

ನವದೆಹಲಿ: ದೇಶಾದ್ಯಂತ ಅಬ್ಬರ ತೋರಿದ್ದ ಕರೊನಾ ಎರಡನೇ ಅಲೆ ಸ್ವಲ್ಪ ಮಟ್ಟಿಗೆ ತಣ್ಣಗಾಗಿದ್ದು ಎಲ್ಲ ರಾಜ್ಯಗಳು ಅನ್ಲಾಕ್ ಪ್ರಕ್ರಿಯೆ ಆರಂಭಿಸಿವೆ. ಅನ್ಲಾಕ್ ಆಗಿದೆಯೆಂದು ಕರೊನಾ ನಿಯಮಗಳನ್ನೆಲ್ಲ ಗಾಳಿಗೆ ತೂರಿದರೆ, ಅಕ್ಟೋಬರ್-ನವೆಂಬರ್ನಲ್ಲಿ ಮೂರನೇ ಅಲೆ ಉತ್ತುಂಗಕ್ಕೆ ಏರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ತಜ್ಞರು.
ಸರ್ಕಾರಿ ಕೋವಿಡ್ ನಿರ್ವಹಣೆ ಸಮಿತಿಯ ಸದಸ್ಯರಾಗಿರುವ ಮಣೀಂದ್ರ ಅಗರ್ವಾಲ್ ಇಂತದ್ದೊಂದು ಎಚ್ಚರಿಕೆ ನೀಡಿದ್ದಾರೆ. ಕರೊನಾ ಗುಣಮುಖರಾದವರಲ್ಲಿ ರೋಗ ನಿರೋಧಕ ಶಕ್ತಿ ನಷ್ಟ ಹಾಗೂ ಲಸಿಕೆಯ ಪರಿಣಾಮ ಈ ಬಾರಿಯ ಅಧ್ಯಯನದಲ್ಲಿ ಸೇರ್ಪಡೆಗೊಂಡಿದೆ. ಎರಡನೇ ಅಲೆಗೆ ಮುನ್ಸೂಚನೆ ನೀಡುವಾಗ ಈ ಅಂಶಗಳು ಇರಲಿಲ್ಲ. ಮೂರನೇ ಅಲೆ ಬಂದರೆ ಅದರಲ್ಲಿ ಸೋಂಕು ಹರಡುವಿಕೆ ವೇಗ ಇನ್ನಷ್ಟು ಹೆಚ್ಚಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
"ನಾವು ಮೂರು ರೀತಿಯಲ್ಲಿ ಅನಾಲಿಸಿಸ್ ಮಾಡಿದ್ದೇವೆ. ಮೊದಲನೆಯದೆಂದರೆ ಅದರಲ್ಲಿ ಆಗಸ್ಟ್ ವೇಳೆಗೆ ಜನ ಜೀವನ ಸಾಮಾನ್ಯ ಸ್ಥಿತಿಗೆ ಬಂದು, ಸೋಂಕಿತರ ಸಂಖ್ಯೆ ಸಂಪೂರ್ಣವಾಗಿ ಕಡಿಮೆಯಾಗುವುದು. ಎರಡನೆಯದೆಂದರೆ ಲಸಿಕೆಯು ಶೇ. 20ರಷ್ಟು ಪರಿಣಾಮಕಾರಿ ಎಂದು ಭಾವಿಸುತ್ತೇವೆ. ಮೂರನೆಯದರ ಪ್ರಕಾರ ಆಗಸ್ಟ್ನಲ್ಲಿ ಹೊಸದಾಗಿ ಶೇ.25ರಷ್ಟು ಹೆಚ್ಚು ಸಾಂಕ್ರಾಮಿಕ ರೂಪಾಂತರಿ ಸೋಂಕುಗಳು ಸೃಷ್ಟಿಯಾಗಿ ಅವು ಮತ್ತೆ ಹರಡುತ್ತಾ ಹೋಗುವುದು ಎಂದು ಅವರು ಹೇಳಿದ್ದಾರೆ.
ಆಗಸ್ಟ್ ಮಧ್ಯದ ವೇಳೆಗೆ ಎರಡನೇ ಅಲೆ ಇಳಿಮುಖವಾಗಲಿದೆ. ಅದಾದ ನಂತರ ಒಂದು ವೇಳೆ ಜನರು ಕರೊನಾ ಮುಂಜಾಗ್ರತೆಗಳನ್ನು ಮರೆತರೆ ಅಕ್ಟೋಬರ್-ನವೆಂಬರ್ ವೇಳೆಗೆ ಮೂರನೇ ಅಲೆಯು ತನ್ನ ಗರಿಷ್ಠ ಮಟ್ಟವನ್ನು ತಲುಪಲೂಬಹುದು. ಆ ವೇಳೆ ದಿನಕ್ಕೆ ಸುಮಾರು 1.5 ಲಕ್ಷದಿಂದ 2 ಲಕ್ಷದವರೆಗೆ ಸೋಂಕಿತರು ಪತ್ತೆಯಾಗುವ ಸಾಧ್ಯತೆಯಿದೆ ಎಂದು ಅವರು ಟ್ವಿಟ್ಟರ್ನಲ್ಲಿ ಎಚ್ಚರಿಕೆ ನೀಡಿದ್ದಾರೆ. (ಏಜೆನ್ಸೀಸ್)