

ರಾಣೆಬೆನ್ನೂರು: ಒಂದುವರೆ ವರ್ಷದ ಹಿಂದೆ ಕಳ್ಳ ತಮ್ಮ ಹಾಗೂ ಸ್ನೇಹಿತನಿಂದಲೇ ಕುಖ್ಯಾತ ಕಳ್ಳನಾಗಿದ್ದ ಅಣ್ಣನ ಕೊಲೆ ಮಾಡಿರುವ ಪ್ರಕರಣ ಈಗ ತಡವಾಗಿ ಬೆಳಕಿಗೆ ಬಂದಿದೆ. ಹಿರಿಯೂರಿನ ರಾಮು ಗುರುಪ್ರಸಾದ ನಾಗರಾಜ (35) ಕೊಲೆಯಾಗಿರುವ ಕುಖ್ಯಾತ ಕಳ್ಳ. ಈತನ ಸಹೋದರ ಪ್ರಸಾದ ಗುರುಪ್ರಸಾದ ನಾಗರಾಜ (32) ಹಾಗೂ ಸ್ನೇಹಿತ ರಾಣೆಬೆನ್ನೂರ ನಿವಾಸಿ ಶ್ರೀಕಾಂತ ಮಾಲತೇಶ ಗುಡಗೂರ (30) ಕೊಲೆ ಮಾಡಿರುವ ಆರೋಪಿಗಳು. ಇವರ ವಿರುದ್ಧ ಕೊಲೆಯಾದ ರಾಮು ತಾಯಿ ಯಲ್ಲಮ್ಮ ಇಲ್ಲಿಯ ಗ್ರಾಮೀಣ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಏನಿದು ಪ್ರಕರಣ?
ಮೂವರು ಮನೆಗಳ್ಳತನ ಮಾಡುವುದನ್ನೇ ವೃತ್ತಿ ಮಾಡಿಕೊಂಡವರು. ಕಳ್ಳತನ ಮಾಡಿಕೊಂಡು ಬಂದಾಗ ರಾಮು ಬೇರೆಯವರ ಬಳಿ ಹೇಳಿಕೊಳ್ಳುತ್ತಿದ್ದನಂತೆ. ಇದರಿಂದ ಕೋಪಕೊಂಡ ಸಹೋದರ ಪ್ರಸಾದ ಈ ರೀತಿ ಯಾರ ಬಳಿ ಹೇಳಬೇಡ ಎಂದು ತಾಕೀತು ಮಾಡುತ್ತ ಬಂದಿದ್ದ. ಆದರೆ, ರಾಮು ಬದಲಾಗಿರಲಿಲ್ಲ. ಇದೇ ವಿಚಾರಕ್ಕೆ ರಾಣೆಬೆನ್ನೂರು ತಾಲೂಕಿನ ಹುಣಸಿಕಟ್ಟೆ ಗ್ರಾಮದ ಬಳಿ 2023ರ ಮೇ ತಿಂಗಳಲ್ಲಿ ಮನೆ ಕಳ್ಳತನಕ್ಕೆ ಬಂದಾಗ ರಾಮು ಮತ್ತು ಪ್ರಸಾದ ನಡುವೆ ಜಗಳವಾಗಿದೆ.
ಜಗಳ ವಿಕೋಪಕ್ಕೆ ಹೋಗಿದ್ದರಿಂದ ಸ್ನೇಹಿತ ಶ್ರೀಕಾಂತ ಜತೆ ಸೇರಿ ಪ್ರಸಾದ ರಾಮು ಅನ್ನು ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಅಲ್ಲದೆ ಶವವನ್ನು ಗುಂಡಿ ತೋಡಿ ಮುಚ್ಚಿಹಾಕಿದ್ದರು ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಲಕ್ಷ್ಮೇಶ್ವರ ಪೊಲೀಸರ ಎದುರು ಬಾಯ್ಬಿಟ್ಟ ಕೊಲೆಗಡುಕರು:
ಕೊಲೆ ಮಾಡಿ ಆರಾಮವಾಗಿ ಮತ್ತೇ ಕಳ್ಳತನ ಚಾಳಿ ಮುಂದುವರಿಸಿದ್ದ ಪ್ರಸಾದ ಹಾಗೂ ಶ್ರೀಕಾಂತನನ್ನು ಲಕ್ಷ್ಮೇಶ್ವರ ಠಾಣೆ ಪೊಲೀಸರು ಕಳ್ಳತನ ಪ್ರಕರಣದಲ್ಲಿ ಕಳೆದ ವಾರ ಬಂದಿಸಿದ್ದರು. ಆಗ ನಿನ್ನ ಅಣ್ಣನ ಮೇಲೂ ಕೇಸ್ ಇದ್ದು, ಆತ ಎಲ್ಲಿ ಎಂದು ಬಾಯ್ಬಿಡಿಸಿದಾಗ ಪ್ರಸಾದ ತಾನೇ ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ಪೊಲೀಸ್ ಮೂಲದಿಂದ ತಿಳಿದಿದೆ.
ತಾಯಿ ಎದುರು ಕಥೆ ಕಟ್ಟಿದ್ದ ಪ್ರಸಾದ:
ಮೂವರು ರಾಜ್ಯಾದ್ಯಂತ ಮನೆಗಳ್ಳತನ ಮಾಡುತ್ತಿದ್ದರು. ಮೂವರ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಯಲ್ಲಿ 25ಕ್ಕೂ ಅಧಿಕ ಮನೆಗಳ್ಳತನ ಪ್ರಕರಣ ದಾಖಲಾಗಿವೆ. ಅಲ್ಲದೆ ಮೂವರನ್ನು ಪೊಲೀಸರು ಪದೇ ಪದೇ ಹಿಡಿದುಕೊಂಡು ಹೋಗುವುದು ತಾಯಿ ಯಲ್ಲಮ್ಮಗೆ ಸಾಮಾನ್ಯವಾಗಿತ್ತು. ಇದನ್ನೇ ನೆಪ ಇಟ್ಟುಕೊಂಡ ಪ್ರಸಾದ ಅಣ್ಣನನ್ನು ಕೊಲೆ ಮಾಡಿದ ಬಳಿಕ ತಾಯಿ ಎದುರು ಬಂದು ಆತನನ್ನು ಪೊಲೀಸರು ಹಿಡಿದುಕೊಂಡು ಹೋಗಿದ್ದಾರೆ ಎಂದು ಕಥೆ ಕಟ್ಟಿದ್ದ. ಇದನ್ನು ನಂಬಿದ ತಾಯಿ ಹಿರಿಯ ಮಗ ರಾಮು ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಪೊಲೀಸರು ಸತ್ಯಾಂಶ ತಿಳಿಸಿದ ಬಳಿಕ ದೂರು ನೀಡಿದ್ದಾಳೆ ಎನ್ನಲಾಗಿದೆ.
ಎರಡು ವರ್ಷದಿಂದ ರಾಣೆಬೆನ್ನೂರ ನೆಲೆ:
ರಾಮು ತಂದೆಗೆ ಸರಿಯಾಗಿ ಕಣ್ಣು ಕಾಣುವುದಿಲ್ಲ. ತಾಯಿಗೂ ವಯಸ್ಸಾಗಿದೆ. ಮಕ್ಕಳು ಕಳ್ಳತನ ಪ್ರಕರಣದಲ್ಲಿ ಪದೇ ಪದೇ ಪೊಲೀಸರಿಂದ ಬಂಧನವಾಗುತ್ತಿದ್ದ ಕಾರಣ ಅವರ ಸುಧಾರಣೆಗಾಗಿ ಎರಡು ವರ್ಷದ ಹಿಂದೆ ಹಿರಿಯೂರು ಬಿಟ್ಟು ರಾಣೆಬೆನ್ನೂರಿಗೆ ಬಂದು ಮೃತ್ಯುಂಜಯ ನಗರದಲ್ಲಿ ಮನೆ ಮಾಡಿಕೊಂಡಿದ್ದರು. ಇದಾಗ ಬಳಿಕ ಹಿರಿಯ ಪುತ್ರನ ಕೊಲೆ ಪ್ರಕರಣ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.