

| ಕೀರ್ತಿನಾರಾಯಣ ಸಿ. ಬೆಂಗಳೂರು
ಕರೊನಾದಿಂದಾಗಿ ಇಡೀ ವಿಶ್ವ ಸ್ತಬ್ಧವಾಗಿರುವ ಸಂದರ್ಭದಲ್ಲಿ ಭಯೋತ್ಪಾದನಾ ಸಂಘಟನೆಗಳು ಆನ್ಲೈನ್ ಮೂಲಕ ಹೊಸ ಸದಸ್ಯರ ನೇಮಕ ಪ್ರಕ್ರಿಯೆಯನ್ನು ಸದ್ದಿಲ್ಲದಂತೆ ಮುಂದುವರಿಸಿರುವ ಆಘಾತಕಾರಿ ಮಾಹಿತಿ ಬಯಲಾಗಿದೆ. ಮದ್ದುಗುಂಡಿನ ಸದ್ದು ನಿಲ್ಲಿಸಿ ಮೌನ ಕಾರ್ಯಾಚರಣೆ ಮೂಲಕವೇ ಉಗ್ರರು ಸಂಘಟನೆಯ ಶಕ್ತಿ ಬಲಪಡಿಸುತ್ತಿರುವ ಸಂಗತಿಯನ್ನು ಇತ್ತೀಚೆಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಆಯೋಜಿಸಿದ್ದ ಬ್ರಿಕ್ಸ್ ಸೆಮಿನಾರ್ ಹೊರಗೆಡವಿದೆ. ‘ಉಗ್ರರಿಂದ ಇಂಟರ್ನೆಟ್ ದುರ್ಬಳಕೆ’ ವಿಚಾರವಾಗಿ ನಡೆದ ಸೆಮಿನಾರ್ನಲ್ಲಿ ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾದ ಭದ್ರತಾ ಅಧಿಕಾರಿಗಳು ಭಾಗಿಯಾಗಿದ್ದರು. ಈ ವೇಳೆ ನಡೆದ ವಿಚಾರ ವಿನಿಮಯದಲ್ಲಿ ಉಗ್ರರ ರಹಸ್ಯ ನೇಮಕಾತಿ ಪ್ರಕ್ರಿಯೆ ಜಾಡು ಬಯಲಾಗಿದೆ.
2019-20ರ ಗ್ಲೋಬಲ್ ಟೆರರಿಸಂ ಇಂಡೆಕ್ಸ್ (ಜಿಟಿಐ) ವರದಿ ಪ್ರಕಾರ ಉಗ್ರ ದಾಳಿ ಹಾಗೂ ಅದರಿಂದಾದ ಸಾವಿನ ಸಂಖ್ಯೆ ಸತತ 5 ವರ್ಷಗಳಿಂದ ಭಾರತ ಸೇರಿ ವಿಶ್ವದ 103 ರಾಷ್ಟ್ರಗಳಲ್ಲಿ ಕಡಿಮೆಯಾಗಿದೆ. 2019ರಲ್ಲಿ 63 ದೇಶಗಳಲ್ಲಿ ಕನಿಷ್ಠ ಒಬ್ಬರು ಭಯೋತ್ಪಾದನಾ ದಾಳಿಗೆ ತುತ್ತಾಗಿದ್ದಾರೆ. ಇದು 2013ರ ನಂತರ ದಾಖಲಾದ ಅತೀ ಕಡಿಮೆ ಸಾವಿನ ಪ್ರಮಾಣವೆಂದು ಉಲ್ಲೇಖಿಸಲಾಗಿದೆ.
3 ರಾಜ್ಯಗಳಲ್ಲಿ ಸಕ್ರಿಯ: 2021ರ ಮಾ.15ರಂದು ಎನ್ಐಎ ಅಧಿಕಾರಿಗಳ ತಂಡ, ಕರ್ನಾಟಕ, ಕೇರಳ ಹಾಗೂ ದೆಹಲಿಯ 11 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲಿಸಿದಾಗ ಶಂಕಿತ ಉಗ್ರ ಮಹಮದ್ ಅಮೀನ್ ಅಲಿಯಾಸ್ ಅಬು ಯಾಯಾ, ಸಾಮಾಜಿಕ ಜಾಲತಾಣದಲ್ಲಿ ಹಿಂಸಾತ್ಮಕ ಜಿಹಾದಿ ಸಂದೇಶ ಹರಿಬಿಟ್ಟು ಐಸಿಸ್ಗೆ ಯುವಕರ ನೇಮಕಾತಿ ಮಾಡುತ್ತಿರುವ ಸಂಗತಿ ದೃಢಪಟ್ಟಿತ್ತು. ಟೆಲಿಗ್ರಾಂ, ಹೂಪ್ ಮತ್ತು ಇನ್ಸ್ಟಾಗ್ರಾಂನಲ್ಲಿ ಖಾತೆ ತೆರೆದು ಜಿಹಾದಿ ತತ್ವಗಳನ್ನು ಬೋಧಿಸಿ ಯುವಕರನ್ನು ಐಸಿಸ್ನತ್ತ ಸೆಳೆಯುತ್ತಿದ್ದ. ಉಗ್ರವಾದದ ಬಗ್ಗೆ ಚಾಟ್ ಮಾಡಿರುವ ಕುರಿತು ಎನ್ಐಎಗೆ ಸಾಕ್ಷ್ಯ ಸಿಕ್ಕಿದೆ. 7 ಶಂಕಿತರು ಹಾಗೂ ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಿಸಿ ಬಂಧನ ಕಾರ್ಯಾಚರಣೆ ಮುಂದುವರಿಸಿದೆ.