

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಟರ್ಮಿನಲ್-2ಗೆ ಅಂತಾರಾಷ್ಟ್ರೀಯ ಕಾರ್ಯಾಚರಣೆಯನ್ನು ಸ್ಥಳಾಂತರಗೊಳಿಸುವ ಪ್ರಸ್ತಾಪವನ್ನು ಸದ್ಯಕ್ಕೆ ಮುಂದೂಡಲಾಗಿದೆ. ಹೀಗಾಗಿ ಅಂತಾರಾಷ್ಟ್ರೀಯ ಕಾರ್ಯಾಚರಣೆ ಈಗ ಎಂದಿನಂತೆ ಟರ್ಮಿನಲ್-1ರಲ್ಲೇ ಮುಂದುವರಿಯಲಿದೆ.
ಈ ಕುರಿತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ವಕ್ತಾರರೇ ಮಾಹಿತಿಯೊಂದನ್ನು ನೀಡಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ಕ್ಕೆ ಅಂತಾರಾಷ್ಟ್ರೀಯ ಕಾರ್ಯಾಚರಣೆಯನ್ನು ಆ.31ರಂದು ಸ್ಥಳಾಂತರಿಸುವ ಪ್ರಸ್ತಾಪವನ್ನು ಮುಂದೂಡಲಾಗಿದೆ. ಎಲ್ಲ ನಿಯಂತ್ರಕ ಪ್ರಾಧಿಕಾರಗಳೊಂದಿಗೆ ಸಮಾಲೋಚಿಸಿದ ನಂತರ ಈ ನಿರ್ಣಯ ತಳೆಯಲಾಗಿದ್ದು, ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ನಮ್ಮ ಪ್ರಯಾಣಿಕರಿಗೆ ಸೂಕ್ತ ಮತ್ತು ತಡೆರಹಿತ ಪ್ರಯಾಣ ಒದಗಿಸುವ ಸಲುವಾಗಿ ಅಂತಿಮ ಸನ್ನದ್ಧತೆ ಪರಿಶೀಲನೆಯ ಸಮಯದ ಕೊನೆಯ ಕ್ಷಣಗಳಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮುಂದಿನ ಸೂಚನೆ ಬರುವವರೆಗೆ ಅಂತಾರಾಷ್ಟ್ರೀಯ ಕಾರ್ಯಾಚರಣೆಗಳು ಟರ್ಮಿನಲ್ 1ರಲ್ಲಿ ಉಳಿಯುತ್ತವೆ ಎಂದು ಅವರು ತಿಳಿಸಿದ್ದಾರೆ.
ಈ ನಿರ್ಧಾರದಿಂದ ಉಂಟಾದ ಅನನುಕೂಲತೆಗೆ ನಾವು ವಿಷಾದಿಸುತ್ತೇವೆ ಮತ್ತು ನಮ್ಮ ಪ್ರಯಾಣಿಕರಿಗೆ ಸಾಧ್ಯವಾದಷ್ಟೂ ಉತ್ತಮ ಪ್ರಯಾಣದ ಅನುಭವ ಒದಗಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುವಾಗ ನಿಮ್ಮ ತಾಳ್ಮೆ ಹಾಗೂ ತಿಳುವಳಿಕೆಯನ್ನು ಪ್ರಶಂಸಿಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರು ಆಯಾ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸುವಂತೆ ವಿನಂತಿಸುತ್ತೇವೆ ಎಂದು ತಿಳಿಸಿದ್ದಾರೆ.