

ಬೆಂಗಳೂರು: ಚಿತ್ರನಟರೊಬ್ಬರ ವಿಷಯ ಇಬ್ಬರು ರಾಜಕಾರಣಿಗಳ ನಡುವಿನ ಟೀಕೆ ಪ್ರತಿಕ್ರಿಯೆಗೆ ವೇದಿಕೆಯಾಗಿದೆ. ಒಂದು ಸಣ್ಣ ಫೋಟೋ ಸುರೇಶ್ ವರ್ಸಸ್ ಸುರೇಶ್ ಎಂಬಂಥ ವಾತಾವರಣ ಸೃಷ್ಟಿಸಿದೆ.
ರಾಜ್ಯದ ತರಗತಿಯೊಂದರ ಪುಸ್ತಕದಲ್ಲಿ 'ಅಂಚೆಯಣ್ಣ' ಎಂಬ ಶೀರ್ಷಿಕೆಗೆ ಮಲಯಾಳಂ ಚಲನಚಿತ್ರ ನಟರ ಫೋಟೋ ಹಾಕಿರುವುದನ್ನು ಬಿಜೆಪಿ ಸರ್ಕಾರದ ಕಾರ್ಯ ಎಂದು ಬಣ್ಣಿಸಿ, ಇದು ಯಾರ ನಿರ್ದೇಶನದಲ್ಲಿ ಮಾಡಿರುವುದು ಎಂದು ಕೇಳಿ ಸಂಸದ ಡಿ.ಕೆ. ಸುರೇಶ್ ವ್ಯಂಗ್ಯವಾಡಿದ್ದರು. ಅದಕ್ಕೆ ಮಾಜಿ ಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್ ಪ್ರತಿಕ್ರಿಯಿಸಿ, ಡಿ.ಕೆ.ಸುರೇಶ್ ಅವರನ್ನು ಮಾತಿನಲ್ಲೇ ಕುಟುಕಿದ್ದಾರೆ.
ಸಂಸದ ಡಿ.ಕೆ.ಸುರೇಶ್ ಅವರ ಅವಸರದ ಆರೋಪದಲ್ಲಿ ಯಾವುದೇ ಸತ್ಯವಿಲ್ಲ. ಇಂದಿನ ಮಾಧ್ಯಮಗಳಲ್ಲಿ ವರದಿಯಾಗಿರುವ ಸಂಸದ ಸುರೇಶ್ ಅವರ ಆರೋಪ ಹಾಗೂ ಅವರು ಸ್ಪಷ್ಟೀಕರಣ ನಿರೀಕ್ಷಿಸಿರುವುದಕ್ಕೆ ಎಸ್.ಸುರೇಶ್ಕುಮಾರ್ ಪ್ರತಿಕ್ರಿಯೆ ನೀಡುವ ಮೂಲಕ ಉತ್ತರ ಕೊಟ್ಟಿದ್ದಾರೆ.
ಡಿ.ಕೆ.ಸುರೇಶ್ರವರೇ.. ಅಷ್ಟು ಧಾವಂತ ಬೇಡ. ಅವಸರ ವಿವೇಚನೆ ಕಸಿದುಕೊಳ್ಳುತ್ತದೆ. ನಿಮ್ಮ ಗ್ರಹಿಕೆ ಸಂಪೂರ್ಣವಾಗಿ ತಪ್ಪು. ಇದು ಖಂಡಿತ ನಮ್ಮ ರಾಜ್ಯದ ಶಿಕ್ಷಣ ಇಲಾಖೆ ಪ್ರಕಟಿಸಿರುವ ಅಧಿಕೃತ ಪಠ್ಯ ಪುಸ್ತಕವಲ್ಲ. ಇದೊಂದು ಖಾಸಗಿ ಪ್ರಕಾಶಿತ ಪುಸ್ತಕ. (ಇದರ ಫೋಟೋ ಲಗತ್ತಿಸಿದ್ದೇನೆ). ರಾಜ್ಯ ಪಠ್ಯಕ್ರಮಕ್ಕೆ ಯಾವುದೇ ಸಂಬಂಧವಿಲ್ಲದ, ಯಾವುದೋ ಖಾಸಗಿ ಸಂಸ್ಥೆಯವರು ಮುದ್ರಿಸಿದ ಪುಸ್ತಕವೊಂದರಲ್ಲಿ ಮಲೆಯಾಳಿ ನಟನ ಭಾವಚಿತ್ರ ತೋರಿಸಿ ಅದನ್ನೂ ಬಿಜೆಪಿ ಸರ್ಕಾರದ ಶಾಲಾ ಪಠ್ಯದ ಕೇಸರೀಕರಣವೆಂದು ಬಣ್ಣಿಸುವ ನಿಮ್ಮ ಪ್ರಯತ್ನಕ್ಕೆ ಅರ್ಥವಿಲ್ಲ. ದಾರಿ ತಪ್ಪಿಸುವ ಕೆಲಸವೆಂದರೆ ಇದೇ ಇರಬೇಕು ಅಥವಾ ನೀವೇ ದಾರಿ ತಪ್ಪಿರಬೇಕು! ಎಂದು ಸುರೇಶ್ಕುಮಾರ್ ಟೀಕಿಸಿದ್ದಾರೆ.