ಕರೊನಾದಿಂದ ತತ್ತರಿಸಿಹೋಗಿವೆ ಭಯೋತ್ಪಾದಕ ಶಿಬಿರಗಳು

Terrorist vvani
Published on

ಶ್ರೀನಗರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರದೇಶದಲ್ಲಿರುವ ಭಯೋತ್ಪಾದಕರ ಕ್ಯಾಂಪ್‌ಗಳಿಗೂ ಕರೊನಾ ವೈರಸ್ ತೀವ್ರ ಪ್ರಮಾಣದಲ್ಲಿ ಹಬ್ಬಿದೆ.

ಕಾಶ್ಮೀರದಲ್ಲಿರುವ ತನ್ನ ಕುಟುಂಬಕ್ಕೆ ಭಯೋತ್ಪಾದಕನೊಬ್ಬ ಮಾಡಿದ್ದ ದೂರವಾಣಿ ಕರೆಯಿಂದ ಈ ಅಂಶ ಬೆಳಕಿಗೆ ಬಂದಿದೆ. ಜಮ್ಮು-ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಈ ಸಂಭಾಷಣೆಯ ಆಡಿಯೋ ಬಿಡುಗಡೆ ಮಾಡಿದ್ದಾರೆ.

ತನ್ನ ಜತೆಯಲ್ಲಿರುವ ಕಾಶ್ಮೀರ ಮೂಲದ ಕೆಲವರಿಗೆ ವೈರಸ್ ತಗುಲಿದ್ದು, ಅದರಲ್ಲಿ ಕೆಲವರು ಸಾಯುತ್ತಾರೆ. ಆದರೆ ಇಲ್ಲಿ ಯಾರೂ ಅವರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆ ಭಯೋತ್ಪಾದಕ ಹೇಳಿರುವುದು ಈ ಸಂಭಾಷಣೆಯಲ್ಲಿದೆ.

ಆ ಅಕ್ರಮ ಶಿಬಿರಗಳಲ್ಲಿ ತರಬೇತಿ ಪಡೆಯುತ್ತಿರುವ ಕೆಲವು ಉಗ್ರಗಾಮಿಗಳು ಈಗಾಗಲೇ ಕರೊನಾ ವೈರಸ್‌ನಿಂದ ಸತ್ತಿರುವ ಸಾಧ್ಯತೆಯೂ ಇದೆ. ಸೋಂಕಿತ ಉಗ್ರರು ಕಣಿವೆಯೊಳಗೆ ನುಸುಳಿ ಮಾರಕ ಕರೊನಾವನ್ನು ಪಸರಿಸುವ ಭೀತಿಯೂ ಇದೆ ಎಂದು ಸಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ.

ಸೋಂಕಿತ ಭಯೋತ್ಪಾದಕರನ್ನು ಕಣಿವೆಯೊಳಗೆ ನುಗ್ಗಿಸಿ ಕಣಿವೆಯಲ್ಲಿ ಸೋಂಕು ಪಸರಿಸಲು ಪಾಕಿಸ್ತಾನ ಸಂಚು ರೂಪಿಸಿದೆ ಎಂದು ಈ ಹಿಂದೆ ಗುಪ್ತಚರ ದಳಗಳೂ ಎಚ್ಚರಿಕೆ ನೀಡಿದ್ದವು.

ಎಲ್‌ಒಸಿ ಉದ್ದಕ್ಕೂ ಪಾಕಿಸ್ತಾನ ಸುಮಾರು 40 ಭಯೋತ್ಪಾದಕ ಕ್ಯಾಂಪ್‌ಗಳು ಮತ್ತು ಲಾಂಚ್‌ಪ್ಯಾಡ್‌ಗಳನ್ನು ಸಕ್ರಿಯಗೊಳಿಸಿದ್ದು, ಜಮ್ಮು- ಕಾಶ್ಮೀರಕ್ಕೆ ಸಾಧ್ಯವಾದಷ್ಟು ಹೆಚ್ಚು ಉಗ್ರರನ್ನು ಒಳನುಸುಳಿಸಲು ಕಳೆದ ಅಕ್ಟೋಬರ್‌ನಿಂದ ಪ್ರಯತ್ನಿಸುತ್ತಿದೆ ಎಂದು ದಿಲ್ಬಾಗ್ ಸಿಂಗ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net