿಡಿಯೋವನ್ನು ಅನ್ನಿಅರುಣ್​ (AnnyArun) ಹೆಸರಿನ ಯೂಟ್ಯೂಬ್​ ಚಾನೆಲ್​ನಲ್ಲಿ ಅಪ್​ಲೋಡ ಮಾಡಲಾಗಿದೆ. ವಿಡಿಯೋದಲ್ಲಿ ಬೈಕ್​ ಸವಾರನ್ನು ತಡೆಯುವ ಪೊಲೀಸ್​, ನೀನು ಕರ್ನಾಟಕದವನಾ? ಎಂದು ಪ್ರಶ್ನಿಸುತ್ತಾರೆ. ಬೈಕ್​ ಸವಾರ ಹೌದು ಎನ್ನುತ್ತಾನೆ.

ಬಳಿಕ ಪೊಲೀಸ್​ ಪೇದೆ ಮಾತನಾಡಿ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ತಮಿಳುನಾಡು ಸಾರಿಗೆ ಬಸ್​ ಅನ್ನು ತೋರಿಸಿ, ನೋಡು ಆ ಬಸ್ಸಿನಲ್ಲಿದ್ದ ಹಿರಿಯ ಮಹಿಳೆ ತನ್ನ ಔಷಧಿಯ ಬಾಟಲ್​ ಅನ್ನು ಬೀಳಿಸಿಕೊಂಡಿದ್ದಾರೆ. ನೀನು ಬಸ್​ ಚೇಸ್​ ಮಾಡಿ ಈ ಔಷಧವನ್ನು ಆ ಅಜ್ಜಿಗೆ ತಲುಪಿಸುಬಿಡು ಎನ್ನುತ್ತಾರೆ.

ಔಷಧ ತೆಗೆದುಕೊಳ್ಳುವ ಬೈಕ್​ ಸವಾರ ಬಸ್​ ಚೇಸ್​ ಮಾಡಿ ಡ್ರೈವರ್​ ಪಕ್ಕಕ್ಕೆ ತೆರಳಿ ಸ್ವಲ್ಪ ಬಸ್​ ನಿಲ್ಲಿಸುವಂತೆ ಕೇಳಿಕೊಳ್ಳುತ್ತಾನೆ. ಬಳಿಕ ಡ್ರೈವರ್​ ಬಸ್​ ನಿಲ್ಲಿಸಿದಾಗ ಔಷಧ ಬಾಟಲ್​ ತೆಗೆದು ಅದನ್ನು ಕಳೆದುಕೊಂಡ ಮಹಿಳೆಗೆ ಕೊಡುತ್ತಾನೆ.

ಇನ್ನು ವಿಡಿಯೋವನ್ನು 3 ದಿನಗಳ ಹಿಂದೆ ಯೂಟ್ಯೂಬ್​ನಲ್ಲಿ ಶೇರ್​ ಮಾಡಲಾಗಿದೆ. ಈಗಾಗಲೇ ವಿಡಿಯೋವನ್ನು 2 ಲಕ್ಷ 70 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, 5 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಂಡಿದೆ. ವಿಡಿಯೋ ನೋಡಿರುವ ಬಹುತೇಕರು ಉತ್ತಮ ಕ್ಷಣಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಕನ್ನಡಿಗರು ಮತ್ತು ತಮಿಳಿಗರ ಪಾಲಿಗೆ ಈ ವಿಡಿಯೋ ವಿಶೇಷ ಅರ್ಥವನ್ನು ನೀಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net