ಎರಡು ಸಾವಿರ ರೂ. ಮುಖಬೆಲೆಯ ನೋಟು ಬ್ಯಾಂಡೇಜ್: 'ನಾವು ಸರಿ' ಎಂದ ಪಿ.ಚಿದಂಬರಂ ಹೀಗಂದಿದ್ದೇಕೆ?

Chidambaram Note
Published on

ನವದೆಹಲಿ: ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿದ ಬೆನ್ನಿಗೇ ಕೇಂದ್ರದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಪ್ರತಿಕ್ರಿಯೆ ನೀಡಿದ್ದು, 2 ಸಾವಿರ ನೋಟನ್ನು ಬ್ಯಾಂಡೇಜ್ ಎಂದು ಕರೆದಿದ್ದಾರೆ.

ನಿರೀಕ್ಷೆಯಂತೆ ಕೇಂದ್ರ ಸರ್ಕಾರ/ಆರ್​​ಬಿಐ 2000 ರೂ. ನೋಟುಗಳನ್ನು ಹಿಂದೆಗೆದುಕೊಂಡಿದೆ ಮತ್ತು ನೋಟುಗಳನ್ನು ಬದಲಾಯಿಸಲು ಸೆಪ್ಟೆಂಬರ್ 30ರವರೆಗೆ ಸಮಯ ನೀಡಿದೆ. 2000 ರೂಪಾಯಿ ನೋಟು ವಿನಿಮಯದ ಜನಪ್ರಿಯ ಮಾಧ್ಯಮವಲ್ಲ. ನಾವು ಇದನ್ನು 2016ರ ನವೆಂಬರ್​​ನಲ್ಲೇ ಹೇಳಿದ್ದೇವೆ ಮತ್ತು ನಾವು ಸರಿ ಎಂದು ಸಾಬೀತಾಗಿದೆ ಎಂದು ಪಿ.ಚಿದಂಬರಂ ಹೇಳಿದ್ದಾರೆ.

ಜನಪ್ರಿಯ ಮತ್ತು ವ್ಯಾಪಕವಾಗಿ ವಿನಿಮಯದಲ್ಲಿದ್ದ 500 ಮತ್ತು 1000 ರೂ. ನೋಟುಗಳನ್ನು ಅಮಾನ್ಯಗೊಳಿಸುವ ಮೂರ್ಖ ನಿರ್ಧಾರವನ್ನು ಮರೆಮಾಚಲು 2000 ರೂ. ನೋಟು ಒಂದು ಬ್ಯಾಂಡೇಜ್​ ಆಗಿತ್ತು. ನೋಟು ಅಮಾನ್ಯೀಕರಣದ ಕೆಲವು ವಾರಗಳ ನಂತರ ಕೇಂದ್ರ ಸರ್ಕಾರ/ಆರ್​ಬಿಐ 500 ರೂ. ನೋಟನ್ನು ಮತ್ತೆ ಪರಿಚಯಿಸಲು ಒತ್ತಾಯಿಸಲಾಯಿತು. ಇನ್ನು 1000 ರೂ. ಮುಖಬೆಲೆಯ ನೋಟುಗಳನ್ನು ಮತ್ತೆ ಪರಿಚಯಿಸಿದರೆ ನನಗೆ ಆಶ್ಚರ್ಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ನೋಟು ಅಮಾನ್ಯೀಕರಣ ಒಂದು ಸುತ್ತು ಬಂದಿದೆ ಎಂದಿರುವ ಚಿದಂಬರಂ, 2 ಸಾವಿರ ರೂ. ನೋಟು ಯಾವತ್ತೂ ಕ್ಲೀನ್ ನೋಟ್ ಆಗಿರಲಿಲ್ಲ. ಬಹಳಷ್ಟು ಮಂದಿಯಿಂದ ಅದು ಬಳಕೆಯೇ ಆಗುತ್ತಿರಲಿಲ್ಲ. ಅದು ಕಾಳಧನ ಇರುವವರಲ್ಲಿ ತಾತ್ಕಾಲಿಕ ಬಳಕೆಗಷ್ಟೇ ಆಗಿತ್ತು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net