ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಸೆ.4ರಂದು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ ಬಳಿಕ ಸಾಕಷ್ಟು ಕುತೂಹಲಕಾರಿ ಸಂಗತಿಗಳು ಬಯಲಾಗುತ್ತಿವೆ. ಈ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್, ರೇಣುಕಾಸ್ವಾಮಿ ಹತ್ಯೆಯಾದ ಬಳಿಕ ಪೊಲೀಸರ ಮುಂದೆ ಶರಣಾಗಲು ತನ್ನ ಸಂಗಡಿಗರಿಗೆ ನೀಡಿದ ಹಣವೆಷ್ಟು ಎಂಬುದು ಚಾರ್ಜ್ಶೀಟ್ನಲ್ಲಿ ಬಯಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎಲ್ಲಿಯೂ ತನ್ನ ಹೆಸರು ಹಾಗೂ ಪ್ರೇಯಸಿ ಪವಿತ್ರಾ ಗೌಡ ಹೆಸರು ಬರದಂತೆ ನೋಡಿಕೊಳ್ಳಲು ತನ್ನ ಸಂಗಡಿಗರಿಗೆ ನಟ ದರ್ಶನ್ ಒಟ್ಟು 45 ಲಕ್ಷ ರೂಪಾಯಿ ಹಣ ನೀಡಿರುವುದಾಗಿ ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದೆ.
ಪವಿತ್ರಾ ಗೌಡಗೆ ಅಶ್ಲೀಲ ಮಸೇಜ್ಗಳನ್ನು ಮಾಡುತ್ತಿದ್ದ ಎಂಬ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಚಿತ್ರದುರ್ಗ ಜಿಲ್ಲೆಯ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರನ ಮೂಲಕ ಬೆಂಗಳೂರಿಗೆ ಕರೆಸಿಕೊಳ್ಳಲಾಗಿತ್ತು. ಆತನನ್ನು ಕರೆತರಲು ದರ್ಶನ್, ವಿನಯ್, ಪ್ರದೂಶ್, ಲಕ್ಷ್ಮಣ್ ಮತ್ತು ನಾಗರಾಜು ಅವರೇ ನಿರ್ದೇಶನ ನೀಡಿದ್ದರು. ಪಟ್ಟಣಗೆರೆ ಶೆಡ್ಗೆ ಕರೆತಂದ ಬಳಿಕ ಆತನ ಮೇಲೆ ಬರ್ಬರವಾಗಿ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ.
ರೇಣುಕಾಸ್ವಾಮಿ ಹತ್ಯೆಯಾದ ಬಳಿಕ ಪ್ರಕಣವನ್ನು ಮುಚ್ಚಿಹಾಕಲು ಮತ್ತು ಎಲ್ಲಿಯೂ ತನ್ನ ಹೆಸರು ಬರದಂತೆ ನೋಡಿಕೊಳ್ಳಲು ದರ್ಶನ್ ಪ್ರಯತ್ನಿಸಿದ್ದಾರೆ. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದಿದ್ದ ರಾಘವೇಂದ್ರ, ಅನು ಕುಮಾರ್, ರವಿಶಂಕರ್ ಹಾಗೂ ಜಗದೀಶ್ಗೆ ಪೊಲೀಸರ ಮುಂದೆ ಶರಣಾಗಲು ಸೂಚನೆ ನೀಡಲಾಗಿತ್ತು. ಆದರೆ, ಈ ನಾಲ್ವರಲ್ಲಿ ರಾಘವೇಂದ್ರ ಬಿಟ್ಟು ಇನ್ಯಾರು ಕೂಡ ಶರಣಾಗಲು ಒಪ್ಪಿಕೊಳ್ಳಲಿಲ್ಲ.
ಇದಾದ ಬಳಿಕ ಪ್ರದೂಶ್, ಲಕ್ಷ್ಮಣ್, ವಿನಯ್ ಮತ್ತು ನಾಗರಾಜು ದರ್ಶನ್ ಬಳಿ ಹೋಗಿ ಹಣದ ಅವಶ್ಯಕತೆ ಇದೆ ಎಂದಿದ್ದರು. ರಾಘವೇಂದ್ರ ಮಾತ್ರ ಶರಣಾಗಲು ಒಪ್ಪಿಕೊಂಡಿದ್ದಾನೆ. ಉಳಿದವರು ಒಪ್ಪಿಕೊಳ್ಳುತ್ತಿಲ್ಲ. ಹೀಗಾಗಿ ಹಣದ ಅವಶ್ಯಕತೆ ಇದೆ ಎಂದು ಹೇಳಿದ್ದರು. ಇದಾದ ಬಳಿಕ ದರ್ಶನ್, ಪ್ರದೂಶ್ಗೆ 30 ಲಕ್ಷ, ವಿನಯ್ಗೆ 10 ಹಾಗೂ ನಾಗರಾಜುಗೆ 5 ಲಕ್ಷ ರೂ. ನೀಡಿದ್ದಾರೆ. ಅಲ್ಲದೆ, ಹೆಚ್ಚಿನ ಹಣದ ಅಗತ್ಯ ಇದ್ದಲ್ಲಿ ಕೊಡುತ್ತೇನೆಂದು ಭರವಸೆ ನೀಡಿದ್ದಾರೆ. ಇಡೀ ಪ್ರಕರಣವನ್ನು ನೀವೇ ಹ್ಯಾಂಡಲ್ ಮಾಡಿ ಮತ್ತು ಎಲ್ಲಿಯೂ ನನ್ನ ಮತ್ತು ಪವಿತ್ರಾ ಹೆಸರು ಬರದಂತೆ ನೋಡಿಕೊಳ್ಳಿ ಎಂದು ದರ್ಶನ್ ಹೇಳಿದ್ದಾರೆ.
ದರ್ಶನ್ರಿಂದ ಹಣ ಪಡೆದ ಪ್ರದೂಶ್, ನಾಗರಾಜು, ವಿನಯ್ ಮತ್ತು ಲಕ್ಷ್ಮಣ್ ಅಲ್ಲಿಂದ ಸೀದಾ ಪಟ್ಟಣಗೆರೆ ಶೆಡ್ ಬಳಿ ಬರುತ್ತಾರೆ. ನಂತರ ದೀಪಕ್ ಎಂಬಾತನ ಬಳಿ ನಿನಗೆ ಪರಿಚಯವಿರುವ ಯಾರಾದರೂ ಕೊಲೆ ಮಾಡಿರುವುದಾಗಿ ಶರಣಾಗಲು ಒಪ್ಪಿಸಲು ಮತ್ತು ಬೇಕಾದಷ್ಟು ಹಣ ಸಿಗುತ್ತದೆ ಎಂದು ಆಮಿಷವೊಡ್ಡಿದ್ದಾರೆ. ಬಳಿಕ ದೀಪಕ್ ತನಗೆ ಗೊತ್ತಿದ್ದ ಕಾರ್ತಿಕ್ ಮತ್ತು ಆತನ ಸ್ನೇಹಿತ ನಿಖಿಲ್ ಕುಮಾರ್ ಎಂಬುವರನ್ನು ಶೆಡ್ಗೆ ಕರೆಯಿಸಿ ಮಾತನಾಡಿ ಹಣದ ಆಮಿಷ ಒಡ್ಡುತ್ತಾರೆ. ಹಣದ ಆಸೆಗೆ ಕಾರ್ತಿಕ್, ನಿಖಿಲ್, ರಾಘವೇಂದ್ರ ಹಾಗೂ ಕೇಶವಮೂರ್ತಿ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಗೆ ಹೋಗಿ ತಾವೇ ಕೊಲೆ ಮಾಡಿರುವುದಾಗಿ ಶರಣಾಗುತ್ತಾರೆ. ಆದರೆ, ಅನುಮಾನಗೊಂಡ ಪೊಲೀಸರು ನಾಲ್ವರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದಾಗ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುವುದನ್ನು ಅರಿತು ತನಿಖೆ ನಡೆಸಿದಾಗ ಇಡೀ ಪ್ರಕರಣ ಬಯಲಿಗೆ ಬಂದಿದೆ.
ಅಶ್ಲೀಲ ಮಸೇಜ್ ಕಳುಹಿಸುತ್ತಿದ್ದ
ಇನ್ಸ್ಟಾಗ್ರಾಂನಲ್ಲಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಮಾಡಿರುವ ಸಂಪೂರ್ಣ ಮೆಸೇಜ್ಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ‘Goutham_KS_1990’ ಹೆಸರಿನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ, ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ಗಳನ್ನು ಮಾಡಿದ್ದ ಎಂದು ತಿಳಿದುಬಂದಿದೆ. ಕಿಡ್ನಾಪ್ ಆಗುವ 8 ದಿನಗಳಿಗೂ ಮುಂಚೆ ಪವಿತ್ರಾ ಗೌಡಳ pavitragowda777_official ಹೆಸರಿನ ಅಧಿಕೃತ ಇನ್ಸ್ಟಾಗ್ರಾಂ ಖಾತೆಗೆ ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದ. ಎ2 ಆರೋಪಿ ನಟ ದರ್ಶನ್ರನ್ನು ಬಿಟ್ಟು ತನ್ನ ಜೊತೆ ಇರುವಂತೆ ಪಟ್ಟು ಹಿಡಿದಿದ್ದ. ಅಲ್ಲದೆ, ಪವಿತ್ರಾಳ ದೇಹದ ಬಗ್ಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ. ನಾನು ನಿಮ್ಮ ಅಭಿಮಾನಿ ಎಂದು ಹೇಳಿಕೊಂಡು, ಆಕೆಯನ್ನು ಲೈಂಗಿಕ ಬಯಕೆ ಈಡೇರಿಸುವಂತೆ ಆಹ್ವಾನಿಸಿದ್ದ. ಇದಿಷ್ಟೇ ಅಲ್ಲದೆ, ತನ್ನ ಮರ್ಮಾಂಗದ ಫೋಟೋ ಸೇರಿದಂತೆ ತನ್ನ ಅನೇಕ ಫೋಟೋಗಳನ್ನು ಪವಿತ್ರಾಗೆ ಕಳುಹಿಸಿದ್ದ ಎಂದು ಚಾರ್ಜ್ಶೀಟ್ ಉಲ್ಲೇಖಿಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪವಿತ್ರಾ ಆಕ್ರೋಶ
ರೇಣುಕಾಸ್ವಾಮಿಯ ವರ್ತನೆ ಪವಿತ್ರಾ ಗೌಡಳ ಕೋಪಕ್ಕೆ ಕಾರಣವಾಯಿತು. ಈ ವಿಚಾರವನ್ನು ತನ್ನ ಮ್ಯಾನೇಜರ್ ಪವನ್ಗೆ ಪವಿತ್ರಾ ತಿಳಿಸಿದಳು. ಬಳಿಕ ಪವನ್ ಪವಿತ್ರಾ ತನ್ನ ಹೆಸರಿನಲ್ಲಿ ರೇಣುಕಾಸ್ವಾಮಿಗೆ ಮಸೇಜ್ ಮಾಡಿ, ಆತನಿಂದ ಎಲ್ಲ ಮಾಹಿತಿ ಪಡೆದುಕೊಂಡನು. ಈ ಸಂಗತಿಯನ್ನು ನಟ ದರ್ಶನ್ಗೆ ತಿಳಿಸಿದನು. ನಂತರ ಚಿತ್ರದುರ್ಗ ಜಿಲ್ಲೆಯ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರಗೆ ತಿಳಿಸಿದ್ದು, ಆತ ಒಂದು ತಂಡವನ್ನು ಕಟ್ಟಿಕೊಂಡು ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ, ಆರ್ಆರ್ ನಗರದ ಪಟ್ಟಣಗೆರೆ ಶೆಡ್ಗೆ ಕರೆತಂದಿದ್ದಾನೆ. ಇದೇ ಸಂದರ್ಭದಲ್ಲಿ ಆರ್ಆರ್ ನಗರದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ನಲ್ಲಿ ಪಾರ್ಟಿ ಮಾಡುತ್ತಿದ್ದ ನಟ ದರ್ಶನ್ಗೆ ಈ ವಿಚಾರವನ್ನು ತಿಳಿಸಲಾಗಿದೆ. ತಕ್ಷಣ ರೆಸ್ಟೋರೆಂಟ್ನಿಂದ ಹೊರಟ ದರ್ಶನ್, ಪವಿತ್ರಾ ಗೌಡ ಮನೆಗೆ ತೆರಳಿ, ಆಕೆಯನ್ನು ತನ್ನ ಜತೆ ಕರೆದುಕೊಂಡು ಪಟ್ಟಣಗೆರೆ ಶೆಡ್ ಬಳಿ ಬಂದಿದ್ದಾರೆ. ಪಟ್ಟಣಗೆರೆ ಶೆಡ್ನಲ್ಲಿ ತೀವ್ರ ಹಲ್ಲೆ ಮಾಡಿದ ಬಳಿಕ ಮೃತಪಟ್ಟ ರೇಣುಕಾಸ್ವಾಮಿಯನ್ನು ಕಾಮಾಕ್ಷಿಪಾಳ್ಯ ಬಳಿಯ ಮೋರಿಯಲ್ಲಿ ಎಸೆಯಲಾಯಿತು ಎಂದು ಚಾರ್ಜ್ಶೀಟ್ನಲ್ಲಿ ಹೇಳಲಾಗಿದೆ.
ಸಾಕ್ಷಿಗಳು
ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ನೀಡಲು ಬಳಸಿದ ಸಾಧನವು ಪೋರ್ಟಬಲ್ ಮೆಗ್ಗರ್ ಆಗಿದ್ದು, ಅದನ್ನು ಆನ್‌ಲೈನ್‌ನಲ್ಲಿ ಖರೀದಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಆರೋಪಿಗಳಾದ ನಿಖಿಲ್ ನಾಯ್ಕ್, ಕೇಶವಮೂರ್ತಿ ಮತ್ತು ಕಾರ್ತಿಕ್ ಎಂಬುವವರು ಕೊಲೆ ಆರೋಪವನ್ನು ತಮ್ಮ ಮೇಲೆ ಹಾಕಿಕೊಂಡು ಪೊಲೀಸರ ಮುಂದೆ ಶರಣಾಗತಿಯ ನಾಟಕವಾಡಿದ್ದರು. ಅವರ ಮೇಲೆ ಸಾಕ್ಷ್ಯ ನಾಶ ಮತ್ತು ಕ್ರಿಮಿನಲ್ ಪಿತೂರಿ ಆರೋಪವನ್ನು ಹೊರಿಸಲಾಗಿದೆ. ಉಳಿದ 14 ಆರೋಪಿಗಳ ಮೇಲೆ ಅಪಹರಣ, ಕೊಲೆ, ಸಾಕ್ಷ್ಯ ನಾಶ ಮತ್ತು ಕ್ರಿಮಿನಲ್ ಪಿತೂರಿ ಆರೋಪವಿದೆ. ಎಲ್ಲ 17 ಆರೋಪಿಗಳು ಬೇರೆ ಬೇರೆ ಜೈಲುಗಳಲ್ಲಿದ್ದಾರೆ. ಮೂವರನ್ನು ಪ್ರತ್ಯಕ್ಷದರ್ಶಿಗಳು ಎಂದು ಗುರುತಿಸಲಾಗಿದೆ. ಮ್ಯಾಜಿಸ್ಟ್ರೇಟ್ ಮುಂದೆ ಸಿಆರ್‌ಪಿಸಿ 164 ರ ಅಡಿಯಲ್ಲಿ ಸುಮಾರು 27 ಜನರು ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಸಿಆರ್‌ಪಿಸಿ 161 ರ ಅಡಿಯಲ್ಲಿ ಸುಮಾರು 97 ಜನರ ಹೇಳಿಕೆಗಳನ್ನು ಪೊಲೀಸರ ಮುಂದೆ ದಾಖಲಿಸಲಾಗಿದೆ.
ಬೆಂಗಳೂರಿನಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯ ಹಾಗೂ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ವರದಿಯನ್ನು ಪೊಲೀಸರು ಸಲ್ಲಿಸಿದ್ದಾರೆ. ತಹಸೀಲ್ದಾರ್, ವೈದ್ಯರು ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸೇರಿದಂತೆ ಎಂಟು ಸರ್ಕಾರಿ ಅಧಿಕಾರಿಗಳು ಮತ್ತು 56 ಪೊಲೀಸ್ ಸಿಬ್ಬಂದಿ ಮತ್ತು 59 ಮಹಜರ್ (ಸ್ಥಳ ತಪಾಸಣೆ) ಸಾಕ್ಷಿಗಳ ಹೇಳಿಕೆಗಳನ್ನು ಸಲ್ಲಿಸಲಾಗಿದೆ.
ಎಫ್‌ಎಸ್‌ಎಲ್‌ನಿಂದ ಆರೋಪಿಯ ಮೊಬೈಲ್ ಫೋನ್ ಡೇಟಾ, ದರ್ಶನ್ ಮತ್ತು ಗ್ಯಾಂಗ್ ಪಾರ್ಕಿಂಗ್ ಯಾರ್ಡ್ ಪ್ರವೇಶಿಸುವ ಮತ್ತು ನಿರ್ಗಮಿಸುವ ಸಿಸಿಟಿವಿ ದೃಶ್ಯಗಳು, ಕರೆ ವಿವರಗಳ ದಾಖಲೆಗಳು (ಸಿಡಿಆರ್), ಮೊಬೈಲ್ ಟವರ್ ಲೊಕೇಶನ್, ವಾಟ್ಸ್ಆ್ಯಪ್ ಸಂದೇಶಗಳು ಮತ್ತು ಹಲ್ಲೆಯ ಫೋಟೋಗಳು ಇತರ ದಾಖಲೆಗಳಲ್ಲಿ ಸೇರಿವೆ. ದರ್ಶನ್ ಮತ್ತು ಇತರ ಆರೋಪಿಗಳ ಮನೆಗಳಿಂದ ವಶಪಡಿಸಿಕೊಂಡ ಹಣವನ್ನು ಸಹ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಹೈಪ್ರೊಫೈಲ್ ಪ್ರಕರಣದ ತನಿಖೆಯನ್ನು ಸಹಾಯಕ ಪೊಲೀಸ್ ಆಯುಕ್ತ (ವಿಜಯನಗರ ಉಪವಿಭಾಗ) ಚಂದನ್ ಕುಮಾರ್ ನೇತೃತ್ವದಲ್ಲಿ ನಡೆಸಲಾಗಿದೆ. ಕಾಮಾಕ್ಷಿಪಾಳ್ಯ, ಸಿಕೆ ಅಚ್ಚುಕಟ್ಟು, ಕೆಂಗೇರಿ ಹಾಗೂ ಗೋವಿಂದರಾಜನಗರ, ಅನ್ನಪೂರ್ಣೇಶ್ವರಿನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಕೂಡ ತನಿಖಾ ತಂಡದಲ್ಲಿದ್ದರು. ಹೈದರಾಬಾದ್‌ನ ಸಿಎಫ್ಎಸ್ಎಲ್ನಿಂದ ಕೆಲವು ವರದಿಗಳು ಬಾಕಿ ಉಳಿದಿದ್ದು, ಸಿಆರ್‌ಪಿಸಿ 173 (8) ಅಡಿಯಲ್ಲಿ ತನಿಖೆ ಮುಂದುವರಿದಿದೆ. (ಏಜೆನ್ಸೀಸ್)
ದೈತ್ಯ ದೇಹದ WWE ಸೂಪರ್ ಸ್ಟಾರ್ಗೆ ಏನಾಯ್ತು? ಗುರುತೇ ಸಿಗದಷ್ಟು ಬದಲಾದ ಬಟಿಸ್ಟಾ!
ಈ ದಿನಾಂಕದಂದು ಜನಿಸಿದವರು ಜೀವನದಲ್ಲಿ ರಾಜರಂತೆ ಬದುಕುತ್ತಾರೆ… ನೀವೂ ಇದೇ ದಿನ ಹುಟ್ಟಿದ್ದೀರಾ ನೋಡಿ!