

ನವದೆಹಲಿ: ಟೀಮ್ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿ ಶೀಘ್ರದಲ್ಲೇ ಆರಂಭವಾಗಲಿದೆ. ಎರಡು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೆ ಬಿಸಿಸಿಐ 16 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದ್ದು ಗೊತ್ತೇ ಇದೆ. ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ರಿಷಭ್ ಪಂತ್ ಬಹಳ ದಿನಗಳ ನಂತರ ಟೆಸ್ಟ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ, ದಿಗ್ಗಜ ಸೌರವ್ ಗಂಗೂಲಿ ಪ್ರಶಂಸೆಯ ಸುರಿಮಳೆಗೈದಿದ್ದಾರೆ. ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಅತ್ಯುತ್ತಮ ಕ್ರಿಕೆಟಿಗರಾಗಿ ಬೆಳೆಯುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ರಿಷಭ್ ಪಂತ್ 2022ರಲ್ಲಿ ಕಾರು ಅಪಘಾತಕ್ಕೀಡಾಗಿ, ವರ್ಷಗಳ ಕಾಲ ಚಿಕಿತ್ಸೆ ಪಡೆದು, ಕಷ್ಟಪಟ್ಟು ಮತ್ತೆ ಚೇತರಿಸಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಜೀವನದಲ್ಲಿ ನಡೆದ ದುರ್ಘಟನೆಯಿಂದ ಫಿನಿಕ್ಸ್ನಂತೆ ಪುಟಿದೆದ್ದು ಮತ್ತೆ ಬ್ಯಾಟ್ ಹಿಡಿದಿರುವ ರಿಷಭ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅಪಘಾತದ ಬಳಿಕ ಐಪಿಎಲ್ ಪ್ರವೇಶಿಸಿದ ಪಂತ್ ಅದ್ಭುತ ಪ್ರದರ್ಶನ ನೀಡಿದರು. ಟಿ20 ವಿಶ್ವಕಪ್‌ನಲ್ಲೂ ಉತ್ತಮವಾಗಿ ಬ್ಯಾಟ್ ಬೀಸಿದರು. ಹೀಗಾಗಿ ಬಿಸಿಸಿಐ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ತಂಡಕ್ಕೆ ಆಯ್ಕೆ ಮಾಡಿಕೊಂಡಿತು. ಈಗ ಟೆಸ್ಟ್ ಫಾರ್ಮ್ಯಾಟ್ಗೂ ಪಂತ್ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಎಲ್ಲ ಫಾರ್ಮ್ಯಾಟ್‌ಗಳಲ್ಲಿ ಪಂತ್ ಆಡಲಿದ್ದಾರೆ.
ಪಂತ್ ಅವರು ಪ್ರಸ್ತುತ ನಡೆಯುತ್ತಿರುವ ದುಲೀಪ್ ಟ್ರೋಫಿಯಲ್ಲಿ ಭಾರತ ಬಿ ಪರ ಆಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಪಂತ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ಬೆನ್ನಲ್ಲೇ ಟೀಮ್ ಇಂಡಿಯಾದ ದಿಗ್ಗಜ ಸೌರವ್ ಗಂಗೂಲಿ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ರಿಷಭ್ ಪಂತ್ ಟೆಸ್ಟ್ ತಂಡಕ್ಕೆ ಮರಳಿರುವುದು ನನಗೆ ಆಶ್ಚರ್ಯವಿಲ್ಲ. ಏಕೆಂದರೆ, ಅವರು ಭಾರತೀಯ ಟೆಸ್ಟ್ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದು ನಾನು ಭಾವಿಸುತ್ತೇನೆ. ಪಂತ್ ಟೆಸ್ಟ್ ಆಡುವುದನ್ನು ಮುಂದುವರಿಸಲಿದ್ದಾರೆ. ಅವರು ಈ ಸ್ವರೂಪದಲ್ಲಿ 'ಸರ್ವಕಾಲಿಕ ಶ್ರೇಷ್ಠ (GOAT)' ಕ್ರಿಕೆಟಿಗರಾಗಿ ಹೊರಹೊಮ್ಮುವುದುರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಪಂತ್ ಹಾಗೆ ಬೆಳೆಯಬೇಕಾದರೆ ತನ್ನ ಫಾರ್ಮ್ ಅನ್ನು ಹೀಗೆಯೇ ಮುಂದುವರಿಸಬೇಕು. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅವರು ಇನ್ನೂ ತಮ್ಮ ಆಟವನ್ನು ಸುಧಾರಿಸಬೇಕಾಗಿದೆ. ಅವರು ತಮ್ಮ ಅಗಾಧ ಪ್ರತಿಭೆಯಿಂದ ಟೀಮ್ ಇಂಡಿಯಾದ ಶ್ರೇಷ್ಠ ಆಟಗಾರನಾಗಿ ನಿಲ್ಲುತ್ತಾರೆ ಎಂದು ಸೌರವ್ ಗಂಗೂಲಿ ಇನ್ಸೈಡ್ ಸ್ಪೋರ್ಟ್ಸ್ಗೆ ತಿಳಿಸಿದ್ದಾರೆ. (ಏಜೆನ್ಸೀಸ್)