

ನವದೆಹಲಿ: ಡಬ್ಲ್ಯುಡಬ್ಲ್ಯುಇ (ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್) ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದೆ. ಈ ಕ್ರೀಡಾ ಮನರಂಜನೆ ಬಹುತೇಕರ ಫೇವರಿಟ್ ಆಗಿದ್ದು, ಟ್ರಿಪಲ್ ಎಚ್, ಜಾನ್ ಸೀನಾ, ರಾಂಡಿ ಓರ್ಟನ್, ದಿ ರಾಕ್, ಅಂಡರ್‌ಟೇಕರ್ ಹಾಗೂ ರೋಮನ್ ರೇನ್ ಹೀಗೆ ಹಲವು ಸ್ಟಾರ್‌ಗಳು ಈ ಕುಸ್ತಿ ಸ್ಪರ್ಧೆಯಿಂದ ಜಾಗತಿಕ ಮನ್ನಣೆ ಗಳಿಸಿದ್ದಾರೆ.
ಜಾನ್ ಸೀನಾ, ದಿ ರಾಕ್ ಸೇರಿ ಕೆಲವರು ಸಿನಿಮಾಗಳಲ್ಲಿಯೂ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ತಮ್ಮ ದೈತ್ಯ ದೇಹದಿಂದಲೇ ಎಲ್ಲರ ಗಮನ ಸೆಳೆದ ಕೆಲವೇ ಕೆಲ ಡಬ್ಲ್ಯುಡಬ್ಲ್ಯುಇ ಸ್ಟಾರ್ಗಳಲ್ಲಿ ಡೇವಿಡ್ ಮೈಕೆಲ್ ಬಟಿಸ್ಟಾ ಕೂಡ ಒಬ್ಬರು. 1999ರಲ್ಲಿ ಡಬ್ಲ್ಯುಡಬ್ಲ್ಯುಇ ಪ್ರಯಾಣ ಆರಂಭಿಸಿದ ಬಟಿಸ್ಟಾ, ಜಾನ್ ಸೀನಾ, ದಿ ಅಂಡರ್‌ಟೇಕರ್, ಟ್ರಿಪಲ್ ಎಚ್, ರಾಂಡಿ ಓರ್ಟನ್ ಅವರಂತೆ ಹೆವಿವೇಯ್ಟ್ ಚಾಂಪಿಯನ್ ಆಗಿದ್ದು, ಆರು ಬಾರಿ ವರ್ಲ್ಡ್ ಚಾಂಪಿಯನ್ ಆಗಿದ್ದಾರೆ.
ಡಬ್ಲ್ಯುಡಬ್ಲ್ಯುಇ ಜೊತೆಗೆ 2009 ರಲ್ಲಿ ಮೈ ಸನ್, ಮೈ ಸನ್, ವಾಟ್ ಹ್ಯಾವ್ ಯೆ ಡನ್ ಚಿತ್ರದ ಮೂಲಕ ಹಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇದಾದ ಬಳಿಕ ರಾಂಗ್ ಸೈಡ್ ಆಫ್ ಟೌನ್, ಗಾರ್ಡಿಯನ್ಸ್ ಆಫ್ ದಿ ಗ್ಯಾಲಕ್ಸಿ, ಆರ್ಮಿ ಆಫ್ ದಿ ಡೆಡ್ ಸಿನಿಮಾಗಳಲ್ಲಿ ನಟಿಸಿದರು. ವಿಶ್ವವಿಖ್ಯಾತ ಅವೆಂಜರ್ಸ್ ಸಿನಿಮಾದಲ್ಲೂ ಬಟಿಸ್ಟಾ ಅವರು ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದಾರೆ.
2019ರಲ್ಲಿ ಡಬ್ಲ್ಯುಡಬ್ಲ್ಯುಇಗೆ ಬಟಿಸ್ಟಾ ಗುಡ್ಬೈ ಹೇಳಿದರು. ಆದರೆ, ಸುಮಾರು 15 ವರ್ಷಗಳಿಂದ ಚಿತ್ರರಂಗದಲ್ಲಿ ಪಯಣ ಬೆಳೆಸುತ್ತಿದ್ದಾರೆ. ಸ್ಟಾರ್ ನಟನೆಂಬ ಪಟ್ಟಗಿಟ್ಟಿಸಿರುವ ಬಟಿಸ್ಟಾ ಅವರ ಇತ್ತೀಚಿನ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದನ್ನು ನೋಡಿದ ಅಭಿಮಾನಿಗಳು ಒಂದು ಕ್ಷಣ ಶಾಕ್ ಆಗಿದ್ದಾರೆ.
ಡಬ್ಲ್ಯುಡಬ್ಲ್ಯುಇ ವೇದಿಕೆಯಲ್ಲಿ ತಮ್ಮ ಭುಜಬಲ ಪ್ರದರ್ಶಿಸಿದ್ದ ಬಟಿಸ್ಟಾ ಇದೀಗ ಸಿಕ್ಕಾಪಟ್ಟೆ ತೆಳ್ಳಗಾಗಿದ್ದಾರೆ. ತಮ್ಮ ದೈತ್ಯ ದೇಹದಿಂದಲೇ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಬಟಿಸ್ಟಾ ಇದೀಗ ಗುರುತೇ ಸಿಗದಷ್ಟು ಬದಲಾಗಿಬಿಟ್ಟಿದ್ದಾರೆ. ಹೊಸ ಅವತಾರ ನೋಡಿದ ಅಭಿಮಾನಿಗಳು ಇವರೇನಾ ಬಟಿಸ್ಟಾ ಎಂದು ಹುಬ್ಬೇರಿಸುತ್ತಿದ್ದಾರೆ.
55 ವರ್ಷದ ಬಟಿಸ್ಟಾ 2019ರಲ್ಲಿ ಡಬ್ಲ್ಯುಡಬ್ಲ್ಯುಇ ರಿಂಗ್‌ನಿಂದ ನಿವೃತ್ತರಾಗಿ ಸಿನಿಮಾಗಳತ್ತ ಸಂಪೂರ್ಣ ಗಮನ ಹರಿಸಿದ್ದಾರೆ. (ಏಜೆನ್ಸೀಸ್)