ಮಂಡ್ಯ ಜನರೊಂದಿಗಿನ ನನ್ನ ಸಂಬಂಧ ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ; ನಿಖಿಲ್ ಕುಮಾರಸ್ವಾಮಿ

ನಿಖಿಲ್ ಕುಮಾರಸ್ವಾಮಿ
Published on

ಮಂಡ್ಯ: ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತಿರಬಹುದು. ಆದರೆ ನನ್ನ ಮತ್ತು ಮಂಡ್ಯ ಜನರ ಸಂಬಂಧ ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಜೆಡಿಎಸ್‌ ಸಮಾವೇಶದಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಸಮಾವೇಶದಲ್ಲಿ ಅಭಿಮಾನಿಯೊಬ್ಬ ಮತ್ತೆ ಲೋಕಸಭಾ ಚುನಾವಣಗೆ ಮಂಡ್ಯಕ್ಕೆ ಬನ್ನಿ ಎಂದಾಗ, 2023ಕ್ಕೆ ರಾಜ್ಯದಲ್ಲಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಶ್ರಮಿಸೊಣ. 2024 ನಂತರ ಈ ಬಗ್ಗೆ ಯೋಚಿಸೋಣ ಎಂದು ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

ಇದೇ ವೇಳೆ ನಿಖಿಲ್ ಕುಮಾರಸ್ವಾಮಿ ಮಾತನಾಡುತ್ತಾ, ರಾಮನಗರ ಕ್ಷೇತ್ರದ ಅಭ್ಯರ್ಥಿಯಾಗಿ ನನ್ನ ಹೆಸರು ಘೋಷಣೆ ಮಾಡಿದ್ದು ಅನಿರೀಕ್ಷಿತ. ಇದಾಗುತ್ತಿದ್ದಂತೆ ಸಾಕಷ್ಟು ಜನರು ಕರೆ ಮಾಡಿ ಮಂಡ್ಯ ಕ್ಷೇತ್ರವನ್ನು ಬಿಡಬೇಡಿ ಎಂದು ಹೇಳಿದರು. ಇಂದಿಗೂ ನಾನು ಹೋದಲೆಲ್ಲಾ ನೀವು ಸೋಲಬಾರದಿತ್ತು ಎಂದು ಜನರು ಕಣ್ಣಲ್ಲಿ ನೀರು ಹಾಕುತ್ತಿದ್ದಾರೆ. ಮಂಡ್ಯದ ಸ್ವಾಭಿಮಾನ ಉಳಿಸುವ ಪ್ರಯತ್ನ ಖಂಡಿತವಾಗಿಯೂ ಮಾಡುತ್ತೇನೆ. ಲೋಕಸಭಾ ಚುನಾವಣೆಯ ವೇಳೆ ರಾಜಕೀಯ ಷಡ್ಯಂತ್ರಕ್ಕೆ ಬಲಿಯಾದೆ. ಆದರೆ ನೀವು ಕೊಟ್ಟ ಪ್ರೀತಿ ನಾನೆಂದಿಗೂ ಮರೆಯುವುದಿಲ್ಲ. ಮಂಡ್ಯ ನಮ್ಮ‌ ಜಿಲ್ಲೆ, ಇಲ್ಲಿನ ಜನರ ಕಷ್ಟ ಸುಖಗಳಲ್ಲಿ ಸದಾ ಭಾಗಿಯಾಗುತ್ತೇನೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net