ಮಾತನಾಡಲು ಆಗದೆ 'ರೂಮ್'ನಲ್ಲಿ ಚಡಪಡಿಸಿದ ಜನರು; ಆಗಿದ್ದೇನು ಗೊತ್ತಾ?

Clubhouse
Published on

ಬೆಂಗಳೂರು: ಸಾಮಾಜಿಕ ಜಾಲತಾಣ ಹಾಗೂ ಮೆಸೇಜಿಂಗ್ ಆ್ಯಪ್​ನ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿ ಇರುವ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸ್‌ಆ್ಯಪ್ ಕೆಲವು ದಿನಗಳ ಹಿಂದೆ ಸ್ಥಗಿತಗೊಂಡು ಜನರು ಪರದಾಡುವಂಥ ಸನ್ನಿವೇಶ ಉಂಟಾಗಿತ್ತು.

ಅದೇ ರೀತಿ ಇಂದು ಒಂದಷ್ಟು ಮಂದಿ ಮಾತನಾಡಲು ಆಗದೆ 'ರೂಮ್'ನಲ್ಲಿ ಚಡಪಡಿಸಿದ ವಿದ್ಯಮಾನವೂ ನಡೆದಿದೆ. ಅಷ್ಟಕ್ಕೂ ಇಷ್ಟಕ್ಕೆಲ್ಲ ಕಾರಣ ಕ್ಲಬ್‌ಹೌಸ್ ಕೈಕೊಟ್ಟಿದ್ದು. ಸಂವಾದಕ್ಕೆಂದೇ ಇರುವ ಈ ಆ್ಯಪ್ ಇದೇ ಮೊದಲ ಸಲ ದೊಡ್ಡದಾಗಿಯೇ ತಾಂತ್ರಿಕ ಅಡಚಣೆಯನ್ನು ಎದುರಿಸಿದೆ.

ಸುಮಾರು ಮೂರು ಗಂಟೆ ಕಾಲ ಅಡಚಣೆ ಉಂಟಾಗಿದೆ. ಪೂರ್ ಕನೆಕ್ಷನ್ ಅಂತ ತೋರಿಸುತ್ತಿದ್ದು, ಬಹಳಷ್ಟು ಮಂದಿ ತಮ್ಮ ಫೋನ್-ಇಂಟರ್‌ನೆಟ್‌ನಲ್ಲೇ ಏನೋ ಸಮಸ್ಯೆ ಇರಬೇಕು ಅಂತ ಸ್ವಿಚ್ ಆಫ್-ಆನ್ ಅಥವಾ ರಿಸ್ಟಾರ್ಟ್ ಮಾಡಿ ಪರೀಕ್ಷಿಸಿಕೊಂಡಿದ್ದೂ ಆಗಿದೆ ಎಂದು ಬಳಕೆದಾರರು ಹೇಳಿಕೊಂಡಿದ್ದಾರೆ.

ರಾತ್ರಿಯ ವೇಳೆಗೆ ಬಹುತೇಕ ಸರಿಯಾಗಿದ್ದು, ಆನಂತರ ಆ ಕುರಿತ ಚರ್ಚೆಗೆಂದೇ ಪ್ರತ್ಯೇಕ ರೂಮ್ ಕ್ರಿಯೇಟ್ ಮಾಡಿ ತಮಗಾದ ಸಮಸ್ಯೆಗಳನ್ನು ಹೇಳಿಕೊಂಡಿದ್ದಲ್ಲದೆ, ಕ್ಲಬ್‌ಹೌಸ್ ಇಲ್ಲ ಅಂತ ಕೆಲವರು ಪರದಾಡಿದ ಪ್ರಸಂಗಗಳ ಬಗ್ಗೆಯೂ ಮಾತನಾಡಿಕೊಂಡಿದ್ದಾರೆ. ಇನ್ನು ಸಮಸ್ಯೆ ಬಹುತೇಕ ನಿವಾರಣೆಗೊಂಡ ಬಳಿಕ ಕ್ಲಬ್​ಹೌಸ್​ ಅಧಿಕೃತ ಟ್ವಟರ್ ಖಾತೆಯಿಂದ ನಾವು ಮತ್ತೆ ವಾಪಸ್ ಬಂದಿದ್ದೇವೆ ಎಂದಷ್ಟೇ ಹೇಳಿಕೊಳ್ಳಲಾಗಿದ್ದು, ಆಗಿದ್ದೇನು ಎಂಬುದರ ಬಗ್ಗೆ ಅದು ಸದ್ಯ ಏನನ್ನೂ ಹೇಳಿಕೊಂಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net