

ತಮಿಳುನಾಡು: ಈ ಶುಕ್ರವಾರ ತೆರೆಗೆ ಅಪ್ಪಳಿಸಬೇಕಿದ್ದ ತೆಲುಗು ಚಿತ್ರರಂಗದ ಎರಡು ಬಹುನಿರೀಕ್ಷಿತ ರೊಮ್ಯಾಂಟಿಕ್ ಡ್ರಾಮಾಗಳಾದ 'ಶಶಿವದನೆ' ಮತ್ತು 'ಲವ್ ಮೌಳಿ' ಚಿತ್ರಗಳನ್ನು ಸದ್ಯ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಶಶಿವದನೆ ಚಿತ್ರದಲ್ಲಿ ರಕ್ಷಿತ್ ಅಟ್ಲೂರಿ ಮತ್ತು ಕೋಮಲಿ ಪ್ರಸಾದ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರವನ್ನು ಸಾಯಿ ಮೋಹನ್ ಉಬ್ಬಣ್ಣ ನಿರ್ದೇಶಿಸಿದ್ದಾರೆ.
ಈ ಸಿನಿಮಾಗಳು ನಿರೀಕ್ಷಿಸಿದ್ದಂತೆ ಏಪ್ರಿಲ್ 5ರಂದು ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರ ತಯಾರಕರು ಆರಂಭದಲ್ಲಿ ಈ ದಿನಾಂಕಗಳನ್ನು ಘೋಷಿಸಿದ್ದು, ತದನಂತರದಲ್ಲಿ ಏಪ್ರಿಲ್ 19ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಸಿನಿಪ್ರೇಕ್ಷಕರಿಗೆ ಮಾಹಿತಿ ಹಂಚಿಕೊಂಡಿದ್ದರು. ಈಗ ಬಿಡುಗಡೆ ದಿನಾಂಕದಲ್ಲಿ ಮತ್ತೊಮ್ಮೆ ಬದಲಾವಣೆಯಾಗಿದ್ದು, ಮೇ 2024ಕ್ಕೆ ಮುಂದೂಡಲಾಗಿದೆ.
ಮೇ ತಿಂಗಳಿಗೆ ಸಿನಿಮಾ ಬಿಡುಗಡೆಯಾಗುವುದು ಖಚಿತ ಎಂದಿದ್ದಾರೆ. ದಿನಾಂಕ ಯಾವಾಗ ಎಂಬುದು ಮಾತ್ರ ಇನ್ನೂ ಅಧಿಕೃತವಾಗಿ ಘೋಷಣೆ ಆಗಿಲ್ಲ. ರಿಲೀಸ್ಗೆ 10 ದಿನಗಳಿದೆ ಎನ್ನುವಾಗ ಡೇಟ್ ಅನೌನ್ಸ್ ಮಾಡುವ ನಿರೀಕ್ಷೆಯಿದೆ. ಬಹುಶಃ ಬಿಡುಗಡೆಗೆ ಇತರೆ ಸಿನಿಮಾಗಳು ಸಾಲುಗಟ್ಟಿ ನಿಂತಿರುವುದರಿಂದ ತಮ್ಮ ಚಿತ್ರಕ್ಕೆ ಅಡಚಣೆ ಉಂಟಾಗಬಹುದು ಎಂಬ ಮುನ್ನೇಚ್ಚರಿಕೆಯಿಂದ ಚಿತ್ರತಂಡ ರಿಲೀಸ್ ಮುಂದೂಡಿರಬಹುದು ಎಂದು ಹೇಳಲಾಗಿದೆ.
ಮತ್ತೊಂದೆಡೆ, 'ಲವ್ ಮೌಲಿ' ಚಿತ್ರದಲ್ಲಿ ನವದೀಪ್ ಮತ್ತು ಪಂಖುರಿ ಗಿದ್ವಾನಿ ಮುಖ್ಯಭೂಮಿಕೆಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ನಾಲ್ಕು ನಿಮಿಷಗಳ ಟ್ರೇಲರ್ ಅನ್ನು ಚಿತ್ರತಂಡ ರಿಲೀಸ್ ಮಾಡಿತ್ತು. ಟ್ರೇಲರ್ ವೀಕ್ಷಿಸಿದ ಪ್ರೇಕ್ಷಕರಿಗೆ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಅವನೀಂದ್ರ ನಿರ್ದೇಶನದ ಈ ಚಿತ್ರವು, ಈಗ ಮೇ ತಿಂಗಳಲ್ಲಿ ತೆರೆಗೆ ಬರಲಿದ್ದು, ಅಧಿಕೃತ ದಿನಾಂಕವನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ,(ಏಜೆನ್ಸೀಸ್).