ಚಕ್ರತೀರ್ಥ ಕೈಬಿಟ್ಟ ಪಾಠ ವಾಪಸ್; ಪಠ್ಯ ಪರಿಷ್ಕರಣೆ ವರದಿ ಸಲ್ಲಿಕೆ

Reading
Published on

ಬೆಂಗಳೂರು: ಪ್ರಗತಿಪರ ಸಾಹಿತಗಳಾದ ಗಿರೀಶ್ ಕಾರ್ನಾಡ್, ಪಿ.ಲಂಕೇಶ್, ದೇವನೂರು ಮಹಾದೇವ, ಮುಡ್ನಾಕೂಡು ಚಿನ್ನಸ್ವಾಮಿ, ನಾಗೇಶ್ ಹೆಗಡೆ ಸೇರಿ ಹಲವರ ಸಾಹಿತ್ಯ ಕೃತಿಗಳನ್ನು 2024-25ನೇ ಶೈಕ್ಷಣಿಕ ವರ್ಷದಿಂದಲೇ ಶಾಲಾ ಪಠ್ಯಪುಸ್ತಕಗಳಲ್ಲಿ ಮರು ಪರಿಚಯಿಸಲು ಸರ್ಕಾರ ತೀರ್ವನಿಸಿದೆ.

ನಿವೃತ್ತ ಪ್ರಾಧ್ಯಾಪಕ ಪೊ›.ಮಂಜುನಾಥ. ಜಿ.ಹೆಗಡೆ (ಎಂ.ಜಿ.ಹೆಗಡೆ) ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಕೈಬಿಟ್ಟಿದ್ದ ಕನ್ನಡದ ವಿವಿಧ ಪ್ರಗತಿಪರ ಲೇಖಕರ ಕೃತಿಗಳನ್ನು ಪಠ್ಯದಲ್ಲಿ ಮರು ಪರಿಚಯಿಸಲು ನಿರ್ಧರಿಸಿದೆ.

ಗಿರೀಶ್ ಕಾರ್ನಾಡರ ‘ಅಧಿಕಾರ’, ಪಿ.ಲಂಕೇಶ್ ಅವರ ‘ಮೃಗ ಮತ್ತು ಸುಂದರಿ’, ದೇವನೂರು ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’, ಮುಡ್ನಾಕೂಡು ಚಿನ್ನಸ್ವಾಮಿ ಅವರ ‘ಸಮುದ್ರ ಚುಂಬನ’, ಮುಂತಾದ ಲೇಖಕರ ಗದ್ಯ ಮತ್ತು ಕವನಗಳನ್ನು ಮತ್ತೆ ಪರಿಚಯಿಸಲು ಸಮಿತಿ ನಿರ್ಧರಿಸಿದೆ.

ಚಂದ್ರಶೇಖರ ಕಂಬಾರರ ’ಸೀಮೆ’, ಅಕ್ಕಮಹಾದೇವಿಯವರ ’ವಚನಗಳು’ ಮತ್ತು 8 ರಿಂದ 10ನೇ ತರಗತಿವರೆಗಿನ ಭಾಷೆಯ ಕನ್ನಡ ಪಠ್ಯ ಪುಸ್ತಕಗಳಲ್ಲಿ ನಾಗೇಶ ಹೆಗಡೆಯವರ ಲೇಖನಗಳನ್ನು ಸೇರಿಸಲಾಗಿದೆ. ದೇವಿದಾಸರ ‘ಚಕ್ರಗ್ರಹಣ’, ಮರಿಯಪ್ಪ ಭಟ್ಟರ ‘ನಮ್ಮ ಭಾಷೆ’, ಎ.ಎನ್.ಮೂರ್ತಿ ರಾವ್ ಅವರ ‘ವ್ಯಾಘ್ರ ಗೀತೆ’ ಹೊಸದಾಗಿ ಸೇರ್ಪಡೆಗೊಂಡವು. 1 ರಿಂದ 5ನೇ ತರಗತಿಯ ಕನ್ನಡ ಭಾಷೆಯಲ್ಲಿ ಕೆ.ವಿ. ತಿರುಮಲೇಶ್ ಮತ್ತು ವಿ.ಜಿ. ಭಟ್ ಅವರ ಮಕ್ಕಳ ಕವಿತೆ ಸೇರಿಸಲಾಗಿದೆ.

ಯಥಾವತ್ ಮುದ್ರಣಕ್ಕೆ: ನಿವೃತ್ತ ಪ್ರಾಧ್ಯಾಪಕ ಡಾ. ಮಂಜುನಾಥ ಜಿ.ಹೆಗಡೆ ನೇತೃತ್ವದ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯ ಪರಿಷ್ಕೃತ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, 2024-25ನೇ ಸಾಲಿನಿಂದ ಹೊಸ ಪಠ್ಯಪುಸ್ತಕವನ್ನು ಸರ್ಕಾರ ಮುದ್ರಿಸಿ ಶಾಲೆಗೆ ಹಂಚಿಕೆ ಮಾಡಲು ನಿರ್ಧರಿಸಿದೆ. 1 ರಿಂದ 10ನೇ ತರಗತಿ ಕನ್ನಡ ಪ್ರಥಮ ಮತ್ತು ದ್ವಿತೀಯ ಭಾಷೆ, 9-10ನೇ ತರಗತಿಯ ಕನ್ನಡ ತೃತೀಯ ಭಾಷೆ, 6-10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ಪರಿಷ್ಕರಣೆ ಮಾಡಲಾಗಿದೆ. ಈ ವರದಿಯನ್ನು ಒಪ್ಪಿಕೊಂಡಿರುವ ಶಿಕ್ಷಣ ಇಲಾಖೆಯು 2024-25ನೇ ಸಾಲಿನಿಂದ ಜಾರಿಗೆ ತರಲು ನಿರ್ಧರಿಸಿದೆ. ಈ ಪರಿಷ್ಕೃತ ಪಠ್ಯವನ್ನು ಯಥಾವತ್ ಮುದ್ರಣಕ್ಕೆ ಕಳುಹಿಸಿದೆ.

114 ಪಠ್ಯಗಳ ಪರಿಷ್ಕರಣೆ: 6-10ನೇ ತರಗತಿಗಳ ಸಮಾಜ ವಿಜ್ಞಾನ ವಿಷಯದ 7 ಮಾಧ್ಯಮಗಳ 70 ಪರಿಷ್ಕೃತ ಪಠ್ಯಪುಸ್ತಕವನ್ನು ಹಾಗೂ 1-10ನೇ ತರಗತಿಗಳ ಕನ್ನಡ ಭಾಷಾ ವಿಷಯದ 44 ಪರಿಷ್ಕೃತ ಪಠ್ಯಪುಸ್ತಕ ಸೇರಿ ಒಟ್ಟು 114 ಪಠ್ಯಪುಸ್ತಕವನ್ನು ಜಾರಿಗೆ ತರಲು ಅನುಮತಿ ನೀಡಿದೆ.

ಕನ್ನಡ ಭಾಷೆ ಮತ್ತು ಸಮಾಜ ವಿಜ್ಞಾನ ವಿಷಯದ ಪರಿಷ್ಕೃತ ಪಠ್ಯಪುಸ್ತಕಗಳಲ್ಲಿರುವ ಎಲ್ಲ ವಿಷಯಾಂಶಗಳು, ವ್ಯಾಕರಣಾಂಶಗಳು, ಲೇಖಕರು, ಕವಿಗಳು, ಚಿತ್ರಗಳು, ಭೂಪಟಗಳು, ನಕ್ಷೆಗಳು, ಅಂಕಿ-ಅಂಶಗಳು ಹಾಗೂ ಆಧಾರಗಳಿಗೆ ಸಮಿತಿಯು ಸಂಯೋಜಕರು, ಅಧ್ಯಕ್ಷರು, ಹಾಗೂ ಸದಸ್ಯರು ಜವಾಬ್ದಾರರಾಗಿದ್ದು, ವಿಷಯಗಳಿಗೆ ಮುಂದಿನ ದಿನಗಳಲ್ಲಿ ಆಕ್ಷೇಪಣೆ ಬಂದಲ್ಲಿ ಸಮಿತಿಯ ಸಂಯೋಜಕರಾದ ಮಂಜುನಾಥ ಹೆಗಡೆ ಅವರೇ ಉತ್ತರಿಸುವ ಜವಾಬ್ದಾರಿ ಹೊಂದಿರುತ್ತಾರೆಂದು ಸ್ಪಷ್ಟವಾಗಿ ಶಿಕ್ಷಣ ಇಲಾಖೆ ಆದೇಶದಲ್ಲಿ ತಿಳಿಸಿದೆ.

ಸಮಾಜ ವಿಜ್ಞಾನ ಪರಿಷ್ಕೃತ ಪಠ್ಯಪುಸ್ತಕಗಳು, ಸಂವಿಧಾನದ ಪ್ರಸ್ತಾವನೆ, ಲಿಂಗ ಸೂಕ್ಷ್ಮತೆ, ಮಕ್ಕಳ ಹಕ್ಕುಗಳ ಕುರಿತ ಮಾಹಿತಿ, ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಮೌಲ್ಯಗಳು, ವೈಜ್ಞಾನಿಕ ಮನೋಭಾವನೆಯನ್ನು ಗಮನದಲ್ಲಿಟ್ಟುಕೊಂಡು ಪರಿಷ್ಕರಣೆ ಮಾಡಿರುವುದಾಗಿ ಶಿಕ್ಷಣ ಇಲಾಖೆ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಪರಿಷ್ಕರಣೆ ಪ್ರಮುಖ ಅಂಶಗಳು: - ಕಂಬಾರ-‘ಸೀಮೆ’, ಕಾರ್ನಾಡ್- ‘ಅಧಿಕಾರ’, ದೇವಿದಾಸ- ‘ಚಕ್ರಗ್ರಹಣ’, ಮರಿಯಪ್ಪ ಭಟ್ಟ- ‘ನಮ್ಮ ಭಾಷೆ’, ಎ.ಎನ್.ಮೂರ್ತಿರಾವ್- ‘ವ್ಯಾಘ್ರ ಗೀತೆ’, ದೇವನೂರು ಮಹಾದೇವ- ‘ಎದೆಗೆ ಬಿದ್ದ ಅಕ್ಷರ’, ಅಕ್ಕಮಹಾದೇವಿ- ‘ವಚನಗಳು’ ಸೇರ್ಪಡೆ 9-10ನೇ ತರಗತಿ ಕನ್ನಡ: ಕೈಬಿಟ್ಟಿದ್ದ ನಾಗೇಶ್ ಹೆಗಡೆ, ಪಿ.ಲಂಕೇಶ್, ಶ್ರೀನಿವಾಸ ಉಡುಪ ಅವರ ಕವನ ಹೊಸದಾಗಿ ಸೇರ್ಪಡೆ

ಪ್ರಮುಖಾಂಶಗಳೇನು?

  • 6ನೇ ತರಗತಿ ಸಮಾಜ ವಿಜ್ಞಾನ: ಪೌರ ಮತ್ತು ಪೌರತ್ವ ಪಾಠವನ್ನು ಲಿಂಗ ಸಮಾನತೆಯ ನೆಲೆಯಲ್ಲಿ ಪರಿಷ್ಕರಿಸಲಾಗಿದೆ
  • 7ನೇ ತರಗತಿ ಸಮಾಜ ವಿಜ್ಞಾನ: ವಿಶ್ವಗುರು ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕ ಎಂದು ದಾಖಲಿಸಿದೆ
  • 6 ಮತ್ತು 7ನೇ ತರಗತಿ: ಕಯ್ಯಾರ ಕಿಇಣ್ಣ ರೈ ಹಾಗೂ ಕವಿ ಎಚ್.ಎಸ್. ಶಿವಪ್ರಕಾಶ್ ಅವರ ಕವನಗಳನ್ನು ಹೊಸದಾಗಿ ಸೇರ್ಪಡೆ
  • 8ನೇ ತರಗತಿ ಇತಿಹಾಸ: ಸನಾತನ ಧರ್ಮ ಎಂಬ ಅಧ್ಯಾಯದಲ್ಲಿ ಕೆಲವು ಅಂಶಗಳನ್ನು ಸೇರಿಸಿ ವ್ಯವಸ್ಥಿತವಾಗಿ ನಿರೂಪಣೆ ಮಾಡಿದೆ
  • 9ನೇ ತರಗತಿ ಇತಿಹಾಸ: ಭಕ್ತಿಪಂಥ ಅಧ್ಯಾಯದಲ್ಲಿ ಕನಕದಾಸರು, ಪುರಂದರದಾಸರು, ಸಂತ ಶಿಶುನಾಳ ಶರೀಫರ ಮಾಹಿತಿ ಸೇರ್ಪಡೆ
  • 10ನೇ ತರಗತಿ ಇತಿಹಾಸ: ಸಾರ್ವಜನಿಕ ಆಡಳಿತ ಎಂಬ ಹೊಸ ಅಧ್ಯಾಯ ಸೇರ್ಪಡೆ.
  • 1-5ನೇ ತರಗತಿ ಕನ್ನಡ: ಕೆ.ವಿ. ತಿರುಮಲೇಶ್, ವಿ.ಜಿ. ಭಟ್ಟರ ಮಕ್ಕಳ ಕವನ ಸೇರ್ಪಡೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net