

ರಾಜಸ್ಥಾನ: ಇಲ್ಲಿ ದೊಡ್ಡ ಕನಸುಗಳನ್ನು ಹೊತ್ತು ಕೋಚಿಂಗ್ಗಾಗಿ ಮಕ್ಕಳಷ್ಟೇ ಮನೆ ಬಿಡುತ್ತಿಲ್ಲ, ಅವರ ಜೊತೆಗೆ ತಂದೆ-ತಾಯಿ, ಅಜ್ಜ-ಅಜ್ಜಿ ಇಲ್ಲವೇ ಯಾರಾದರೂ ಒಬ್ಬರು ಕೂಡ ಮನೆ ಬಿಡುತ್ತಿದ್ದಾರೆ. ಇಂಥದ್ದೊಂದು ಪರಿಸ್ಥಿತಿಯನ್ನು ಕೋಚಿಂಗ್ ಹಬ್ ಎಂದು ಕರೆಯಲಾಗುವ ರಾಜಸ್ಥಾನದ ಕೋಟಾದಲ್ಲಿನ ಆತಂಕಕಾರಿ ಬೆಳವಣಿಗೆಯೊಂದು ಸೃಷ್ಟಿಸಿದೆ.
ಉನ್ನತ ಸ್ಥಾನ ಗಳಿಸುವ ನಿಟ್ಟಿನಲ್ಲಿ ಕೋಚಿಂಗ್ಗಾಗಿ ಕೋಟಾಗೆ ಬರುತ್ತಿರುವ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ಹೆಚ್ಚಾಗಿರುವುದರಿಂದ ಇಂಥದ್ದೊಂದು ಪರಿಸ್ಥಿತಿ ಸೃಷ್ಟಿಯಾಗಿದೆ. ಹೀಗಾಗಿ ವಿದ್ಯಾರ್ಥಿಗಳ ಜತೆ ಮನೆಯಿಂದ ಬೇರೆ ಯಾರಾದರೂ ಒಬ್ಬರು ಕೂಡ ಬಂದು ನೆಲೆಸಲಾರಂಭಿಸಿದ್ದಾರೆ.
ಇಲ್ಲಿಗೆ ಕೋಚಿಂಗ್ಗೆ ಎಂದು ಬರುತ್ತಿರುವ ಮಕ್ಕಳನ್ನು ಮನೆಯವರು ಈಗ ಹಾಸ್ಟೆಲ್ನಲ್ಲಿ ಇರಲು ಬಿಡುತ್ತಿಲ್ಲ. ಬದಲಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡು ಮನೆಯವರು ಯಾರಾದರೂ ಒಬ್ಬರು ಅವರೊಂದಿಗೆ ಇರುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ. ಈ ವರ್ಷದಲ್ಲಿ ಈಗಾಗಲೇ ಇಲ್ಲಿಗೆ ಕೋಚಿಂಗ್ ಪಡೆಯಲೆಂದು ಬಂದ 23 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಈ ಸಂಖ್ಯೆ 15 ಆಗಿತ್ತು. ಹೀಗಾಗಿ ಮಕ್ಕಳನ್ನು ಒಂಟಿಯಾಗಿ ಕಳುಹಿಸಲು ಮನೆಯವರು ಹಿಂಜರಿಯುತ್ತಿದ್ದಾರೆ.
ಬಿಹಾರದ ಸೀತಾಮರ್ಹಿಯ ನೀರುದೇವಿ ಎಂಬಾಕೆ ತನ್ನ 80ನೇ ವಯಸ್ಸಿನಲ್ಲೂ ಮನೆ ಬಿಟ್ಟು ಬಂದಿದ್ದಾರೆ. ಐಐಟಿ ಪ್ರವೇಶ ಪರೀಕ್ಷೆಗೆ ಸಜ್ಜಾಗುತ್ತಿರುವ ಮೊಮ್ಮಗ ಕೋಚಿಂಗ್ ಸಲುವಾಗಿ ಈಕೆಯೂ ಆತನೊಂದಿಗೆ ಬಂದು ನೆಲೆಸಿದ್ದಾರೆ. ಕೋಚಿಂಗ್ಗೆ ಸೇರಿಸಿ ಹೋದ ನಾವು ಮನೆಯಲ್ಲಿ ನೆಮ್ಮದಿಯಲ್ಲಿ ಇರಲು ಆಗಿಲ್ಲ. ಇಲ್ಲಿನ ಆತಂಕಕಾರಿ ವಿಷಯದ ಕುರಿತು ಕೇಳಿ ಯಾರಾದರೂ ಒಬ್ಬರು ಬಂದಿರುವುದೇ ಸೂಕ್ತ ಎಂದುಕೊಂಡು ಬಂದೆ ಎಂಬುದಾಗಿ ಹೇಳಿದ್ದಾರೆ.
ಮಧ್ಯಪ್ರದೇಶದ ಸಂಧ್ಯಾ ದ್ವಿವೇದಿ ಎಂಬಾಕೆ ತನ್ನ ಮಗನೊಂದಿಗೆ ಬಂದು ನೆಲೆಸಿದ್ದಾರೆ. ಚಂಡೀಘಡದ ಟೆಕ್ಕಿ ಶಿವಾನಿ ಜೈನ್ ಎಂಬಾಕೆ ನೀಟ್ಗೆ ಸಜ್ಜಾಗುತ್ತಿರುವ ಮಗಳ ಜೊತೆಗಿರಲು ಕೋಟಾಗೆ ಬಂದಿದ್ದಾರೆ. ಹೀಗೆ ಹಲವರು ಮಕ್ಕಳು-ಮೊಮ್ಮಕ್ಕಳ ಜತೆಗೆ ಬಂದು ನೆಲೆಸಿದ್ದಾರೆ. ಜೆಇಇ, ನೀಟ್ ಮುಂತಾದ ಪರೀಕ್ಷೆಗಳ ಕೋಚಿಂಗ್ ಸಲುವಾಗಿ ವರ್ಷಕ್ಕೆ 2 ಲಕ್ಷಕ್ಕೂ ಅಧಿಕ ಮಂದಿ ಕೋಟಾಗೆ ಆಗಮಿಸುತ್ತಿದ್ದಾರೆ.