

ಸಿದ್ದರಾಮಯ್ಯ, ಮುಖ್ಯಮಂತ್ರಿ
ದೇಶದ ಒಟ್ಟು ಸಾಲವನ್ನು 190 ಲಕ್ಷ ಕೋಟಿ ರೂ.ಗಳಿಗೆ ಏರಿಸಿದ ಬಜೆಟ್ ಇದಾಗಿದ್ದು, ನಿಜವಾದ ಅರ್ಥದಲ್ಲಿ ಇದು ವಿಕಸಿತ ಅಲ್ಲ. ಭಾರತದ ವಿನಾಶ ಕಾರಿ ಬಜೆಟ್ ಆಗಿದೆ. ಕಳೆದ ವರ್ಷಕ್ಕಿಂತ ಶೇ. 5.8 ಬಜೆಟ್ ಗಾತ್ರ ಹೆಚ್ಚಾಗಿದೆ. ಆದರೂ ನಿರುದ್ಯೋಗ, ಬರಗಾಲ, ರೈತರ ಸಮಸ್ಯೆಗಳ ಬಗ್ಗೆ ಮಾತೇ ಆಡಿಲ್ಲ. ಸಾಲ ಹೆಚ್ಚಾಗಿರುವುದು, ಒಟ್ಟು ಸಾಲದ ಪ್ರಮಾಣ ವಿಪರೀತ ಏರಿಕೆ ಆಗಿರುವುದನ್ನು ಹೇಳಿಲ್ಲ.
ಇದು 47,65,758 ಕೋಟಿ ರೂ.ಗಾತ್ರದ ಬಜೆಟ್. ಕಳೆದ ವರ್ಷಕ್ಕಿಂತ 2,62,671 ಕೋಟಿ ಹೆಚ್ಚುವರಿ ಮಾಡಲಾಗಿದೆ. ಬಜೆಟ್ನ 47 ಲಕ್ಷ ಕೋಟಿ ರೂ.ಗಳಲ್ಲಿ 16,85,494 ಕೋಟಿ ರೂ ಸಾಲ ಮಾಡಿದ್ದಾರೆ. ಜನರ ಮುಂದೆ ಮುಚ್ಚಿಟ್ಟಿರುವುದೇ ಹೆಚ್ಚು. ದೇಶದ ಆರ್ಥಿಕ ಪರಿಸ್ಥಿತಿಯನ್ನು ಬಿಚ್ಚಿಟ್ಟಿಲ್ಲ. ವಿಕಸಿತ ಭಾರತ ಎಂದು ನರೇಂದ್ರಮೋದಿ ಪ್ರಚಾರದಲ್ಲಿ ಹೇಳುತ್ತಾರೆ. ಈ ಬಜೆಟ್ ವಿಕಸಿತ ಬಜೆಟ್ ಎನ್ನುತ್ತಾರೆ. ಇದು ನಿಜವಾದ ಅರ್ಥದಲ್ಲಿ ವಿನಾಶಕಾರಿ ಭಾರತ ಮಾಡುವ ಬಜೆಟ್.
ನಾವು ಅನ್ನಭಾಗ್ಯ, ಗೃಹಲಕ್ಷ್ಮೀ, ಯುವನಿಧಿ, ಗೃಹಜ್ಯೋತಿ, ಶಕ್ತಿ, ಕೃಷಿಭಾಗ್ಯ ಕಾರ್ಯಕ್ರಮ ಈ ವರ್ಗದ ಜನರಿಗೆ ಕೊಟ್ಟೆವು. ಬೆಳೆ ಪರಿಹಾರವನ್ನು ಬಜೆಟ್ನಲ್ಲಿ ಹೇಳಿಲ್ಲ. ಎಂ.ಎಸ್.ಪಿಗೆ ಕೆಲವು ಬೆಳೆಗಳನ್ನು ಮಾತ್ರ ಸೇರಿಸಿದ್ದಾರೆ. ರೈತರ ಎಲ್ಲ ಬೆಳೆಗಳು ಎಂ.ಎಸ್.ಪಿ ಅಡಿ ಬರಬೇಕು. ಇದರ ಬಗ್ಗೆ ಏನನ್ನೂ ಬಜೆಟ್ನಲ್ಲಿ ಹೇಳಿಲ್ಲ.
ನಿರ್ಮಲಾ ಸೀತಾರಾಮನ್ ಅವರ 6ನೇ ಬಜೆಟ್ ಇದು. ತೆರಿಗೆಯನ್ನು ಕಾರ್ಪೆರೇಟ್ಗಳ ಮೇಲಿನ ಪ್ರಮಾಣ ಶೇ. 30ಕ್ಕೆ ಇಳಿಸಿ ಉಳಿದ ಭಾರವನ್ನು ಬಡವರು, ಮಧ್ಯಮ ವರ್ಗದವರ ಮೇಲೆ ಹೇರಿದ್ದಾರೆ. ಬಡವರ, ಮಹಿಳೆಯರ, ಅಲ್ಪಸಂಖ್ಯಾತರ, ದಲಿತರ ವಿರೋಧಿ ಬಜೆಟ್ ಆಗಿದ್ದು, ಕೇಂದ್ರದ ಬಜೆಟ್ ಅತ್ಯಂತ ನಿರಾಶಾದಾಯಕವಾಗಿದೆ. 2004 -14ರವರೆಗೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಆಗ ಬೆಳವಣಿಗೆ ದರ ಶೇ. 13.79ರಷ್ಟು ಇತ್ತು. ಈಗ ಬಜೆಟ್ ಬೆಳವಣಿಗೆ ಶೇ.9.6ಕ್ಕೆ ಕುಸಿತ ಕಂಡಿದೆ. ವಿಕಸಿತ ಎಂದು ಹೇಳಿಕೊಂಡು ಶೇ. 4.19 ಕಡಿಮೆಯಾಗಿದೆ. ಜಿ.ಡಿ.ಪಿ ಬೆಳವಣಿಗೆ ಯುಪಿಎ ಸರ್ಕಾರದಲ್ಲಿ ಶೇ.11.14 ಇತ್ತು ಎನ್.ಡಿ.ಎ ಕಾಲದಲ್ಲಿ ಶೇ. 6.4ಕ್ಕೆ ಕುಸಿತವಾಗಿದೆ. ಇದನ್ನು ವಿಕಸಿತ ಎಂದು ಹೇಗೆ ಕರೆಯುವುದು?
ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾದ ಅನುದಾನ ಬಂದಿಲ್ಲ. 15ನೇ ಹಣಕಾಸು ಆಯೋಗ, ಫೆರಿಫೆರಲ್ ರಿಂಗ್ ರೋಡಿಗೆ ಹಣ ಬಂದಿಲ್ಲ. 5,300 ಕೋಟಿ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ ಅನುದಾನ ಬಿಡುಗಡೆಯಾಗಲಿಲ್ಲ. ಬರಗಾಲದ ಪರಿಹಾರಕ್ಕೂ ಒಂದು ಪೈಸೆ ಬಂದಿಲ್ಲ. ದೇಶದ ಸಾರ್ವಭೌಮತೆ ಇರಬೇಕು. ಆದರೆ ರಾಜ್ಯಗಳಿಗೆ ಅವರ ಪಾಲು ಕೊಡಬೇಕು. ಕೇಂದ್ರ ಕೊಡುತ್ತಿಲ್ಲ. ನಮ್ಮಿಂದ 4 ಲಕ್ಷ ಕೋಟಿ ರೂ. ತೆರಿಗೆ ವಸೂಲಿ ಮಾಡುವ ಕೇಂದ್ರ ಸರ್ಕಾರ ನಮಗೆ, ನಮ್ಮ ನಾಡಿಗೆ ನಿರಂತರವಾಗಿ ಅನ್ಯಾಯ ಮಾಡುತ್ತಿದೆ. ರಾಯಚೂರು ಜಿಲ್ಲೆಗೆ ಎಮ್ಸ್ ಸ್ಥಾಪನೆಗೆ ಒತ್ತಾಯಿಸಿದ್ದೆವು. ಪ್ರಯೋಜನ ಆಗಿಲ್ಲ. ಅಖಂಡ ಭಾರತ, ಅಖಂಡ ಕರ್ನಾಟಕ ಉಳಿಯಬೇಕು. ಇದಕ್ಕಾಗಿ ರಾಜ್ಯಗಳ ಪಾಲನ್ನು ಚಾಚೂ ತಪ್ಪದೆ ಕೊಡಬೇಕು.
ಕರ್ನಾಟಕ ಸರ್ಕಾರಕ್ಕೆ ಅನ್ಯಾಯವಾಗಿದ್ದರೆ ಅದು ಬಿಜೆಪಿ ಸರ್ಕಾರದಿಂದ. ಬರಗಾಲವಿದೆ ಎಂದು 26 ಸಂಸದರು ಕೇಂದ್ರದ ಮುಂದೆ ಹೇಳಿದ್ದಾರೆಯೇ? ಈ ಎಲ್ಲಾ ಸಂಸದರೂ ರಾಜ್ಯದ ಪರವಾಗಿ ಇವತ್ತಿನವರೆಗೂ ಬಾಯಿಯನ್ನೇ ಬಿಟ್ಟಿಲ್ಲ. ನಾವು ಕೇಳುತ್ತಿರು ವುದು ಕರ್ನಾಟಕದ ಜನರಿಗೆ ಅನ್ಯಾಯ ಮಾಡ ಬೇಡಿ ಎಂದು ಸಂಸದರು ಹೇಳುತ್ತಲೇ ಇಲ್ಲ. ನಮ್ಮ ಸಂಸದರಿಗೆ ಮೋದಿ ಮತ್ತು ಅಮಿತ್ ಶಾ ಅವರನ್ನು ಕಂಡರೆ ಭಯ. ಅದಕ್ಕೆ ಅವರು ಕೇಳುವುದಿಲ್ಲ.
ಆರ್. ಅಶೋಕ್, ವಿಧಾನಸಭೆ ವಿಪಕ್ಷ ನಾಯಕ
ಕೇಂದ್ರ ಸರ್ಕಾರದ ಈ ಮಧ್ಯಂತರ ಬಜೆಟ್ ಬಡವರು, ಯುವಕರು, ಮಹಿಳೆಯರು ಹಾಗೂ ರೈತರು ಈ ನಾಲ್ಕು ವರ್ಗಗಳು ದೇಶದ ಆಧಾರ ಸ್ಥಂಭಗಳು ಎಂಬ ಪರಿಕಲ್ಪನೆಯೊಂದಿಗೆ ರೂಪಿಸಲಾಗಿದೆ. ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಈ ಬಜೆಟ್ ವೇದಿಕೆ ಕಲ್ಪಿಸಲಿದೆ.
ಭಾರತದ ತಂತ್ರಜ್ಞಾನ ಹಾಗೂ ಆರ್ಥಿಕತೆಯ ಏಳ್ಗೆಗೆ ಇದು ಸಹಕಾರಿಯಾಗಿದೆ. ಪ್ರಧಾನಿ ಮೋದಿ ಅವರ ಆಶಯದಂತೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಹಾಗೂ 2047ರ ವೇಳೆಗೆ ವಿಕಸಿತ ಭಾರತ ನಿರ್ವಿುಸುವ ಪೂರಕ ಬಜೆಟ್ ಮಂಡನೆಯಾಗಿದೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮಂಡನೆಯಾಗುತ್ತಿರುವ ಬಜೆಟ್ ಜನಪ್ರಿಯ ಯೋಜನೆಗಳು, ಕೊಡುಗೆಗಳಿಂದ ಕೂಡಿರುತ್ತದೆ ಎಂಬ ಲೆಕ್ಕಾಚಾರಕ್ಕೆ ವ್ಯತಿರಿಕ್ತವಾಗಿ ಈ ಬಜೆಟ್ ಅಂತಹ ಯಾವುದೇ ಘೊಷಣೆಗಳನ್ನು ಮಾಡಿಲ್ಲ. ಸರ್ವರ ಏಳ್ಗೆಗೆ, ಬಡವರ ಏಳ್ಗೆಗೆ ಮಂಡನೆಯಾಗಿರುವ ಬಜೆಟ್ ಇದಾಗಿದೆ. ಏಳು ಲಕ್ಷ ರೂಪಾಯಿವರೆಗೂ ಆದಾಯ ತೆರಿಗೆ ಇಲ್ಲ. ಒಂದು ಕೋಟಿ ಮನೆಗಳಲ್ಲಿ ಸೌರ ಶಕ್ತಿ ಬಳಕೆಗೆ ಒತ್ತು ನೀಡಲಾಗಿದ್ದು, ಆ ಕುಟುಂಬಗಳಿಗೆ ಶಾಶ್ವತವಾಗಿ 300 ಯೂನಿಟ್ವರೆಗೆ ಉಚಿತ ವಿದ್ಯುತ್ ದೊರೆಯಲಿದೆ. ಇದು ಮೋದಿ ಅವರ ಗ್ಯಾರೆಂಟಿಗೆ ಒಳ್ಳೆ ಉದಾಹರಣೆ. ದೇಶದ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ಯೋಜನೆಯನ್ನು ವಿಸ್ತರಿಸಲಾಗಿದೆ. ಹೆಣ್ಣು ಮಕ್ಕಳಲ್ಲಿ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು 9-15 ವರ್ಷದ ಹೆಣ್ಣುಮಕ್ಕಳಿಗೆ ಉಚಿತ ಲಸಿಕೆ ನೀಡಲು ತೀರ್ಮಾನ ಮಾಡಲಾಗಿದೆ. ಮೀನುಗಾರಿಕೆಗೆ ಪ್ರತ್ಯೇಕ ವಸತಿ ನೀಡಲು ಮುಂದಾಗಲಾಗಿದೆ.
ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದ್ದು ನಾಲ್ಕು ವಿಶೇಷ ರೈಲ್ವೆ ಕಾರಿಡಾರ್, ಏರ್ಪೋರ್ಟ್ ಆಧುನೀಕರಣ, ಸಣ್ಣ ನಗರಗಳಿಗೆ ಮೆಟ್ರೋ ಸೇವೆ, 40,000 ರೈಲು ಬೋಗಿಗಳ ಆಧುನೀಕರಣ, ಹೊಸ ವಂದೇ ಭಾರತ್, ನಮೋ ಭಾರತ್ ರೈಲುಗಳು ಸೇರಿ ಅನೇಕ ದೂರದೃಷ್ಟಿಯುಳ್ಳ ಯೋಜನೆಗಳನ್ನು ರೂಪಿಸಲಾಗಿದೆ. ಪ್ರವಾಸೋದ್ಯಮದಲ್ಲಿ ಪ್ರಪಂಚದ ಗಮನ ಸೆಳೆಯಲು ಒತ್ತು ನೀಡಲಾಗಿದೆ. ಚುನಾವಣೆಗಾಗಿ ಗಿಮಿಕ್ ಪಾಲಿಟಿಕ್ಸ್ ಮಾಡದೆ, ಮುಂದಿನ ಪೀಳಿಗೆಗೆ ಉಪಯುಕ್ತ ಆಗುವಂತ ಬಜೆಟ್ ಮಂಡನೆಯಾಗಿದೆ.
ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ
ಕೃಷಿ ವಲಯ ಮತ್ತು ಕೃಷಿಧಾನ್ಯಗಳ ಬೆಳೆಗೆ ಉತ್ತೇಜನ, ಉದ್ಯೋಗ ಸೃಷ್ಟಿ, ಯುವ ಉದ್ಯಮಿಗಳಿಗೆ ಪೋ›ತ್ಸಾಹ, ಉತ್ಪಾದನೆಗೆ ಕೇಂದ್ರ ಬಜೆಟ್ ಒತ್ತು ನೀಡಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ವಾಗತಿಸಿದ್ದಾರೆ.
ದೇಶೀಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಕಲ್ಪ ಮಾಡಿ ಲಕ್ಷದ್ವೀಪ ಸೇರಿ ರಾಜ್ಯದ ಕರಾವಳಿ ಪ್ರವಾಸೋದ್ಯಮದ ಬೆಳವಣಿಗೆಗೆ ಮನ್ನಣೆ ಹಾಕಲಾಗಿದೆ. ಇದೊಂದು ಜನಪರ, ಅಭಿವೃದ್ಧಿಪರ ಹಾಗೂ ವಿಕಾಸಪೂರಕ ಬಜೆಟ್. ಪ್ರಧಾನಿ ಮೋದಿ ದೂರದೃಷ್ಟಿ ಈ ಆಯವ್ಯಯದಲ್ಲಿ ಅಡಗಿದೆ. ಹಿಂದಿನ ಐದು ವರ್ಷದ ಆಡಳಿತದಲ್ಲಿ ಯಾವ ಯಾವ ವಲಯಕ್ಕೆ ಶಕ್ತಿ ತುಂಬಿದ್ದೇವೆ ಎನ್ನುವ ಮಾಹಿತಿಯನ್ನು ಹಣಕಾಸು ಸಚಿವರು ನೀಡಿದ್ದಾರೆ. ಯುವಜನತೆ ಸೇರಿ ಹಲವು ವರ್ಗಕ್ಕೆ ಹೆಚ್ಚಿನ ಆರ್ಥಿಕ ಶಕ್ತಿ ನೀಡುವ ಭರವಸೆ ನೀಡಿದ್ದಾರೆ. ಉತ್ಪಾದನಾ ಕ್ಷೇತ್ರದ ಓಟಕ್ಕೆ ಇಂಬು ಕೊಡಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮಧ್ಯಂತರ ಬಜೆಟ್ನಲ್ಲಿ ಪ್ರವಾಸೋದ್ಯಮ, ಮೀನುಗಾರಿಕೆಗೆ ಆದ್ಯತೆ ಕೊಟ್ಟಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿ ಮೂಲಕ ಉದ್ಯೋಗ ಸೃಷ್ಟಿಗೆ ಒತ್ತು ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವೆ: ರಾಜ್ಯದ ಅಭಿವೃದ್ಧಿ ಬಗ್ಗೆ ಮುಂದಿನ ದಿನಗಳಲ್ಲಿ ಕೇಂದ್ರ ಬಿಜೆಪಿ ನಾಯಕರ ಜತೆ ಮುಕ್ತವಾಗಿ ಚರ್ಚೆ ಮಾಡುತ್ತೇನೆ. ಇದು ಮಧ್ಯಂತರ ಬಜೆಟ್. ಹಾಗಾಗಿ ಚುನಾವಣೆ ಬಳಿಕ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವೆ. ನನಗೂ ರಾಜ್ಯದ ಸಮಸ್ಯೆಗಳ ಬಗ್ಗೆ ಅರಿವಿದೆ. ಎಲ್ಲಿ ಅನ್ಯಾಯವಾಗಿದೆ ಅದೆಲ್ಲವನ್ನೂ ಸರಿಮಾಡುವ ನಿಟ್ಟಿನಲ್ಲಿ ಕೇಂದ್ರದ ಮನವೊಲಿಸುತ್ತೇವೆ. ಪ್ರಾಮಾಣಿಕವಾಗಿ ರಾಜ್ಯದ ಜನತೆ ಪರವಾಗಿ ಧ್ವನಿ ಎತ್ತುತ್ತೇನೆ. ಅದರ ಜತೆಗೆ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾದಾಗ ಕರ್ನಾಟಕಕ್ಕೆ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ನೆರವು ಸಿಗುತ್ತದೆ ಎನ್ನುವ ನಿರೀಕ್ಷೆ ನನಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.