ಲಕ್ಷ ರೂ. ಸಂಬಳ ಸಿಗುವ ಐಟಿ ಕೆಲಸ ಬಿಟ್ಟು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆನಂದ್ ಅಹಿಪತಿ!

WhatsApp Image 2024-03-14 at 5.30.45 PM
Published on

ಬೆಂಗಳೂರು: ಸಿನಿಮಾ ಮಾಡಬೇಕೆಂಬ ಆಸಕ್ತಿಯಿಂದ ಐಟಿ ಕಂಪನಿಯಲ್ಲಿ ಒಳ್ಳೇ ಉದ್ಯೋಗವಿದ್ದರೂ ಸಹ ಚಿತ್ರರಂಗಕ್ಕೆ ಬಂದಿದ್ದಾರೆ ಆನಂದ್ ಅಹಿಪತಿ. ಸಿನಿಮಾ ಮಾಡುವುದಕ್ಕೂ ಮುನ್ನ ಅದೇ ಕ್ವಾಲಿಟಿಯಲ್ಲಿ 'ಸತ್ಯ' ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ಥ್ರಿಲ್ಲರ್, ಮರ್ಡರ್ ಮಿಸ್ಟ್ರಿ ಕಥಾಹಂದರ ಒಳಗೊಂಡ ಆ ಶಾರ್ಟ್ ಫಿಲಂನ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ಆನಂದ್ ಅಹಿಪತಿ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುವುದರ ಜತೆಗೆ ನಾಯಕನ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಯಾವ ಚಿತ್ರಕ್ಕೂ ಕಮ್ಮಿಯಿಲ್ಲದ ಹಾಗೆ ಈ ಕಿರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಆನಂದ್, 3 ವರ್ಷದ ಹಿಂದೆ ಐಟಿ ಕಂಪನಿಯಲ್ಲಿ ವರ್ಕ್ ಮಾಡ್ತಿದ್ದೆ. ಆದರೆ ನನಗೆ ಇಂಟರೆಸ್ಟ್ ಇದ್ದದ್ದು ನಟನೆಯಲ್ಲಿ ಮಾತ್ರ ಎಂದಿದ್ದಾರೆ.

ಅನುಪಂ ಖೇರ್ ಇನ್ ಸ್ಟಿಟ್ಯೂಟ್​ನಲ್ಲಿ ಕೋರ್ಸ್ ಮುಗಿಸಿ, ಈ ಶಾರ್ಟ್ ಫಿಲಂನಲ್ಲಿ ಅಭಿನಯಿಸಿದೆ. ಹಠ ಹಿಡಿದು 38 ನಿಮಿಷಗಳ ಈ ಚಿತ್ರ ನಿರ್ದೇಶನ‌ ಮಾಡಿದ್ದೇನೆ. ಇದು ಪ್ರೀಕ್ವೇಲ್ ಟು ಫ್ಯೂಚರ್ ಫಿಲಂ ಅನ್ನಬಹುದು. ಹಣದ ಬಗ್ಗೆ ಯೋಚಿಸದೆ ಕ್ವಾಲಿಟಿ ಹೆಚ್ಚು ಆದ್ಯತೆ ಕೊಟ್ಟು ಈ ಚಿತ್ರ ಮಾಡಿದ್ದೇನೆ. ಸತ್ಯ ಅಂದ್ರೆ ನಿಜ, ಈತ ಒಬ್ಬ ಸೈಕೋ ಕಿಲ್ಲರ್, ಆತನ ಮನದಲ್ಲಿ ಏನೇನು ನಡೀತಿದೆ ಅನ್ನೋದೇ ಈ ಚಿತ್ರದ ಕಾನ್ಸೆಪ್ಟ್ ಎಂದರು.

ಆತ ಏನೇನು ಮಾಡ್ತಾನೆ, ಯಾಕೆ ಮಾಡ್ತಾನೆ, ಹೇಗೆ ಮಾಡ್ತಾನೆ ಅಂತ ಈ ಚಿತ್ರದಲ್ಲಿ ತೋರಿಸಿದ್ದೇವೆ. ಕೊನೆಯವರೆಗೆ ನೋಡಿದಾಗ ಅದು ಅರ್ಥವಾಗುತ್ತದೆ ಎಂದರು. ಇನ್ನು ಚಿತ್ರದ ನಾಯಕಿ ಪಾತ್ರ ಮಾಡಿರುವ ಸೌಮ್ಯ ಮಾತನಾಡಿ, ಈ ಸಿನಿಮಾ ಆನಂದ್ ಅವರ ಕನಸು, ಇದೊಂದು ವಿಭಿನ್ನ ಜಾನರ್ ಸಿನಿಮಾ, ನಾನೊಬ್ಬ ಕಲಾವಿದೆಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು.

ದುರ್ಗಾ ಸಿನಿಮಾಸ್ ಮೂಲಕ ನಿರ್ದೇಶಕ ಆನಂದ್ ಅಹಿಪತಿ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ 2 ಹಾಡುಗಳಿದ್ದು, ಅಜಯ್ ಶಿವರಾಜ್ ಸಂಗೀತ ನಿರ್ದೆಶನ ಮಾಡಿದ್ದಾರೆ. ಸಿನಿಮಾಗೆ ಕಾರ್ತಿಕ್ ಸಿದ್ದರಾಜು ಅವರ ಛಾಯಾಗ್ರಹಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net