

ಅಯೋಧ್ಯೆ: ಕೋಟ್ಯಂತರ ಜನರು ಕಾತುರದಿಂದ ಕಾಯುತ್ತಿದ್ದ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಕಾರ್ಯ ಸಂಪನ್ನಗೊಂಡಿದ್ದು, ಬಾಲರಾಮನ ದರ್ಶನ ಪಡೆಯಲು ಭಕ್ತರ ದಂಡೇ ಅಯೋಧ್ಯೆಗೆ ಹರಿದು ಬರುತ್ತಿದೆ. ಇದೀಗ ಪ್ರಾಣ ಪ್ರತಿಷ್ಠಾಪನೆಗೊಂಡ ಬಾಲರಾಮನ ದರ್ಶನಕ್ಕೆ ಲಖನೌದಿಂದ ಅಯೋಧ್ಯೆಗೆ 350 ಮುಸ್ಲಿಂ ಭಕ್ತರು 6 ದಿನಗಳ ಪಾದಯಾತ್ರೆ ನಡೆಸಿರುವುದು ಎಲ್ಲರ ಗಮನ ಸೆಳೆದಿದೆ.
ರಾಷ್ಟ್ರೀಯ ಸ್ವಯಂ ಸೇವ ಸಂಘಟನೆಯ (RSS) ಮುಸ್ಲಿಂ ರಾಷ್ಟ್ರೀಯ ಮಂಚ್ (MRM) ನೇತೃತ್ವದಲ್ಲಿ ಜ. 25ರಂದು ಈ ಯಾತ್ರೆ ಆರಂಭಗೊಂಡಿತ್ತು ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮುಸ್ಲಿಂ ರಾಷ್ಟ್ರೀಯ ಮಂಚ್ನ ವಕ್ತಾರ ಶಾಹಿದ್ ಸಯೀದ್, ಲಖನೌನಿಂದ ಅಯೋಧ್ಯೆಗೆ ಸುಮಾರು 150 ಕಿಲೋಮೀಟರ್ ಅಂತರವಿದ್ದು, ಪ್ರತಿದಿನ ಜೈ ಶ್ರೀರಾಮ್ ಘೋಷಣೆಯನ್ನು ಕೂಗುತ್ತ 25 ಕಿಲೋಮೀಟರ್ ನಡೆಯುತ್ತಿದ್ದೆವು. ಬರಿಗಾಲಲ್ಲಿ ನಾವು ಲಖನೌನಿಂದ ಅಯೋಧ್ಯೆಗೆ ಪಾದಯಾತ್ರೆ ಮಾಡಿದ್ದು, ಬಾಲರಾಮನಿಗೆ ವಿಶೇಷ ಪೂಜೆ ಸಲ್ಲಿಸಿದ್ದೇವೆ.
ಪಾದಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರು ಬಾಲರಾಮನ ದರ್ಶನದ ಬಳಿಕ ಇಮಾನ್ ಎ ಹಿಂದ್ ರಾಮ್ ಎಂದು ಬಣ್ಣಿಸಿದ್ದಾರೆ. ಈ ಯಾತ್ರೆಯು ಏಕತೆ, ಭಾವೈಕ್ಯತೆ, ಸಾರ್ವಭೌಮತ್ವ ಹಾಗೂ ಸಾಮರಸ್ಯವನ್ನು ಸಾರಿದೆ. ಭಗವಾನ್ ರಾಮನು ನಮ್ಮೆಲ್ಲರ ಪೂರ್ವಜ ದೇಶ ಪ್ರೇಮ ಹಾಗೂ ಮನುಷ್ಯತ್ವ ಎಂಬುದು ಧರ್ಮ, ಜಾತಿ ಹಾಗೂ ವರ್ಣಗಳಿಗೂ ಮೀರಿದ್ದು. ಮತ್ತೊಬ್ಬರ ಟೀಕೆ, ಅಪಹಾಸ್ಯ ಅಥವಾ ತಿರಸ್ಕಾರವನ್ನು ಯಾವ ಧರ್ಮವೂ ಬೋಧಿಸುವುದಿಲ್ಲ ಎಂದು ಮುಸ್ಲಿಂ ರಾಷ್ಟ್ರೀಯ ಮಂಚ್ನ ವಕ್ತಾರ ಶಾಹಿದ್ ಸಯೀದ್ ಅಭಿಪ್ರಾಯಪಟ್ಟಿದ್ದಾರೆ.