

ಆಂಧ್ರಪ್ರದೇಶ: ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ಅಭಿನಯದ ಬಡ್ಡಿ ಚಿತ್ರ ಇದೇ ಜುಲೈ 26ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿತ್ತು. ಆದ್ರೆ, ಚಿತ್ರ ತಯಾರಕರು ಕಾರಣಾಂತರಗಳಿಂದ ರಿಲೀಸ್ ದಿನಾಂಕವನ್ನು ಇದೀಗ ಮುಂದೂಡಿದ್ದು, ಆಗಸ್ಟ್ 02, 2024ರಂದು ತೆರೆಗೆ ತರಲು ನಿರ್ಧರಿಸಿದ್ದಾರೆ. ಇನ್ನು ತಮ್ಮ ಹೊಸ ಚಿತ್ರದ ಬಗ್ಗೆ ಮಾತನಾಡಿದ ಅಲ್ಲು ಸಿರೀಶ್, ಥಿಯೇಟರ್ಗೆ ಬರುವ ಪ್ರೇಕ್ಷಕರ ದೃಷ್ಟಿಕೋನ ಬದಲಾಗಿದೆ ಎಂದು ಅಭಿಪ್ರಾಯಿಸಿದ್ದಾರೆ.
ಸ್ಯಾಮ್ ಅಂಟನ್ ನಿರ್ದೇಶನದಲ್ಲಿ ಮೂಡಿಬಂದಿರುವ 'ಬಡ್ಡಿ' ಚಿತ್ರವು ತೆಲುಗು ಸಿನಿಮಾಗಳ ರಿಮೇಕ್ ಎಂಬ ಮಾತುಗಳು ಟಾಲಿವುಡ್ ಅಂಗಳದಲ್ಲಿ ಕೇಳಿಬಂದಿತ್ತು. ಈ ವಿಷಯವನ್ನು ಮುಂದಿಟ್ಟು ಮಾತನಾಡಿದ ಅಲ್ಲು ಸಿರೀಶ್, "ರಿಮೇಕ್ ಚಿತ್ರಗಳನ್ನು ನೋಡಲು ಈಗ ಸಿನಿಪ್ರೇಕ್ಷಕರಿಗೆ ಇಷ್ಟವಿಲ್ಲ. ಇದರಲ್ಲಿ ಜನ ಆಸಕ್ತಿ ಕಳೆದುಕೊಂಡಿದ್ದಾರೆ. ಸಿನಿಮಾಗಳು ಈಗ ಜನರಿಗೆ ಸುಲಭವಾಗಿ ಕೈಗೆಟುಕುತ್ತಿವೆ. ರಿಮೇಕ್ ನೋಡುವ ಕಾಲ ಮುಗಿದು ಹೋಗಿದೆ. ದಿನದಿಂದ ದಿನಕ್ಕೆ ಸಿನಿಮಾಗಳ ಸಂಖ್ಯೆ ಕೂಡ ಹೆಚ್ಚುತ್ತಿವೆ" ಎಂದರು.
"ನಮ್ಮ ಚಿತ್ರ ರಿಮೇಕ್ ಅಲ್ಲ. ಇದರ ಕಥೆ ಸಂಪೂರ್ಣವಾಗಿ ಬದಲಾಗಿದೆ. ನೀವು ಅಂದುಕೊಂಡಂತೆ ಇದು ರಿಮೇಕ್ ಸಿನಿಮಾ ಅಲ್ವೇ ಅಲ್ಲ. ತೆಲುಗು ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಈ ಚಿತ್ರವನ್ನು ಮಾಡಿದ್ದೇವೆ. ನಮ್ಮ ಚಿತ್ರದಲ್ಲಿ ಯಾವುದೇ ಡಬಲ್ ಮೀನಿಂಗ್ ಜೋಕ್ಸ್ ಇಲ್ಲ" ಎಂದು ಹೇಳಿದ್ದಾರೆ.