ರಾಮಾಯಣದ ಅಧ್ಯಯನವೇ ರಾಮನ ಪ್ರತಿಷ್ಠೆ

lord sriram
Published on
krishnaraja kuthpadi
ಕೃಷ್ಣರಾಜ ಕುತ್ಪಾಡಿ
ರಾಮನ ಗುಣಗಳ ಮೈಗೂಡಿಸಿಕೊಳ್ಳುವುದೇ ರಾಮನನ್ನು ಪ್ರತಿಷ್ಠೆಗೊಳಿಸಿದಂತೆ. ಗುಣಗಳ ಪಟ್ಟಿಯನ್ನು ಮುಂದಿಟ್ಟರೆ ರೂಢಿಸಿಕೊಳ್ಳಲು ಸಾಧ್ಯವೇ? ನಡೆದ ಇತಿಹಾಸವನ್ನು ನೋಡಿ ಅರ್ಥೈಸಿಕೊಳ್ಳಬೇಕು.

ಧರ್ವರ್ಥಕಾಮೋಕ್ಷಾಣಾಂ ಉಪದೇಶಸಮನ್ವಿತಂ|
ಪೂರ್ವವೃತ್ತಂ ಕಥಾಯುಕ್ತಂ ಇತಿಹಾಸಂ ಪ್ರಚಕ್ಷತೇ||

ಚತುರ್ವಿಧ ಪುರುಷಾರ್ಥಗಳನ್ನು ಹಿತವಾಗಿ, ತಿಳಿ ಹೇಳುವುದು. ನಡೆದ ಘಟನೆಗಳೊಂದಿಗೆ ವಿಷಯವನ್ನು ದಾಖಲಿಸುವುದನ್ನು ಇತಿಹಾಸ ಎನ್ನುವರು. ನಡೆದಿತ್ತು, ನಡೆಯುತ್ತಿದೆ, ನಡೆಯಲಿದೆ ಎಂಬುದೇ ಇತಿಹಾಸ. ಹೊರತು ‘ಏಜಿಠಠಿಟ್ಟಢ’ ಮಾತ್ರ ಅಲ್ಲ. ನದಿ, ಬೆಟ್ಟ, ಕಾಡು, ನಾಡಿನ ಜನ, ಸಸ್ಯ-ಪ್ರಾಣಿಗಳ ಸ್ವಭಾವಗಳೆಲ್ಲ ಇತಿಹಾಸಗಳಲ್ಲಿ ಬಹಳ ಮಹತ್ವವನ್ನು ಪಡೆಯುತ್ತದೆ.

ಅಧ್ಯಯನದ ಲಾಭವೇನು?
ಧರ್ವ್ಯುಂ ಯಶಸ್ಯಮಾಯುಷ್ಯಂ|

ರಾಜ್ಞಾಂ ಚ ವಿಜಯಾವಹಂ ಆದಿಕಾವ್ಯಮಿದಂ ಪುರಾ ವಾಲ್ಮೀಕಿನಾ ಕೃತಂ||

ಜಗದ ಮೊದಲ ಕಾವ್ಯವೆನಿಸಿದ ರಾಮಾಯಣ ವಾಲ್ಮೀಕಿಗಳ ರಚನೆ, ಋಷಿಗಳಿಗೆ ಸಮ್ಮತವಾದದ್ದು. ಧರ್ಮದ ಹೊನಲನ್ನು ಹೊತ್ತಿದೆ. ಹೆಸರನ್ನು ತಂದು ಕೊಡುತ್ತದೆ. ಬಾಳ್ವಿಕೆಯನ್ನು ಹೆಚ್ಚಿಸುತ್ತದೆ. ಆಳುವವರಿಗೆ ಗೆಲುವು ತರುವುದು.

ಆಯುಷ್ಯಮಾರೋಗ್ಯಕರಂ ಯಶಸ್ಯಂ ಸೌಭ್ರಾತೃಕಂ ಬುದ್ಧಿಕರಂ ಶುಭಂ ಚ|
ಶೋತವ್ಯಮೇತನ್ನಿಯಮೇನ ಸಿದ್ಧಿರಾಖ್ಯಾನಮೋಜಸ್ಕರಂಮೃದ್ಧಿಕಾಮೈಃ||

ಬಾಳುವೆ ಬೇಳುವೆಯಾಗುತ್ತದೆ. ನೀರೋಗಿ ಆಗುತ್ತಾನೆ. ಹೆಸರು ಎಲ್ಲೆಡೆ ಹಬ್ಬುತ್ತದೆ. ಅಧ್ಯಯನದ ವರ್ಚಸ್ಸು ಹೆಚ್ಚುತ್ತದೆ. ವಿವೇಚನೆಯ ಶಕ್ತಿ ಬೆಳೆಯುತ್ತದೆ. ಎಲ್ಲದರಲ್ಲೂ ಧನಾತ್ಮಕತೆಯನ್ನು ಕಾಣುವಂತಾಗುತ್ತದೆ. ಕೌಟುಂಬಿಕ ಬದುಕು ಬಲಗೊಳ್ಳುತ್ತದೆ. ತನ್ನ ಸುತ್ತಲಿನ ಎಲ್ಲವೂ ಅರ್ಥವಾಗತೊಡಗುತ್ತದೆ. ಹೀಗೆ ಎಲ್ಲದರಲ್ಲೂ ಬೆಳವಣಿಗೆ ಕಾರಣ ಬಯಸುವವನು ರಾಮನ ಬದುಕಿನ ಕಥಾಹಂದರವನ್ನು ಬಿಡದೆ ಓದಬೇಕು. ಮತ್ತೆಮತ್ತೆ ಕೇಳಬೇಕು.

ರಾಮಾಯಣಮಿದಂ ಕೃತ್ಸ್ನಂ ಶೃಣ್ವತಃ ಪಠತಃ ಸದಾ|
ಪ್ರಿಯತೇ ಸತತಂ ರಾಮಃ ಸ ಹಿ ವಿಷ್ಣುಃ ಸನಾತನಃ||

ಈ ರಾಮಾಯಣವನ್ನು ಯಾರು ಓದಿ, ಕೇಳಿ ಅದರ ಗುಂಗಿನಲ್ಲಿ ಮುಳುಗುತ್ತಾನೋ ಅವನಿಗೆ ರಾಮನೇ ಒಲಿಯುತ್ತಾನೆ. (ಈಗೆಂತು ರಾಮನೊಲಿದಾನು? ಕಾಲ್ಪನಿಕನಾದರೆ ಅಥವಾ ಒಬ್ಬ ಸಾಮಾನ್ಯ ಮನುಷ್ಯನಾದರೆ ಎಂಬ ಪ್ರಶ್ನೆಯನ್ನು ಈ ಮಾತು ಪರಿಹರಿಸುತ್ತದೆ.) ಅವನೇ ತಾನೇ ಸರ್ವದಾ ಸರ್ವದಲ್ಲೂ ತುಂಬಿಕೊಂಡಿರುವ ಸಾಕ್ಷಾತ್ ನಾರಾಯಣನು.

ವೇದವೇದ್ಯೇ ಪರೇ ಪುಂಸಿ ಜಾತೇ ದಶರಥಾತ್ಮಜೇ|
ವೇದಃ ಪ್ರಾಚೇತಸಾದಾಸೀತ್ ಸಾಕ್ಷಾತ್ ರಾಮಾಯಣಾತ್ಮನಾ||

ವೇದ ಪ್ರತಿಪಾದ್ಯನಾದ ಪರಮ ಪುರುಷ ನಾರಾಯಣನು ದಶರಥನ ಮಗನಾಗಿ ಹುಟ್ಟಿದನು. ಅದು ಹೌದು ತಾನೆ! ರಾಮನ ನಡೆಯನ್ನು ಪರಿಚಯಿಸುವ ವಾಲ್ಮೀಕಿ ದೃಷ್ಟವಾದ ರಾಮಾಯಣ ಸಾಕ್ಷಾತ್ ವೇದವೇ ಆಗಿದೆ.

ರಾಮಾಯಣದ ಅಧ್ಯಯನ ವೇದದ ಅಧ್ಯಯನವೇ ಸರಿ. ಜ್ಞಾನದ ಖನಿ ಎನಿಸುವ ವೇದ ಸಿಪ್ಪೆ ಸುಲಿದ ಬಾಳೆಯ ಹಣ್ಣಿನಂತೆ ರಾಮಾಯಣವಾಗಿ ನಮ್ಮ ಮುಂದಿದೆ. ಇದು ವಾಲ್ಮೀಕಿಗಳ ಶ್ರೇಷ್ಠ ಕೊಡುಗೆ.

ಕೃತಾನಿ ಗುರುಣಾಸ್ಮಾಕಂ ಋಷಿಣಾ ಚರಿತಂ ತವ ಪ್ರತಿಷ್ಠಾ ಜೀವಿತಂ ಯಾವತ್ ತಾವತ್ ಸರ್ವಸ್ಯ ವರ್ತತೇ||

ಲವಕುಶರು ರಾಮನ ಗುಣಗಳನ್ನು ಹಾಡುತ್ತ, ಅವನ ಬಗ್ಗೆ ತಿಳಿದೇ ರಾಮನನ್ನು ಎದುರುಗೊಳ್ಳುತ್ತಾರೆ ರಾಮನಾರು? ಎನ್ನುವ ಸ್ಪಷ್ಟ ಕಲ್ಪನೆ ಇದ್ದೆ ರಾಮಾಯಣವನ್ನು ಎಲ್ಲರ ಮುಂದೆ ಹಾಡುತ್ತಾರೆ. ರಾಮಾಯಣದ ಹಾಡುಗಳನ್ನು ಕೇಳುತ್ತಾಕೇಳುತ್ತಾ ಜನರ ಮನಸ್ಸು ರೂಪಾಂತರಗೊಳ್ಳುತ್ತದೆ. ಸೀತೆಯ ಬಗೆಗೆ ತಾವು ಮಾಡಿದ ಅಪಲಾಪದ ಬಗ್ಗೆ ಪಶ್ಚಾತಾಪ ಮೂಡಿ ಜನ ಪಕ್ವ ಪ್ರಜೆಗಳಾಗುವರು. ರಾಮರಾಜ್ಯ ಪ್ರತಿಷ್ಠೆಯಾಗುತ್ತದೆ. ರಾಮನು ಎಲ್ಲರಲ್ಲಿ ಪ್ರೀತಿನಾಗುತ್ತಾನೆ.

(ಲೇಖಕರು ಸಂಸ್ಕೃತ ಉಪನ್ಯಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net