

ಬೆಂಗಳೂರು: ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಅಭಿವೃದ್ಧಿಪಡಿಸುವ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ರಿಯಲ್ ಎಸ್ಟೇಟ್ ಕುಳಗಳೊಂದಿಗೆ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಹೊರಟಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆದು ಮರು ನಿರ್ಮಿಸಿ ಅಲ್ಲಿನ ವ್ಯಾಪಾರಿ ಕುಟುಂಬಗಳ ರಕ್ಷಣೆಗೆ ನಿಲ್ಲಬೇಕು ಎಂದು ಆಮ್ ಆದ್ಮಿ ಪಕ್ಷದ ಮಹಾನಗರ ಘಟವು ಸರ್ಕಾರವನ್ನು ಒತ್ತಾಯಿಸಿದೆ.
ಈ ಸಂಬಂಧ ಪಕ್ಷದ ಮುಖಂಡರಿದ್ದ ನಿಯೋಗವು ಮಂಗಳವಾರ ಬಿಡಿಎ ಆಯುಕ್ತ ಎನ್.ಜಯರಾಮ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಅರ್ಪಿಸಿತು. ವಾಣಿಜ್ಯ ಸಂಕೀರ್ಣಗಳನ್ನು ನಾಗರಿಕರ ತೆರಿಗೆ ಹಣದಲ್ಲಿ ಪೋಲು ಮಾಡದೆ ನಗರದ ವಿವಿಧೆಡೆ ಜನರ ಅನುಕೂಲಕ್ಕಾಗಿ ಸಣ್ಣ ಕಾಂಪ್ಲೆಕ್ಸ್‌ಗಳನ್ನು ನಿರ್ಮಿಸಬೇಕು. ಈ ತೀರ್ಮಾನವನ್ನು ಆದಷ್ಟು ಬೇಗ ಜಾರಿಗೆ ತರಬೇಕು ಎಂದು ಒತ್ತಾಯಿಸಲಾಯಿತು.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖಂಡ ಅನಿಲ್ ನಾಚಪ್ಪ, ಆಮ್ ಆದ್ಮಿ ಪಕ್ಷವು ಬಿಡಿಎ ವಾಣಿಜ್ಯ ಸಂಕೀರ್ಣಗಳ ಉಳಿವಿಗಾಗಿ ಈಗಾಗಲೇ ಅನೇಕ ಹೋರಾಟಗಳನ್ನು ನಡೆಸುತ್ತಿದೆ. ಮುಂಬರುವ ದಿನಗಳಲ್ಲಿ ಸರ್ಕಾರವು ತನ್ನ ನಿಲುವನ್ನು ಬದಲಿಸದಿದ್ದಲ್ಲಿ ಮತ್ತೆ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಿಯೋಗದಲ್ಲಿ ಆಮ್ ಆದ್ಮಿಪಕ್ಷದ ಸ್ಥಳೀಯ ಮುಖಂಡರಾದ ಗೋಪಾಲ್, ಪುಟ್ಟಣ್ಣ ಗೌಡ, ಬಿಡಿಎ ಕಾಂಪ್ಲೆಕ್ಸ್ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ನಾಗೇಶ್ ಮತ್ತಿತರರಿದ್ದರು.