

ಚೆನ್ನೈ: ಈಚೆಗೆ ಮುಕ್ತಾಯಗೊಂಡ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯ ಮಳೆಯಿಂದಾಗಿ ಡ್ರಾಗೊಂಡ ಬಳಿಕ ಟೀಮ್ ಇಂಡಿಯಾ ಆಟಗಾರ ಆರ್. ಅಶ್ವಿನ್ (R Ashwin) ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿಯನ್ನು ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಕೆಲವರು ಅಶ್ವಿನ್ ಅವರ ನಿರ್ಧಾರವನ್ನು ಸಮರ್ಥಿಸಿಕೊಂಡರೆ ಹಲವರು ಟೀಕಿಸಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದೆಲ್ಲದರ ನಡುವೆಯೇ ಅಶ್ವಿನ್ (R Ashwin) ಟೀಮ್ ಇಂಡಿಯಾದಲ್ಲಿ ತಮ್ಮ ಉತ್ತರಾಧಿಕಾರಿ ಯಾರೆಂದು ಘೋಷಿಸಿದ್ದು, ಕ್ರೀಡಾ ವಲಯದಲ್ಲಿ ಹೊಸ ಚರ್ಚೆಯನ್ನೇ ಹುಟ್ಟುಹಾಕಿದೆ.
ಅಶ್ವಿನ್ (Ashwin) ನಿವೃತ್ತಿ ಕುರಿತಂತೆ ಹಲವರು ಕ್ರೀಡೆ ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದು. ಇದರಲ್ಲಿ ಯುವ ಆಟಗಾರ ವಾಷಿಂಗ್ಟನ್ ಸುಂದರ್ (Washington Sundar) ಕೂಡ ಒಬ್ಬರಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಸುಂದರ್ ಹಂಚಿಕೊಂಡಿದ್ದಾರೆ.
ಆ್ಯಶ್ (Ashwin) ಅಣ್ಣಾ ನೀವು ಕೇವಲ ನನಗೆ ಟೀಂ ಮೇಟ್ ಮಾತ್ರ ಅಲ್ಲ, ನೀವು ನನಗೆ ಸ್ಫೂರ್ತಿ, ಒಬ್ಬ ಸಲಹೆಗಾರ ಮತ್ತು ನಿಜವಾದ ಕ್ರೀಡಾ ಚಾಂಪಿಯನ್. ನಿಮ್ಮ ಜೊತೆ ಡ್ರೆಸ್ಸಿಂಗ್ ರೂಂ ಅನ್ನು ಹಂಚಿಕೊಳ್ಳುವ ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಗೌರವ ಎಂದು ತಿಳಿದುಕೊಂಡಿದ್ದೇನೆ. ತಮಿಳುನಾಡಿನವನೇ ಆದ ನಾನು ಚೆಪಾಕ್ನಲ್ಲಿ ನಿಮ್ಮ ಜೊತೆ, ನಿಮ್ಮ ವಿರುದ್ಧ ಆಟವಾಡುತ್ತಾ ಬಹಳ ಹತ್ತಿರದಿಂದ ನಿಮ್ಮನ್ನು ಕಂಡಿದ್ದೇನೆ. ಪ್ರತಿ ಕ್ಷಣವೂ ಅಮೂಲ್ಯ. ಮೈದಾನದ ಒಳಗಿರಲಿ, ಹೊರಗಿರಲಿ ನಿಮ್ಮಿಂದ ಕಲಿತದ್ದನ್ನು ಸದಾ ಜತನದಿಂದ ಕಾಪಾಡಿಕೊಳ್ಳುವೆ. ನಿಮ್ಮ ಭವಿಷ್ಯವೂ ಖುಶಿ ಮತ್ತು ಯಶಸ್ಸಿನಿಂದಲೇ ಕೂಡಿರಲಿ ಎಂದು ಹಾರೈಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅಶ್ವಿನ್ (Ashwin), ತುಪಕ್ಕಿಯ ಪುಡಿಂಗ ವಾಶಿ! ಆ ದಿನ ರಾತ್ರಿ ನಿಮ್ಮೊಂದಿಗೆ ಮಾತನಾಡಿದ 2 ನಿಮಿಷದ ಮಾತು ಅತ್ಯುತ್ತಮವಾಗಿತ್ತು ಎಂದು ರಿಪ್ಲೈ ಮಾಡುವ ಮೂಲಕ ತಮ್ಮ ಉತ್ತರಾಧಿಕಾರಿ ಯಾರೆಂದು ರಿವೀಲ್ ಮಾಡಿದ್ದಾರೆ. ತಮಿಳುನಾಡು ಮೂಲದವರಾದ ವಾಷಿಂಗ್ಟನ್ ಸುಂದರ್ ಭಾರತದ ಪರ 7 ಟೆಸ್ಟ್ ಪಂದ್ಯಗಳಲ್ಲಿ 24 ವಿಕೆಟ್ ಮತ್ತು 387 ರನ್ ಗಳಿಸಿದ್ದಾರೆ.