ಕೃಷಿ ಕ್ರಾಂತಿಗೆ ನೂತನ ನೀತಿ; ಡಿಜಿಟಲ್ ಕೃಷಿಗೆ ಆದ್ಯತೆ | ಗ್ರಾಮ ಪಂಚಾಯತ್​​ಗೊಂದು ಗ್ರಾಮೀಣ ಉತ್ಪಾದಕ ಸಂಘ

7457
Published on

ರುದ್ರಣ್ಣ ಹರ್ತಿಕೋಟೆ
ಬೆಳಗಾವಿ: ರಾಜ್ಯದ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಮೂಲಕ ರೈತರ ಬದುಕಿನಲ್ಲಿ ನವ ಚೈತನ್ಯ ಮೂಡಿಸುವ ಹೊಸ ಕೃಷಿ ನೀತಿಯನ್ನು ಸರ್ಕಾರ ಬಹುತೇಕ ಅಂತಿಮಗೊಳಿಸಿದೆ. ಮುಂದಿನ ವರ್ಷದಿಂದ ಈ ಹೊಸನೀತಿ ಜಾರಿಗೆ ತರಲಿದೆ.

ರಾಜ್ಯದಲ್ಲಿನ ಕೃಷಿ ನೀತಿಯ ಅವಧಿ ಮುಕ್ತಾಯವಾಗಿದೆ. ಇಂದಿನ ಅಗತ್ಯಗಳು, ಬದಲಾಗುತ್ತಿರುವ ಹವಾಮಾನ, ಹೊಸ ಹೊಸ ಅವಕಾಶಗಳಿಗೆ ಕೃಷಿ ಸೇರಿಸುವುದು, ತಂತ್ರಜ್ಞಾನವನ್ನು ಎಲ್ಲ ವಲಯದಲ್ಲಿ ಬಳಕೆ ಹೀಗೆ ವಿವಿಧ ಅಂಶಗಳನ್ನು ಒಳಗೊಂಡಂತೆ ಕೃಷಿ ನೀತಿ ಸಿದ್ಧಪಡಿಸಲಾಗಿದೆ. ತಜ್ಞರ ಸಮಿತಿ ಈಗ ಕೃಷಿ ನೀತಿಯನ್ನು ಸಿದ್ಧಪಡಿಸಿದೆ. ಇನ್ನೊಂದು ಸಭೆಯ ನಂತರ ಸರ್ಕಾರಕ್ಕೆ ಸಲ್ಲಿಸಲಿದೆ. ಸರ್ಕಾರ ಸಚಿವ ಸಂಪುಟ ಸಭೆಯ ಮುಂದಿಟ್ಟು ನಂತರ ಅದನ್ನು ಜಾರಿಗೆ ಕೊಡಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ.

ನೀತಿಯ ಉದ್ದೇಶವೇನು?: ರೈತರು ಕೃಷಿಯ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿರುವುದನ್ನು ತಪ್ಪಿಸುವುದಕ್ಕಾಗಿ ಒಳಸುರಿಯ ನಿರ್ವಹಣೆಗೆ ಆದ್ಯತೆ ನೀಡುವ ಮೂಲಕ ಉತ್ಪಾದನೆ, ಉತ್ಪಾದಕತೆ, ನಷ್ಟ ಕಡಿಮೆ, ನೀರಿನ ಸಮರ್ಪಕ ಬಳಕೆ, ಮಣ್ಣಿನ ಆರೋಗ್ಯ ಕಾಪಾಡುವುದು, ಡಿಜಿಟಲ್ ಕೃಷಿ, ಕೃಷಿ ಭೂಮಿಯ ಸರಿಯಾದ ನಿರ್ವಹಣೆ, ಉತ್ಪಾದನೆಗೆ ಉತ್ತಮ ಬೆಳೆ ಸಿಗುವಂತೆ ನೋಡಿಕೊಳ್ಳುವ ಕಡೆ ಆದ್ಯತೆ ನೀಡುವುದನ್ನು ನೂತನ ನೀತಿಯಲ್ಲಿ ಖಚಿತಪಡಿಸಲಾಗುತ್ತಿದೆ. ಕೃಷಿಗೆ ಸಂಬಂಧಿಸಿದ ಎಲ್ಲ ಇಲಾಖೆಗಳ ನಡುವೆ ಸಮನ್ವಯ ತರುವುದು. ಕೃಷಿಕರ ಆದಾಯ ಹೆಚ್ಚಿಸುವಲ್ಲಿ ಸವಾಲುಗಳನ್ನು ನಿವಾರಿಸುವುದು ಹೊಸ ನೀತಿ ತರುತ್ತಿರುವ ಉದ್ದೇಶಗಳಾಗಿವೆ ಎನ್ನಲಾಗಿದೆ.

ಕೃಷಿಕರ ಆದಾಯ ಹೆಚ್ಚಳ ಆಗಬೇಕು. ಅದಕ್ಕೆ ತಕ್ಕಂತೆ ಮೂಲಸೌಕರ್ಯವೂ ಅಭಿವೃದ್ಧಿ ಮಾಡಬೇಕಾಗಿದೆ. ಅದಕ್ಕಾಗಿ ಹೊಸ ನೀತಿ ರಚಿಸಲಾಗುತ್ತಿದ್ದು, ಆದಷ್ಟು ಬೇಗ ಜಾರಿಗೆ ಬರಲಿದೆ.

| ಬಿ.ಸಿ. ಪಾಟೀಲ್ ಕೃಷಿ ಸಚಿವ

ಪೂರಕ ವಲಯಗಳಿಗೆ ಆದ್ಯತೆ

ಕೃಷಿ ಕ್ಷೇತ್ರದಲ್ಲಿ ಬದಲಾವಣೆಗಳಾಗಿ ರೈತರಿಗೆ ಲಾಭ ಆಗಬೇಕಾದರೆ ಪೂರಕ ಕ್ಷೇತ್ರಗಳಾದ ಹೈನುಗಾರಿಕೆ, ಕುಕ್ಕಟ, ರೇಷ್ಮೆ, ನೀರಾವರಿಯಲ್ಲಿ ಅಭಿವೃದ್ಧಿ ಸಾಧಿಸಬೇಕಾಗುತ್ತದೆ. ಈ ಬಾರಿಯ ನೀತಿಯಲ್ಲಿ ಈ ಅಂಶಕ್ಕೆ ಆದ್ಯತೆ ನೀಡಲಾಗಿದೆ. ಆ ಮೂಲಕ ರೈತರ ಆದಾಯ ದ್ವಿಗುಣಕ್ಕೆ ಒತ್ತು ನೀಡಲಾಗುತ್ತಿದೆ.

ಡಿಜಿಟಲ್ ಅಗ್ರಿಕಲ್ಚರ್ ಪರಿಕಲ್ಪನೆ

ಮಾಹಿತಿ ತಂತ್ರಜ್ಞಾನದಲ್ಲಿ ರಾಜ್ಯ ಸಾಕಷ್ಟು ಮುಂದುವರೆದಿದೆ. ಅದನ್ನು ಕೃಷಿ ವಲಯದಲ್ಲಿಯೂ ಬಳಸಿಕೊಳ್ಳುವ ಮೂಲಕ ಡಿಜಿಟಲ್ ಅಗ್ರಿಕಲ್ಚರ್ ಎಂಬ ಹೊಸ ಅಂಶವೂ ನೀತಿಯಲ್ಲಿದೆ. ಹವಾಮಾನ ಮಾಹಿತಿ, ಮಾರ್ಕೆಟ್ ಇಂಟೆಲಿಜೆನ್ಸ್, ವಿವಿಧ ಅಲರ್ಟ್​ಗಳನ್ನು ರೈತರಿಗೆ ಸೂಕ್ತಕಾಲಕ್ಕೆ ರವಾನೆ ಮಾಡುವುದು ಡಿಜಿಟಲ್ ಅಗ್ರಿಕಲ್ಚರ್​ನ ಪ್ರಮುಖ ಉದ್ದೇಶವಾಗಿದೆ.

ವಿಪಿಒಗಳ ಸ್ಥಾಪನೆ

ರಾಜ್ಯದಲ್ಲಿ ಈಗಾಗಲೆ ರೈತ ಉತ್ಪಾದಕ ಸಂಘಗಳನ್ನು ತೆರೆಯಲಾಗಿದೆ. ಇದೀಗ ಅದರ ಮುಂದುವರೆದ ಭಾಗವಾಗಿ ಗ್ರಾಮೀಣ ಉತ್ಪಾದಕ ಸಂಘಗಳನ್ನು ತೆರೆಯುವ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ವಿಪಿಒಗಳನ್ನು ತೆರೆಯಬೇಕು. ಅಲ್ಲಿ ರೈತರನ್ನು ಒಗ್ಗೂಡಿಸಿ ಸ್ಥಳೀಯವಾಗಿಯೆ ಸಂಸ್ಕರಣೆ ಸೇರಿ ವಿವಿಧ ಅಂಶಗಳನ್ನು ತರಲಾಗುತ್ತದೆ. ಅಲ್ಲಿಂದ ಎಫ್​ಪಿಒಗಳಿಗೆ ಹಾಗೂ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಎಫ್​ಪಿಒಗಳ ವಿಕೇಂದ್ರೀಕರಣ ಇದರ ಉದ್ದೇಶವಾಗಿದೆ. 

ನಷ್ಟ ತಪ್ಪಿಸುವುದು

  • ಯಾವುದೇ ಬೆಳೆಯ ಕೋಯ್ಲೋತ್ತರ ನಷ್ಟ ಹೆಚ್ಚಾಗಿದೆ. ಅದನ್ನು ತಪ್ಪಿಸುವುದಕ್ಕೆ ಸಂಸ್ಕರಣೆ ಅವಲಂಬನೆ ಹೆಚ್ಚಿಸಲಾಗುತ್ತದೆ. ತೋಟಗಾರಿಕೆ ಬೆಳೆ ಗಳಾದ ಹಣ್ಣುಗಳು ಶೇ. 20- 30 ಕೋಯತ್ಲೋತ್ತರ ನಷ್ಟವಾಗುತ್ತದೆ. ಕೃಷಿ ಉತ್ಪನ್ನಗಳು ಶೇ. 8-10 ನಷ್ಟ ಆಗುತ್ತಿದೆ. ಆದರೆ ಹೈನೋದ್ಯಮದಲ್ಲಿ ಶೇ.1 ನಷ್ಟವಿದೆ. ಆದ್ದರಿಂದ ಸಂಸ್ಕರಣೆಗೆ ಆದ್ಯತೆ ನೀಡಲಾಗುತ್ತದೆ.

ಎರಡನೇ ಕೃಷಿ

  • ಸರ್ಕಾರ ಈಗಾಗಲೆ ಎರಡನೇ ಕೃಷಿ ನಿರ್ದೇಶನಾಲಯ ತೆರೆದಿದೆ. ಅಲ್ಲಿ ಮೌಲ್ಯವರ್ಧನೆ, ಪರ್ಯಾಯ ಉದ್ಯಮಗಳ ಸ್ಥಾಪನೆ, ಉಪ ಉತ್ಪನ್ನಗಳಿಗೆ ಆದ್ಯತೆ, ನಷ್ಟ ತಪ್ಪಿಸಲು ಒತ್ತು ನೀಡುವ ಬಗ್ಗೆಯೂ ನೀತಿಯಲ್ಲಿ ತಿಳಿಸಿದೆ.

ಕೃಷಿ ಕೌಶಲ

  • ಕೃಷಿಯಲ್ಲಿಯ ಕೌಶಲ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ನಿರುದ್ಯೋಗ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಕೃಷಿಯಲ್ಲಿ ಡಿಪ್ಲೊಮಾ ಹಾಗೂ ಐಟಿಐ ಓದಿರುವ ವಿದ್ಯಾರ್ಥಿಗಳಿಗೆ ಕೃಷಿ ಯಂತ್ರೋಪಕರಣಗಳ ರಿಪೇರಿಯಂತಹ ವಿಚಾರಗಳಲ್ಲಿ ತರಬೇತಿ ನೀಡಿ ಕೌಶಲ ಅಭಿವೃದ್ಧಿ ಮಾಡುವುದು.

ವಿದ್ಯುತ್ ಸುಧಾರಣೆ

  • ಕೃಷಿಯಲ್ಲಿ ವಿದ್ಯುತ್ ಬಳಕೆ ಹೆಚ್ಚಿದೆ. ಆದರೆ ಮೂಲಸೌಕರ್ಯ ಸಾಕಾಗುತ್ತಿಲ್ಲ. ಅದರಿಂದ ಕಾರ್ವಿುಕರ ವೆಚ್ಚ ಜಾಸ್ತಿಯಾಗುತ್ತಿದೆ. 2013-14ರಲ್ಲಿ ಪ್ರತಿ ಹೆಕ್ಟೇರ್​ಗೆ 2.14 ಕೆ.ಡಬ್ಲ್ಯೂ. ವಿದ್ಯುತ್ ಬಳಕೆಯಾಗುತ್ತಿತ್ತು. ಅದು 2016-17ಕ್ಕೆ 2.44ಕ್ಕೆ ತಲುಪಿದೆ. ಇದನ್ನು ಹೆಚ್ಚಿಸಬೇಕಾಗಿದೆ.

ಸಾಂದ್ರತೆ ಹೆಚ್ಚಳ

  • ಕೃಷಿಯ ಸಾಂದ್ರತೆ ಸರಾಸರಿ ಶೇ.115 ರಿಂದ 123 ಇದೆ. ರಾಷ್ಟ್ರೀಯ ಸರಾಸರಿ ಶೇ.136 ಇದೆ. ಮುಂದಿನ ಐದು ವರ್ಷಗಳಲ್ಲಿ ರಾಷ್ಟ್ರೀಯ ಸರಾಸರಿಗೆ ತಲುಪುದು ಉದ್ದೇಶವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net