

ನವದೆಹಲಿ: ನಿರಂತರ ಗದ್ದಲ, ಪ್ರತಿಭಟನೆಗಳ ನಡುವೆಯೇ ಸಂಸತ್ನ ಚಳಿಗಾಲದ ಅಧಿವೇಶನ ಶುಕ್ರವಾರ ಮುಕ್ತಾಯಗೊಂಡಿತು. ಅಧಿವೇಶನದ ಕೊನೆಯ ದಿನದ ಕಲಾಪ ಆರಂಭ ವಾಗುತ್ತಿದ್ದಂತೆ ಎನ್ಡಿಎ ಮೈತ್ರಿಕೂಟ ಮತ್ತು ವಿರೋಧ ಪಕ್ಷಗಳ ಸಂಸದರು ಮತ್ತೆ ಪ್ರತಿಭಟನೆ ಆರಂಭಿಸಿದರು. ಲೋಕಸಭೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು ಮುಂದೂಡಬೇಕಾಯಿತು. ಅಂಬೇಡ್ಕರ್ ಅವರ ಬಗ್ಗೆ ಗೃಹ ಸಚಿವ ಅಮಿತ್ ಷಾ ಅವರ ಹೇಳಿಕೆಗಳ ವಿರುದ್ಧ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಧರಣಿ ನಡೆಸಿದ ಕಾರಣ ಸಭಾಪತಿ ಜಗದೀಪ್ ಧನಕರ್ ಕೂಡ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಪ್ರಸ್ತುತ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯ ಉತ್ಪಾದಕತೆ ಪ್ರಮಾಣ ಶೇ. 58ರಷ್ಟಾಗಿದೆ. ಈ ಹಿಂದಿನ ಅಧಿವೇಶನಗಳಲ್ಲಿ ಈ ಪ್ರಮಾಣ ಶೇ. 100ಕ್ಕಿಂತಲೂ ಅಧಿಕವಾಗಿತ್ತು ಎಂದು ಸಂಸತ್ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ರಾಜ್ಯಸಭೆಯಲ್ಲಿ ಶೇ. 40.03 ಉತ್ಪಾದಕತೆ ದಾಖಲಾಗಿದೆ. ಸದನವು 43 ಗಂಟೆ 27 ನಿಮಿಷಗಳ ಕಾಲ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಪ್ರತಿಪಕ್ಷಗಳ ವಿರುದ್ಧ ಆರೋಪ ಮಾಡಿದ್ದಾರೆ. ಸುಗಮ ಕಲಾಪಕ್ಕೆ ಅವಕಾಶ ನೀಡುವ ಒಪ್ಪಂದಕ್ಕೆ ಪ್ರತಿಪಕ್ಷಗಳು ಒಪ್ಪಿಗೆ ನೀಡಿದ್ದವು. ಆದರೆ ನಂತರ ಇದನ್ನು ಪಾಲನೆ ಮಾಡದೇ ನಿರಂತರ ಪ್ರತಿಭಟನೆ ನಡೆಸಿದರು. ಇದರಿಂದ ಉತ್ಪಾದ ಕತೆ ಪ್ರಮಾಣ ಕುಸಿತ ಕಂಡಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಅಧಿವೇಶನದ ಸಮಯದಲ್ಲಿ 5 ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. ಅವುಗಳಲ್ಲಿ 4 ಮಸೂದೆಯನ್ನು ಅಂಗೀಕರಿಸಲಾಗಿದೆ. ರಾಜ್ಯಸಭೆಯಲ್ಲಿ 3 ಮಸೂದೆ ಅಂಗೀಕರಿಸಲಾಗಿದೆ. ನ. 26ರಂದು ಸಂವಿಧಾನ ದಿನಾಚರಣೆಯ ಸ್ಮರಣಾರ್ಥ ವಿಶೇಷ ಅಧಿವೇಶನವೂ ನಡೆದಿದೆ ಎಂದು ರಿಜಿಜು ಮಾಹಿತಿ ನೀಡಿದರು.
ಎನ್ಡಿಎ vs ಇಂಡಿಯಾ: ಪ್ರಸಕ್ತ ಅಧಿವೇಶನ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ಜಿದ್ದಾಜಿದ್ದಿಗೂ ಸಾಕ್ಷಿಯಾಗಿದೆ. ಆರಂಭದಲ್ಲಿ ಅದಾನಿ ವಿವಾದದ ಬಗ್ಗೆ ಚರ್ಚೆ ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತ್ತು. ರಾಜ್ಯಸಭೆಯ ಸಭಾಪತಿ ಧನಕರ್ ಪಕ್ಷಪಾತಿ ಎಂದು ಕಾಂಗ್ರೆಸ್ ಆರೋಪ ಮಾಡಿತು. ತಮಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಭಾಪತಿ ವಿರುದ್ಧ ಅವಿಶ್ವಾಸ ಮತ ಮಂಡನೆ ಮಾಡಿದರು. ಇದು ಎನ್ಡಿಎ ಮತ್ತು ಇಂಡಿಯಾ ಬಣದ ನಡುವಿನ ಘರ್ಷಣೆಗೆ ಕಾರಣವಾಯಿತು. ನಂತರ ಸಂವಿಧಾನ ಕುರಿತ ಚರ್ಚೆ ವೇಳೆ ಗೃಹ ಸಚಿವ ಅಮಿತ್ ಅವರು ಬಿ.ಆರ್. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದ ಕಾರಣ ಇದೇ ಅಧಿವೇಶನ ಪ್ರತಿಭಟನೆಯಲ್ಲೇ ಅಂತ್ಯ ಕಂಡಿತು.
ಬಾಂಗ್ಲಾ ಅಲ್ಪಸಂಖ್ಯಾತರ ಮೇಲೆ 2,200 ಹಿಂಸಾಚಾರ ಕೇಸ್: ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧ ಒಟ್ಟು 2,200 ಹಿಂಸಾಚಾರ ಪ್ರಕರಣಗಳು ವರದಿಯಾಗಿವೆ. ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸಂಸತ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಅಲ್ಪಸಂಖ್ಯಾತ ಮತ್ತು ಮಾನವ ಹಕ್ಕುಗಳ ಸಂಘಟನೆಗಳ ಅಂಕಿ-ಅಂಶಗಳನ್ನು ಉಲ್ಲೇಖಿಸಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಲೋಕಸಭೆಯಲ್ಲಿ ಕೇಳಿಕೆ ನೀಡಿದ್ದಾರೆ. ಪಾಕಿಸ್ತಾನದಲ್ಲಿ ಈ ವರ್ಷ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರದ ಪ್ರಕರಣಗಳ ಸಂಖ್ಯೆ 112 ದಾಖಲಾಗಿದೆ. 2022ರಲ್ಲಿ ಬಾಂಗ್ಲಾದೇಶದಲ್ಲಿ 47 ಮತ್ತು ಪಾಕಿಸ್ತಾನದಲ್ಲಿ 241 ಹಿಂಸಾಚಾರ ಪ್ರಕರಣ ವರದಿಯಾಗಿತ್ತು. 2023ರಲ್ಲಿ ಬಾಂಗ್ಲಾದೇಶದಲ್ಲಿ 302 ಮತ್ತು ಪಾಕಿಸ್ತಾನದಲ್ಲಿ 103 ಪ್ರಕರಣಗಳು ಬೆಳಕಿಗೆ ಬಂದಿವೆ. ಸರ್ಕಾರವು ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದೆ. ಬಾಂಗ್ಲಾದೇಶದ ಸರ್ಕಾರದೊಂದಿಗೆ ಈ ವಿಚಾರವನ್ನು ಚರ್ಚೆ ಮಾಡಲಾಗಿದೆ.
ಹಕ್ಕುಚ್ಯುತಿ ನೋಟಿಸ್: ಗೃಹ ಸಚಿವ ಅಮಿತ್ ಷಾ ರಾಜ್ಯಸಭೆಯಲ್ಲಿ ಮಾಡಿದ್ದ ಭಾಷಣವನ್ನು ‘ಕ್ರಿಮಿನಲ್ ಸ್ವರೂಪದಲ್ಲಿ ಸಂಕಲಿಸಿದ’ ಆರೋಪದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹಕ್ಕು ಚ್ಯುತಿ ಗೊತ್ತುವಳಿ ಮಂಡಿಸುವ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಶುಕ್ರವಾರ ಸ್ಪೀಕರ್ ಓಂ ಬಿರ್ಲಾರಿಗೆ ಮನವಿ ಸಲ್ಲಿಸಿದರು. ಸಾಮಾಜಿಕ ಮಾಧ್ಯಮಗಳಲ್ಲಿ ಅಮಿತ್ ಷಾರ ಭಾಷಣವನ್ನು ಎಡಿಟ್ ಮಾಡಿ ಅವರು ಪ್ರಕಟಿಸಿದ್ದಾರೆ. ಇದು ‘ರಾಜಕೀಯ ದಿವಾಳಿತನ’ ಎಂದು ದುಬೆ ಆರೋಪಿಸಿದ್ದಾರೆ.
ಪ್ರಿಯಾಂಕಾ ಆಯ್ಕೆ ಪ್ರಶ್ನಿಸಿ ಅರ್ಜಿ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ವಯನಾಡು ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಬಿಜೆಪಿ ನಾಯಕಿ, ಪರಾಜಿತ ಅಭ್ಯರ್ಥಿ ನವ್ಯಾ ಹರಿದಾಸ್ ಕೇರಳ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ನಾಮಪತ್ರದಲ್ಲಿ ಪ್ರಿಯಾಂಕಾ ಆಸ್ತಿ ವಿವರಗಳನ್ನು ಸರಿಯಾಗಿ ನಮೂದಿಸಿಲ್ಲ ಹಾಗೂ ತಪು್ಪ ಮಾಹಿತಿ ಒದಗಿಸಿದ್ದಾರೆ. ಇದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಭ್ರಷ್ಟಾಚಾರಕ್ಕೆ ಸಮನಾಗುತ್ತದೆ ಎಂದು ನವ್ಯಾ ಹೇಳಿದ್ದಾರೆ.
ಪುರಾವೆ ನೀಡದ ಕೆನಡಾ: ಖಲಿಸ್ತಾನಿ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆಗೆ ಪ್ರಕರಣದಲ್ಲಿ ಭಾರತದ ವಿರುದ್ಧ ಕೆನಡಾ ಯಾವುದೇ ಪುರಾವೆಗಳನ್ನು ಪ್ರಸ್ತುತ ಪಡಿಸಿಲ್ಲ. ಇದು ಭಾರತ ವಿರೋಧಿ ಪ್ರತ್ಯೇಕತಾವಾದಿ ಕಾರ್ಯಸೂಚಿಯ ಭಾಗವಾಗಿದೆ. ಇಂಥ ಹೇಳಿಕೆ ಸ್ಥಿರ ದ್ವಿಪಕ್ಷೀಯ ಸಂಬಂಧಕ್ಕೆ ಹಾನಿಕಾರಕ ಎಂದು ಸರ್ಕಾರ ಲಿಖಿತ ಉತ್ತರ ನೀಡಿದೆ.