ಪಂತ್ ಆಗಮನದ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್​ಗೆ ಶಾಕ್​; ಟೂರ್ನಿಯಿಂದ ಹಿಂದೆ ಸರಿದ ಪ್ರಮುಖ ಆಟಗಾರ

Delhi Capitals
Published on

ನವದೆಹಲಿ: 17ನೇ ಆವೃತ್ತಿ ಐಪಿಎಲ್​ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ಬಿಸಿಸಿಐ ಹಾಗೂ ತಂಡಗಳು ಟೂರ್ನಿಗೆ ಸಿದ್ದತೆಗಳನ್ನು ಆರಂಭಿಸಿವೆ. ನೂತನ ನಾಯಕನನ್ನು ಘೋಷಿಸಿದ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಇದೀಗ ಶಾಕ್​ ಒಂದು ಎದುರಾಗಿದ್ದು, ಪ್ರಮುಖ ಆಟಗಾರನೋರ್ವ ಟೂರ್ನಿಯಲ್ಲಿ ಭಾಗಿಯಾಗುತ್ತಿಲ್ಲ ಎಂದು ತಿಳಿದು ಬಂದಿದೆ.

ಕಳೆದ ವರ್ಷ ನಡೆದ ಆಟಗಾರರ ಹರಾಜು ಪ್ರಕ್ರಿಯೆ ವೇಳೆ ಡೆಲ್ಲಿ ಕ್ಯಾಪಿಟಲ್ಸ್​ ಪಾಲಾಗಿದ್ದ ಹ್ಯಾರಿ ಬ್ರೂಕ್​ ಈ ಬಾರಿಯ ಐಪಿಎಲ್​ನಲ್ಲಿ ಭಾಗಿಯಾಗುತ್ತಿಲ್ಲ ಎಂದು ತಿಳಿದು ಬಂದಿದೆ. ವೈಯಕ್ತಿಕ ಕಾರಣಗಳನ್ನು ನೀಡಿ ಹ್ಯಾರಿ ಬ್ರೂಕ್​ ತಮ್ಮ ಹೆಸರನ್ನು ಹಿಂಪಡೆದಿದ್ದಾರೆ ಎಂದು ವರದಿಯಾಗಿದೆ.

Harry Brook

ಇತ್ತ ಟೂರ್ನಿಯಿಂದ ಹ್ಯಾರಿ ಬ್ರೂಕ್​ ಹಿಂದೆ ಸರಿದ ಬೆನ್ನಲ್ಲೇ ಕಾರ್ಯಪ್ರವೃತ್ತರಾಗಿರುವ ಡೆಲ್ಲಿ ಕ್ಯಾಪಿಟಲ್ಸ್​ ಮ್ಯಾನೇಜ್​ಮೆಂಟ್​ ಅವರ ಸ್ಥಾನವನ್ನು ತುಂಬುವಂತಹ ಸಮರ್ಥ ಆಟಗಾರನ ಹುಡುಕಾಟದಲ್ಲಿ ತೊಡಗಿದೆ. ಸುದ್ದಿ ಮೂಲಗಳ ಪ್ರಕಾರ ಹ್ಯಾರಿ ಬ್ರೂಕ್​ ಬದಲಾಗಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಅವರನ್ನು ತಂಡಕ್ಕೆ ಬದಲಿ ಆಟಗಾರನನ್ನಾಗಿ ನೇಮಿಸುವ ಸಾಧ್ಯತೆ ಹೆಚ್ಚಿದೆ.

17ನೇ ಆವೃತ್ತಿಯ ಐಪಿಎಲ್ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಲೀಗ್‌ನ ಮೊದಲ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಹಾಲಿ ಚಾಂಪಿಯನ್ ಚೆನ್ನೈ ಹಾಗೂ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಮುಖಾಮುಖಿಯಾಗಲಿದ್ದು, ಕ್ರೀಡಾಭಿಮಾನಿಗಳು ಈ ಪಂದ್ಯ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net