ಸೌದಿ ಅರೇಬಿಯಾ, ಅಮೆರಿಕಕ್ಕೆ ಹಾರಲು ಸಿದ್ಧವಾಗಿದೆ ಧಾರವಾಡದ ಈ ವಿಶಿಷ್ಟ ಮಾವಿನ ತಳಿ!

WhatsApp Image 2024-05-19 at 7.26.30 PM
Published on

ಧಾರವಾಡ: ಈಗ ಬೇಸಿಗೆಗಾಲ ಆದ ಕಾರಣ ಮಾವಿನ ಹಣ್ಣು ಹೆಚ್ಚು ಚಾಲ್ತಿಯಲ್ಲಿದೆ. ಸಿಹಿ ಸಿಹಿಯಾದ, ವಿವಿಧ ಬಗೆಯ ಮಾವನ್ನು ಸವಿಯುತ್ತಿರುವ ಜನಸಾಮಾನ್ಯರು, ಅಗತ್ಯ ಮೀರಿದಷ್ಟು ಹಣ್ಣನ್ನು ಖರೀದಿ ಮಾಡುವಲ್ಲಿ ಮುಂದಾಗಿದ್ದು, ಈ ಮೂಲಕ ನಮ್ಮ ರಾಜ್ಯದ ರೈತರಿಗೆ ಉತ್ತಮ ಬೆಲೆ ದೊರಕುವಂತೆ ಸಹಕರಿಸಿದ್ದಾರೆ. ಇನ್ನು ಉತ್ತರ ಕರ್ನಾಟಕದ ಧಾರವಾಡ ಅಪೋಸ (Alphanso) ತಳಿಯ ಮಾವಿನಹಣ್ಣು ಹೆಚ್ಚು ಹೆಸರುವಾಸಿಯಾಗಿದ್ದು, ಸದ್ಯ ಈ ಹಣ್ಣಿಗಿದ್ದ ಬೇಡಿಕೆ ಇದೀಗ ದುಪ್ಪಟ್ಟಾಗಿದೆ.

ಧಾರವಾಡದ ಮಾವಿನ ತೋಪುಗಳಲ್ಲಿ ವಿಶಿಷ್ಟವಾಗಿ ಕಂಡುಬರುವ ಸ್ಥಳೀಯ ಹೆಸರಿನಲ್ಲಿ ಕರೆಯಲ್ಪಡುವ ಅಪೋಸ ಹಣ್ಣಿಗೆ ಬಹಳ ಬೇಡಿಕೆ ಕೇಳಿಬಂದಿದೆ. ಪ್ರಸಿದ್ಧ ಅಲ್ಫೋನ್ಸೋ ಮಾವು ಸರ್ವವ್ಯಾಪಿಯಾಗಿರುವಾಗ ಧಾರವಾಡದಲ್ಲಿ ಬೆಳೆಯುವ ಈ ತಳಿಯು ಉತ್ತಮ ಗುಣಮಟ್ಟದಿಂದ ಕೂಡಿದ್ದು, ದೇಶ-ವಿದೇಶಗಳಲ್ಲಿ ಪ್ರಖ್ಯಾತಿ ಪಡೆದುಕೊಳ್ಳುತ್ತಿದೆ.

ಸದ್ಯ ಈ ಹಣ್ಣಿಗೆ ಇದೀಗ ಸೌದಿ ಅರೇಬಿಯಾ ಮತ್ತು ಅಮೇರಿಕಾದಂತಹ ದೊಡ್ಡ ರಾಷ್ಟ್ರಗಳಲ್ಲಿ ಭಾರೀ ಬೇಡಿಕೆ ಹೆಚ್ಚಾಗಿದ್ದು, ಈ ಎರಡು ದೇಶಗಳಿಗೂ ಧಾರವಾಡದ ಅಪೋಸಾ ಮಾವಿನ ಹಣ್ಣು ರಫ್ತು ಆಗಲಿದೆ. ಈ ಮೂಲಕ ಅಪೋಸಾ ಮಾವಿನ ಹಣ್ಣಿಗೆ ಮಹತ್ವದ ಮೈಲಿಗಲ್ಲು ಸಿಕ್ಕಿದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ, ಧಾರವಾಡದ ಅಲ್ಫೊನ್ಸೊ ಮಾವಿನಹಣ್ಣುಗಳು ಬಹಳ ಪ್ರಸಿದ್ಧಿ ಪಡೆದಿದೆ.

ಈ ಹಿಂದಿನಿಂದಲೂ ಸೌದಿ ಅರೇಬಿಯಾಗೆ ಅಪೋಸ ಹಣ್ಣುಗಳನ್ನು ಕಳಿಸಿಕೊಡಲಾಗುತ್ತಿತ್ತು. ಆದರೆ, ಈಗ ಹೊಸ ಅವಕಾಶಗಳು ಅರಸಿಬಂದಿದ್ದು, ಅಮೇರಿಕನ್ ನಗರಗಳು ಈ ರುಚಿಕರವಾದ ಹಣ್ಣುಗಳಲ್ಲಿ ಭಾರೀ ಆಸಕ್ತಿಯನ್ನು ತೋರಿರುವುದು ಕಂಡುಬಂದಿದೆ. ನಮ್ಮ ಮಾವಿನ ತಳಿಗೆ ಅಲ್ಲಿನ ಜನರು ಮನಸೋತಿದ್ದು, ರೈತರು ಬೆಳೆದ ಮಾವುಗಳಿಗೆ ಉತ್ತಮ ಬೆಂಬಲ ದೊರಕಿದಂತಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net