

ನವದೆಹಲಿ: ಕೇರಳದಲ್ಲಿ ಇತ್ತೀಚೆಗೆ ಎಐ (ಕೃತಕ ಬುದ್ಧಿಮತ್ತೆ) ಶಿಕ್ಷಕಿಯನ್ನು ನಿಯೋಜನೆ ಮಾಡಿರುವುದು ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು. ಈಗ ಅಮೆರಿಕದ ಕಂಪನಿಯೊಂದು ಎಐ ಸಾಫ್ಟ್ವೇರ್ ಇಂಜಿನಿಯರ್ ಒಂದನ್ನು ನಿರ್ಮಾಣ ಮಾಡಿದೆ. ಇದಕ್ಕೆ ಡೆವಿನ್ ಎಂದು ನಾಮಕರಣ ಮಾಡಲಾಗಿದೆ. ಇದು ಕೋಡ್ ಬರೆಯುವುದು, ವೆಬ್ಸೈಟ್ಗಳನ್ನು ರಚಿಸುವುದು ಸೇರಿ ಹಲವು ಕೆಲಸಗಳನ್ನು ನಿರ್ವಹಿಸಲಿದೆ. ಒಂದೇ ಪ್ರಾಂಪ್ಟ್ ಮೂಲಕ ಹಲವು ಕಾರ್ಯಗಳಿಗೆ ಈ ಎಐ ಇಂಜಿನಿಯರ್ನನ್ನು ನಿಯೋಜನೆ ಮಾಡಬಹುದಾಗಿದೆ.
ಟೆಕ್ ಕಂಪನಿ ಕಾಗ್ನಿಷನ್ ಈ ಎಐ ಸಾಫ್ಟ್ವೇರ್ ಇಂಜಿನಿಯರ್ ಅನ್ನು ನಿರ್ಮಾಣ ಮಾಡಿದೆ. ‘ನೀವು ಕೇಳುವ ಎಲ್ಲ ಕೆಲಸವನ್ನು ಇದು ಬಹುಮಟ್ಟಿಗೆ ಇದು ಮಾಡಬಹುದು. ಎಐ ಉಪಕರಣದ ಮೂಲಕ ಮಾನವ ಇಂಜಿನಿಯರ್ಗಳನ್ನು ಬದಲಿಸುವ ಉದ್ದೇಶ ಇಲ್ಲ. ಇದು ಅವರಿಗೆ ಸಹಾಯ ಮಾಡಲಿದೆ ಅಷ್ಟೇ’ ಎಂದು ಕಂಪನಿ ಹೇಳಿದೆ. ಪ್ರಮುಖ ಎಐ ಕಂಪನಿಗಳ ಪ್ರಾಯೋಗಿಕ ಇಂಜಿನಿಯರಿಂಗ್ ಸಂದರ್ಶನಗಳನ್ನು ಇದು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ತನ್ನದೇ ಆದ ಶೆಲ್, ಕೋಡ್ ಎಡಿಟರ್ ಮತ್ತು ವೆಬ್ ಬ್ರೌಸರ್ನ ಬಳಕೆಯ ಮೂಲಕ ಇದು ಇಂಜಿನಿಯರಿಂಗ್ ಕಾರ್ಯಗಳನ್ನು ಮಾಡುತ್ತದೆ ಎಂದು ಕಾಗ್ನಿಷನ್ ಕಂಪನಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ತ್ವರಿತ ನಿರ್ಧಾರ: ಮುಂದಿನ ನಿರ್ಧಾರಗಳನ್ನು ಯೋಚಿಸುವ, ಸಂಕೀರ್ಣ ಕಾರ್ಯಗಳನ್ನು ಮಾಡುವ ಸಾಮರ್ಥ್ಯವನ್ನು ಡೆವಿನ್ ಹೊಂದಿದೆ. ಇದು ಸಾವಿರಾರು ನಿರ್ಧಾರಗಳನ್ನು ತ್ವರಿತವಾಗಿ ತೆಗೆದುಕೊಳ್ಳಲಿದೆ. ಪ್ರಾಥಮಿಕ ಹಂತದಲ್ಲಿ ಅದರ ತಪ್ಪುಗಳನ್ನು ತಿದ್ದಲಾಗುವುದು. ಕಾಲಾನಂತರದಲ್ಲಿ ಇದು ಮತ್ತಷ್ಟು ಉತ್ತಮಗೊಳ್ಳಲಿದೆ. ಮಾನವ ಇಂಜಿನಿಯರ್ಗೆ ಸಮಾನವಾದ ಎಲ್ಲ ಸಾಧನಗಳನ್ನು ಇದು ಹೊಂದಿದೆ. ಸಾಫ್ಟ್ವೇರ್ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಕ್ರಿಯೆಯಲ್ಲಿ ಉತ್ತಮವಾಗಿ ಪ್ರದರ್ಶನ ತೋರಿದೆ. ಆದರೆ ಡೆವಿನ್ ಸ್ವಂತವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಮಾನವ ಇಂಜಿನಿಯರ್ಗಳ ನಿಯಂತ್ರಣ ಅಗತ್ಯ. ನೈಜ-ಸಮಯದಲ್ಲಿ ನವೀಕರಣ, ಪ್ರತಿಕ್ರಿಯೆಯನ್ನು ಸ್ವೀಕರಿಸಲು, ವಿನ್ಯಾಸದ ಆಯ್ಕೆ ಇನ್ನಿತರ ಕ್ರಿಯೆಗಳಿಗೆ ಇದನ್ನು ನಿಯೋಜನೆ ಮಾಡಬಹುದು. ಆದ್ದರಿಂದ ಮನುಷ್ಯರ ಬದಲು ಕೇವಲ ಎಐ ಇಂಜಿನಿಯರ್ ಬಳಕೆ ಬಹುತೇಕ ಅಸಾಧ್ಯವಾಗಿದೆ ಎಂದು ಕಂಪನಿ ಹೇಳಿದೆ.