More

    ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಯಿತು #KFCಕನ್ನಡಬೇಕು!

    ಬೆಂಗಳೂರು: ಇಲ್ಲಿನ ಕೆಎಫ್‌ಸಿ ಮಳಿಗೆಯಲ್ಲಿ ಕನ್ನಡ ಹಾಡು ಹಾಕದ ವಿಚಾರದಲ್ಲಿ ವಾಗ್ವಾದ ನಡೆದ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಕನ್ನಡ ರಾಜ್ಯೋತ್ಸವದ ಮುನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ‘ಕೂ’ನಲ್ಲಿ #KFCಕನ್ನಡಬೇಕು ಎಂದು ಜನರು ಆಗ್ರಹಿಸಿದ್ದಾರೆ.

    ‘ಬೆಂಗಳೂರಿನ ಕೆಎಫ್‌ಸಿ ಮಳಿಗೆಯಲ್ಲಿ ಮಹಿಳೆಯೊಬ್ಬರು ಕನ್ನಡ ಹಾಡು ಹಾಕದ ಕಾರಣದಿಂದಾಗಿ ಕೆಎಫ್‌ಸಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. #KFCಕನ್ನಡಬೇಕು ಎಂಬ ಹ್ಯಾಷ್​​ಟ್ಯಾಗ್ ಅಡಿ ಅನೇಕರು ಕರ್ನಾಟಕದಲ್ಲಿ ಕನ್ನಡ ಬಳಸಲಿ ಎನ್ನುವ ಧೋರಣೆ ವ್ಯಕ್ತಪಡಿಸಿದ್ದಾರೆ.

    ‘KFC ಅಮೆರಿಕ ಮೂಲದ ಕರ್ನಲ್ ಹರ್ಲ್ಯಾಂಡ್ ಸ್ಯಾಂಡರ್ಸ್ ಎಂಬ ವೃದ್ಧನಿಂದ ಆರಂಭವಾಗಿ ಜನಪ್ರಿಯವಾಗಿದೆ. ಕಂಪನಿ ಯಾವುದೇ ಇದ್ದರೂ ಆಯಾ ಪ್ರಾದೇಶಿಕ ಭಾಷೆಗೆ ಮಾನ್ಯತೆ ನೀಡಿ ಪ್ರಾದೇಶಿಕ ಭಾಷೆ ಅರಿತ ವ್ಯಕ್ತಿಗಳಿಗೆ ಉದ್ಯೋಗ ನೀಡಿದಲ್ಲಿ ಯಾವುದೇ ತೊಂದರೆಗಳು ಉಂಟಾಗದು. ಅಂತೆಯೇ ನಾವು ಕೂಡ ನಮ್ಮ ನಾಡಿನ ಭಾಷೆಯನ್ನು ಬಳಸುವ ಪದ್ಧತಿಯನ್ನು ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆ ಗೊತ್ತಿದ್ದರೂ ನಟನೆ ಮಾಡುವ ಜನ ತಮ್ಮ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು’ ಎಂದು ಸವಿತಾ ಎನ್ನುವವರು ಕೂ ಮಾಡಿದ್ದಾರೆ.

    ‘ಇಂತಹ ತಿಕ್ಕಾಟಗಳಿಗೆ ಕಾರಣ, ವಿಶೇಷವಾಗಿ ಬೆಂಗಳೂರಿನಲ್ಲಿರುವ ಕನ್ನಡಿಗರು ಕನ್ನಡಕ್ಕೆ ಬೆಲೆ ಕೊಡದಿರುವುದು ಮತ್ತು ಅನ್ಯ ಭಾಷೆಯ ಮೇಲೆ ಮೋಹ ತೋರುವುದು! ಬೆಂಗಳೂರಿನ KFC, ಬರ್ಗರ್ ಕಿಂಗ್ ಮತ್ತು ಮ್ಯಾಕ್ ಡೊನಾಲ್ಡ್ ಮಳಿಗೆಗಳಲ್ಲಿ ಶೇ.65ಕ್ಕೂ ಅಧಿಕ ಗ್ರಾಹಕರು ಅನ್ಯಭಾಷಿಕರು!! ಸರ್ಕಾರ ಕೆಲವು ಶಿಸ್ತಿನ ನಿಯಮ ತರದ ಹೊರತು ಏನೂ ಅಲ್ಲಾಡುವುದಿಲ್ಲ!’ ಎಂದು ಮಂಜುನಾಥ್ ಎನ್ನುವರು ಬರೆದುಕೊಂಡಿದ್ದಾರೆ.

    ‘ತಮಿಳನಾಡು ಥರ ನಾವು ಕೂಡ ಕನ್ನಡ ಮಾತನಾಡು, ಇಲ್ಲದಿದ್ದರೆ ಜಾಗ ಖಾಲಿ ಮಾಡು. ಸ್ವಲ್ಪ ದಿನ ಖರೀದಿ kfc ban ಮಾಡಿ ನೋಡಿ ಒಂದೇ ವಾರದಲ್ಲಿ ಕನ್ನಡ ಕನ್ನಡ ಅಂತ ಬರ್ತಾನೆ. ನಾವು ಒಗ್ಗಟ್ಟಾಗೋಣ’ ಎಂದು ಬನಶಂಕರ್ ಅಭಿಪ್ರಾಯ ಪಟ್ಟಿದ್ದಾರೆ.

    ‘ತಿಳಿಸಿ ಹೇಳುವುದರಲ್ಲಿ ಅರ್ಥವಿಲ್ಲ, ತಿಳಿಸಿ ಹೇಳುವ ಎಲ್ಲಾ ಆಂದೋಲನ, ಪ್ರತಿಭಟನೆ, ಅಭಿಯಾನ ಇನ್ನೊಂದು ಮತ್ತೊಂದು ಮಾಡಾಯ್ತು.. ವ್ಯವಹಾರಿಕ ಭಾಷೆಯಾಗಿ ಕನ್ನಡ ಬಳಸಿ ಅಂತ ಈ ಮರಾಠಿಗರ ಥರ ಕತ್ತುಪಟ್ಟಿ ಹಿಡ್ದು ಹೇಳೋದ್ ಒಂದ್ ಬಾಕಿ ಇದೆ, ಅದೊಂದ್ ಆಗ್ಲಿ’ ಎಂದು ವೀರಭದ್ರ ಎನ್ನುವವರು ಹೇಳಿದ್ದಾರೆ.

    ‘ಆಯಾ ಪ್ರದೇಶದ ರಾಜ್ಯದ ಭಾಷೆಯಲ್ಲಿ ವ್ಯವಹರಿಸೋದು ವ್ಯವಹಾರದ ಲಕ್ಷಣ.. ಕನಿಷ್ಠ ಆ ನೈತಿಕತೆಯಾದ್ರು ಇರ್ಲಿ’ ಎಂದು ಸುನೀಲ್ ಎನ್ನುವವರು ಕೂ ಮಾಡಿದ್ದಾರೆ.

    KFC ಸ್ಪಷ್ಟೀಕರಣ: ಕೆಎಫ್‌ಸಿ ಎಲ್ಲಾ ಸಂಸ್ಕೃತಿ ಮತ್ತು ಭಾಷೆಗಳ ಕುರಿತು ಅತ್ಯುನ್ನತ ಗೌರವ ಹೊಂದಿದೆ ಎಂದು ಪುನರುಚ್ಚರಿಸಲು ಬಯಸುತ್ತದೆ. ನಾವು ನೆಲದ ಕಾನೂನನ್ನು ಗೌರವಿಸಿ, ದೇಶದ ಎಲ್ಲಾ ರೆಸ್ಟೋರೆಂಟ್‌ಗಳಲ್ಲಿ ಸ್ಥಳೀಯ ಕಾನೂನು ಮತ್ತು ನಿಯಮಗಳನ್ನು ಪಾಲಿಸಿ ಕಾರ್ಯನಿರ್ವಹಿಸುತ್ತೇವೆ ಎಂದು ಕೆಎಫ್‌ಸಿ ವಕ್ತಾರರು ತಿಳಿಸಿದ್ದಾರೆ.

    ಭಾರತದಲ್ಲಿ ನಮ್ಮ ಪಯಣ ಆರಂಭಗೊಂಡಿದ್ದು, ಬೆಂಗಳೂರಿನ ಮೊದಲ ಕೆಎಫ್‌ಸಿ ರೆಸ್ಟೋರೆಂಟ್‌ನೊಂದಿಗೆ. ನಮ್ಮ ಬ್ರ್ಯಾಂಡ್ ಬೆಂಗಳೂರಿನೊಂದಿಗೆ 25 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದೆ. ವರ್ಷಗಳಿಂದ, ನಾವು ರಾಜ್ಯದಲ್ಲಿ 75 ರೆಸ್ಟೋರೆಂಟ್‌ಗಳು ಮತ್ತು 1300 ಸದಸ್ಯರೊಂದಿಗೆ ಅವಿಸ್ಮರಣೀಯ ಸಂಬಂಧ ಹೊಂದಿದ್ದೇವೆ. ಕರ್ನಾಟಕ ಬ್ರ್ಯಾಂಡ್‌ನ ಅತಿ ಮುಖ್ಯ ಮಾರುಕಟ್ಟೆಯಾಗಿ ಮುಂದುವರಿದಿದ್ದು, ಮುಂದಿನ ಕೆಲ ವರ್ಷಗಳಲ್ಲಿ ರಾಜ್ಯದಲ್ಲಿ ನಮ್ಮ ಹೆಜ್ಜೆಯನ್ನು ವಿಸ್ತರಿಸಲು ಯೋಜನೆ ಹಮ್ಮಿಕೊಂಡಿದ್ದೇವೆ. ತಡೆರಹಿತ ಗ್ರಾಹಕರ ಅನುಭವ ಒದಗಿಸುವ ಗುರಿಯೊಂದಿಗೆ ನಾವು ರಾಜ್ಯದ ಗ್ರಾಹಕರಿಗೆ ಆಂಗ್ಲ ಹಾಗೂ ಕನ್ನಡ ಸೇವೆಗಳನ್ನು ವಿಸ್ತರಿಸುತ್ತಿದ್ದೇವೆ, ಅದು ನಮ್ಮ ರೆಸ್ಟೋರೆಂಟ್, ಅಥವಾ ಸಾಮಾಜಿಕ, ಡಿಜಿಟಲ್ ಮತ್ತು ಮುದ್ರಣ ಮಾಧ್ಯಮಗಳ ಜಾಹೀರಾತುಗಳಿರಬಹುದು.
    ಹೆಚ್ಚುವರಿಯಾಗಿ ಕೆಎಫ್‌ಸಿ ಇಂಡಿಯಾದ ಸಹಯೋಗ ಮತ್ತು ಕ್ಷಮತಾ ಕಾರ್ಯಕ್ರಮಗಳ ಮೂಲಕ ನಾವು ಕಾರ್ಯನಿರ್ವಹಿಸುವ ಸಮುದಾಯಕ್ಕೆ ಮರಳಿ ನೆರವು ನೀಡುವ ಗುರಿ ಹೊಂದಿದ್ದೇವೆ: ಅದು ಸ್ಥಳೀಯ ರೆಸ್ಟೋರೆಂಟ್‌ಗಳನ್ನು ಬೆಂಬಲಿಸುವುದು, ಮಹಿಳೆಯರ ಸಬಲೀಕರಣ ಅಥವಾ ವಿಶೇಷ ಚೇತನರಿಗೆ ಉದ್ಯೋಗ ನೀಡುವುದನ್ನು ಕೂಡ ಒಳಗೊಂಡಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts