ರಿಯಲ್​ ಸ್ಟಾರ್ ಉಪೇಂದ್ರ ಹೇಳಿದ್ದರಲ್ಲಿ 'ಸತ್ಯ' ಇದ್ಯಾ?: 'ಯು-ಐ' ಮೂಡಿಸಿದ ಪ್ರಶ್ನೆ!

UI Upendra
Published on

ಬೆಂಗಳೂರು: ತಮ್ಮ ನಿರ್ದೇಶನದ ಸಿನಿಮಾಗಳ ವಿಚಾರದಲ್ಲಿ ಯಾವಾಗಲೂ ಡಿಫರೆಂಟ್ ಆಗಿರುವ ರಿಯಲ್​ ಸ್ಟಾರ್ ಉಪೇಂದ್ರ, ಇದೀಗ ಅವರ ನಿರ್ದೇಶನದ 'ಯುಐ' ಸಿನಿಮಾದಲ್ಲೂ ಅದನ್ನು ಮುಂದುವರಿಸಿದ್ದಾರೆ. ನಿನ್ನೆಯಷ್ಟೇ ಚಿತ್ರದ ಫಸ್ಟ್​ಲುಕ್​ ಬಗ್ಗೆ ಅಪ್​​ಡೇಟ್ ಕೊಡುತ್ತೇವೆ ಎಂದ ಈ ಚಿತ್ರತಂಡ ಕೊನೆಗೆ ಅದರಲ್ಲೂ ಡಿಫರೆಂಟ್ ಎನಿಸಿಕೊಂಡಿದೆ.

ಚಿತ್ರದ ಫಸ್ಟ್​ಲುಕ್​ ಅಪ್​ಡೇಟ್​ ಕುರಿತ ಘೋಷಣೆಯನ್ನು ಕೆಲವರು ಫಸ್ಟ್​ಲುಕ್​ ಬಿಡುಗಡೆ ಆಗುತ್ತದೆ ಎಂದೇ ಭಾವಿಸಿದ್ದು, ಕೊನೆಗೆ ಫಸ್ಟ್​ಲುಕ್​ ಬಗ್ಗೆ ಅಪ್​ಡೇಟ್ ಅಷ್ಟೇ ಬಿಡುಗಡೆ ಆಗಿತ್ತು. ಅದನ್ನೂ ಚಿತ್ರತಂಡ ವಿಭಿನ್ನವಾಗಿ ಒಂದು ವಿಡಿಯೋ ಮೂಲಕ ತಿಳಿಸಿತ್ತು.

ಚಿತ್ರದ ನಿರ್ಮಾಪಕರಾದ ನವೀನ್ ಮತ್ತು ಕೆ.ಪಿ.ಶ್ರೀಕಾಂತ್​, ಯುಐ ಚಿತ್ರದ ಕುರಿತು ಏನಾದರೂ ಒಂದು ಅಪ್​ಡೇಟ್​ ಕೊಡಬೇಕು ಎಂದು ನಿರ್ದೇಶಕ ಉಪೇಂದ್ರ ಬಳಿ ಕೇಳುವಂಥ ಸನ್ನಿವೇಶದ ಮೂಲಕ ಈ ಅಪ್​ಡೇಟ್ ನೀಡಲಾಗಿತ್ತು.

ನಮ್ಮ ಚಿತ್ರ ಯಾವ ರೇಂಜಿಗಿದೆ ಎನ್ನುವುದನ್ನು ಒಂದು ನಿಮಿಷದ ತುಣುಕಿನಲ್ಲಿ ತಿಳಿಸಬೇಕು ಎಂಬ ನಿರ್ಮಾಪಕರ ಕೋರಿಕೆಗೆ, ಒಂದೇ ನಿಮಿಷದಲ್ಲಿ ತೋರಿಸುವುದಾದರೆ ನಾನು 2 ಗಂಟೆ ಸಿನಿಮಾ ಯಾಕೆ ಮಾಡಬೇಕಿತ್ತು ಎಂದು ಉಪೇಂದ್ರ ಉತ್ತರಿಸಿದ್ದರು.

ಅದಾಗ್ಯೂ ಬಿಡದ ನಿರ್ಮಾಪಕರು ಸಿನಿಮಾ ಬಿಡುಗಡೆ ಮೊದಲು ಒಂದು ಹೈಪ್​ ಮಾಡಬೇಕು ಎಂದಾಗಲೂ ನಿರಾಕರಿಸಿದ ಉಪೇಂದ್ರ, ಹೈಪ್​ ಮಾಡೋದಾ, ಅದೇ ಹೈಪ್​ ಆಗೋದಾ? ಎಂದಿದ್ದರು. ಅಲ್ಲದೆ, ಸುಳ್ಳಿಗೆ ಹೈಪ್​ ತರಬೇಕು, ಸತ್ಯಕ್ಕೆ ತಾನಾಗ್ ತಾನೇ ಹೈಫ್ ಸಿಗುತ್ತೆ, ಡೋಂಟ್ ವರಿ ಎಂದಿದ್ದರು.

ಹೀಗೊಂದು ರೀತಿಯಲ್ಲಿ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಕೌತುಕವನ್ನು ಸೃಷ್ಟಿಸಿದ್ದ 'ಯುಐ' ಸಿನಿಮಾದ ಫಸ್ಟ್​ಲುಕ್ ಅಪ್​ಡೇಟ್ ವಿಡಿಯೋ, ಬಿಡುಗಡೆ ಆದ ತಕ್ಷಣ ಟ್ರೆಂಡಿಂಗ್ ಆಗಿದ್ದಲ್ಲದೆ, ಬಿಡುಗಡೆ ಆಗಿ 24 ಗಂಟೆಗಳಾದರೂ ಟಾಪ್​ 2 ಟ್ರೆಂಡಿಂಗ್​ನಲ್ಲಿತ್ತು. ಇದೀಗ ಟಾಪ್​-3 ಟ್ರೆಂಡಿಂಗ್​ನಲ್ಲಿದೆ. ಹಾಗಾದರೆ ಉಪೇಂದ್ರ ಹೇಳಿದ್ದರಲ್ಲಿ ಸತ್ಯ ಇತ್ತಾ, ಸತ್ಯಕ್ಕೆ ತಂತಾನೇ ಹೈಪ್​ ಸಿಗ್ತಾ? ಎಂಬ ಪ್ರಶ್ನೆಯನ್ನು ಟ್ರೆಂಡ್​ ಆಗಿರುವ ಈ ಫಸ್ಟ್​ಲುಕ್ ಅಪ್​ಡೇಟ್ ವಿಡಿಯೋ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net